ಬೆಂಗಳೂರು : ಕರ್ನಾಟಕವು ದೇಶದಾದ್ಯಂತ ಅತಿ ಹೆಚ್ಚು ಭ್ರಷ್ಟಾಚಾರ ಪ್ರಕರಣಗಳು ದಾಖಲಾದ ರಾಜ್ಯಗಳ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದೆ.
2024ರಲ್ಲಿ ಮಹಾರಾಷ್ಟ್ರದಲ್ಲಿ 721, ತಮಿಳುನಾಡಿನಲ್ಲಿ 364 ಭ್ರಷ್ಟಾಚಾರದ ಪ್ರಕರಣಗಳು ದಾಖಲಾಗಿದ್ದರೆ, ಕರ್ನಾಟಕದಲ್ಲಿ 334 ಪ್ರಕರಣಗಳು ದಾಖಲಾಗಿವೆ. ಇನ್ನು ಅಕ್ರಮ ಆಸ್ತಿ (ಡಿಎ) ಪ್ರಕರಣಗಳಲ್ಲಿ ಕರ್ನಾಟಕವು ಎಲ್ಲರಿಗಿಂತ ಮುಂದಿದೆ. 75 ಪ್ರಕರಣಗಳೊಂದಿಗೆ ಪಟ್ಟಿಯಲ್ಲಿ ರಾಜ್ಯವು ಮೊದಲ ಸ್ಥಾನದಲ್ಲಿದೆ. ಇದರ ನಂತರ ಒಡಿಶಾ 62 ಪ್ರಕರಣ ಮತ್ತು ಅಸ್ಸಾಂ 44 ಪ್ರಕರಣಗಳೊಂದಿಗೆ ನಂತರದ ಸ್ಥಾನದಲ್ಲಿದೆ.
ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೊ (ಎನ್‌ಸಿಆರ್‌ಬಿ) ‘ಭಾರತದಲ್ಲಿ ಅಪರಾಧ-2024’ ವರದಿಯನ್ನು ಇತ್ತೀಚೆಗೆ ಬಿಡುಗಡೆ ಮಾಡಿದೆ. ದೇಶದಾದ್ಯಂತ ಒಟ್ಟು 4,053 ಭ್ರಷ್ಟಾಚಾರ ಸಂಬಂಧಿ ಪ್ರಕರಣಗಳು ದಾಖಲಾಗಿವೆ ಎಂದು ದತ್ತಾಂಶ ನೀಡಿದೆ. ಈ ಪೈಕಿ ರಾಜ್ಯದ ಪ್ರಕರಣಗಳ ಪಾಲು ಶೇ 8.3ರಷ್ಟಾಗುತ್ತದೆ.
ರಾಜ್ಯದ 334ರ ಪೈಕಿ, ಲಂಚ ಪ್ರಕರಣಗಳಲ್ಲಿ ಲೋಕಾಯುಕ್ತ ಪೊಲೀಸರು ಸರ್ಕಾರಿ ಅಧಿಕಾರಿ-ಸಿಬ್ಬಂದಿಯನ್ನು ಬಂಧಿಸಿದ ಪ್ರಕರಣಗಳ ಸಂಖ್ಯೆ 237ರಷ್ಟಿದೆ. ಘೋಷಿತ ಆದಾಯಕ್ಕಿಂತ ಹೆಚ್ಚು ಆಸ್ತಿ ಹೊಂದಿದ 75, ಅಪರಾಧಿಕ ಕರ್ತವ್ಯಲೋಪದ 17 ಮತ್ತು ಇತರೆ 5 ಪ್ರಕರಣಗಳು ದಾಖಲಾಗಿವೆ.
‘ಕರ್ನಾಟಕಕ್ಕಿಂತ ಹಲವು ಪಟ್ಟು ಹೆಚ್ಚು ಜನಸಂಖ್ಯೆ ಇರುವ ರಾಜ್ಯಗಳಲ್ಲಿ ಭ್ರಷ್ಟಾಚಾರ ಪ್ರಕರಣಗಳು ದಾಖಲಾಗುತ್ತಿಲ್ಲ. ಹೆಚ್ಚು ಪ್ರಕರಣಗಳು ದಾಖಲಾದ ಮಾತ್ರಕ್ಕೆ ರಾಜ್ಯದಲ್ಲಿ ಭ್ರಷ್ಟಾಚಾರ ಹೆಚ್ಚು ಇದೆ ಎಂದು ಅರ್ಥವಲ್ಲ. ಬದಲಿಗೆ ಭ್ರಷ್ಟಾಚಾರವನ್ನು ತಡೆಯುವ ಕಾರ್ಯದಲ್ಲಿ ಜನರ ಭಾಗವಹಿಸುವಿಕೆ ಹೆಚ್ಚುತ್ತಿದೆ ಎಂದರ್ಥ. ಹೀಗಾಗಿಯೇ ಹೆಚ್ಚು ಪ್ರಕರಣಗಳು ದಾಖಲಾಗಿವೆ. ಆದರೆ 2024ಕ್ಕೂ ಹಿಂದಿನ ವರ್ಷಗಳಿಗೆ ಹೋಲಿಸಿದರೆ, ದಾಖಲಾದ ಪ್ರಕರಣಗಳ ಸಂಖ್ಯೆ ಕಡಿಮೆಯಾಗಿದೆ’ ಎಂದು ಲೋಕಾಯುಕ್ತ ಅಧಿಕಾರಿ ಹೇಳಿದರು.
ಇದನ್ನೂ ಓದಿ : ಸಚಿವ ಡಿ. ಸುಧಾಕರ್ ವಿಧಿವಶ!








