ಬೆಂಗಳೂರು : ಬೆಂಗಳೂರಿನ ಆನೇಕಲ್ ಬಳಿಯ ಸೂರ್ಯನಗರದಲ್ಲಿ ಬೃಹತ್ ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಂಗಣಕ್ಕೆ ಇಂದು ಸಿಎಂ ಸಿದ್ದರಾಮಯ್ಯ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಕರ್ನಾಟಕ ಗೃಹಮಂಡಳಿ (KHB) ವತಿಯಿಂದ ಅಭಿವೃದ್ಧಿಪಡಿಸಲಾಗಿರುವ ಸೂರ್ಯನಗರ 4ನೇ ಹಂತದ ಬಡಾವಣೆಯಲ್ಲಿ ಈ ಅತ್ಯಾಧುನಿಕ ಕ್ರೀಡಾಂಗಣ ತಲೆಯೆತ್ತಲಿದೆ. ನೂರಾರು ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಾಣವಾಗಲಿರುವ ಈ ಕ್ರೀಡಾಂಗಣವು ಬರೋಬ್ಬರಿ 80,000 ಆಸನ ಸಾಮರ್ಥ್ಯವನ್ನು ಹೊಂದಿರಲಿದೆ.
ಇಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಂದ ಬೆಳಗ್ಗೆ 11 ಗಂಟೆಗೆ ಶಂಕುಸ್ಥಾಪನೆ ನೆರವೇರಲಿದೆ. ಉಪ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ವಸತಿ ಸಚಿವ ಜಮೀರ್ ಅಹ್ಮದ್ ಖಾನ್, ಸಾರಿಗೆ ಸಚಿವ ರಾಮಲಿಂಗಾರೆಡ್ಡಿ, ಕರ್ನಾಟಕ ಗೃಹ ಮಂಡಳಿ ಅಧ್ಯಕ್ಷ ಶಿವಲಿಂಗೇಗೌಡ ಸೇರಿ ಇನ್ನಿತರ ಗಣ್ಯರು ಭಾಗಿಯಾಗಲಿದ್ದಾರೆ.
ವಿಶೇಷತೆ ಏನು?
ಸ್ಟೇಡಿಯಂನ ಆಸನಗಳ ವಿನ್ಯಾಸವನ್ನು ಅಮೆರಿಕದ ಪ್ರಸಿದ್ಧ ಟೆಕ್ಸಾಸ್‌ನ ಎಟಿ ಆ್ಯಂಡ್ ಟಿ ಸ್ಟೇಡಿಯಂ ಹಾಗೂ ಲ್ಯೂಕಾಸ್ ಆಯಿಲ್ ಸ್ಟೇಡಿಯಂ ಮಾದರಿಯಿಂದ ಪ್ರೇರಣೆ ಪಡೆದು ರೂಪಿಸಲಾಗುತ್ತಿದೆ. ಸ್ಟೇಡಿಯಂನ ಮುಂಭಾಗದ ವಿನ್ಯಾಸ ಕರ್ನಾಟಕದ ಸಾಂಸ್ಕೃತಿಕ ಪರಂಪರೆ ಹಾಗೂ ಕ್ರಿಕೆಟ್ ಇತಿಹಾಸ ಬಿಂಬಿಸಲಿದೆ. ಜೊತೆಗೆ ದಿಗ್ಗಜ ಆಟಗಾರರ ನೆನಪಿಗಾಗಿ ‘ಹಾಲ್ ಆಫ್ ಫೇಮ್’ ಕೂಡ ಇರಲಿದೆ.
ಎರಡನೇ ಹಂತದಲ್ಲಿ ಒಳಾಂಗಣ ಕ್ರೀಡಾಂಗಣ, ಈಜುಕೊಳ ಮತ್ತು ಬೃಹತ್ ಸಮಾವೇಶ ಸಭಾಂಗಣ ನಿರ್ಮಾಣವಾಗಲಿದ್ದು, ಇದನ್ನು ಕೆಎಚ್‌ಬಿ ಸೂರ್ಯ ಕ್ರೀಡಾಗ್ರಾಮ ಎಂದು ಕರೆಯಲಾಗುತ್ತದೆ. ಈ ಸ್ಟೇಡಿಯಂ ಪೂರ್ಣಗೊಂಡರೆ, ಅಹಮದಾಬಾದ್‌ನ ಮೋದಿ ಸ್ಟೇಡಿಯಂ ನಂತರ ಭಾರತದ ಎರಡನೇ ಅತಿ ದೊಡ್ಡ ಹಾಗೂ ವಿಶ್ವದ ಪ್ರಮುಖ ಬೃಹತ್ ಕ್ರಿಕೆಟ್ ಕ್ರೀಡಾಂಗಣಗಳ ಪಟ್ಟಿಗೆ ಸೇರಲಿದೆ. ಬೊಮ್ಮಸಂದ್ರ ಮತ್ತು ಎಲೆಕ್ಟ್ರಾನಿಕ್ ಸಿಟಿ ಐಟಿ ಕಾರಿಡಾರ್‌ಗೆ ಹತ್ತಿರವಿರುವುದರಿಂದ ಇದು ಬೆಂಗಳೂರಿನ ಕ್ರೀಡಾ ಮೂಲಸೌಕರ್ಯಕ್ಕೆ ಹೊಸ ದಿಕ್ಸೂಚಿಯಾಗಲಿದೆ.
ಇದನ್ನೂ ಓದಿ : ಜೂ.20ಕ್ಕೆ ಮಂತ್ರಾಲಯದಲ್ಲೇ “ರಾಯರ ದರ್ಶನ” ಆಲ್ಬಂ ಸಾಂಗ್ ರಿಲೀಸ್!








