ಬೆಂಗಳೂರು : ಪೊಲೀಸ್ ಇಲಾಖೆಯ 318 ಅಧಿಕಾರಿಗಳ ಮುಂಬಡ್ತಿಗೆ ಸಂಬಂಧಿಸಿದ ಪ್ರಮುಖ ದಾಖಲೆಗಳು ನಾಪತ್ತೆಯಾಗಿದ್ದು, ಈ ಬೆನ್ನಲ್ಲೇ ರಾಜ್ಯ ಗೃಹ ಇಲಾಖೆಯು ಈ ಬಗ್ಗೆ ತನಿಖೆ ನಡೆಸಲು ವಿಶೇಷ ಸಮಿತಿಯೊಂದನ್ನು ರಚಿಸಿದೆ.
ಪೂರ್ವ ವಲಯ ಐಜಿಪಿ ಡಾ. ಬಿ.ಆರ್. ರವಿಕಾಂತೇಗೌಡ ಸೇರಿದಂತೆ ಹಲವು ಹಿರಿಯ ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು ಕಣ್ಮರೆಯಾಗಿವೆ. ಸೇವಾ ಹಿರಿತನದ ಆಧಾರದ ಮೇಲೆ ಉಪಾಧೀಕ್ಷರ ಹುದ್ದೆಯಿಂದ ಹೆಚ್ಚುವರಿ ಅಧೀಕ್ಷರ (Non-IPS ASP) ಹುದ್ದೆ ಪದನ್ನೋತಿಗೆ ಸಂಬಂಧಿಸಿದ ದಾಖಲೆಗಳು ನಾಪತ್ತೆಯಾಗಿದೆ ಎಂದು ಸರ್ಕಾರ ಹೇಳಿದೆ. ಇದೀಗ ಉಪಾಧೀಕ್ಷರ (ಸಿವಿಎಲ್) ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿ ವಿಶೇಷ ರಾಜ್ಯಪತ್ರದಲ್ಲಿ ಪ್ರಕಟಿಸಿದ ಬೆನ್ನಲ್ಲೇ ಕಡತಗಳು ನಾಪತ್ತೆಯಾಗಿರೋದು ದೊಡ್ಡ ಚರ್ಚೆಗೆ ಕಾರಣವಾಗಿದೆ.
ಅಲ್ಲದೆ ಮುಂಬಡ್ತಿ ವಿಷಯವಾಗಿ ನೇರ ನೇಮಕಾತಿ ಡಿವೈಎಸ್ಪಿ (ಡಿಆರ್) ಹಾಗೂ ಮುಂಬಡ್ತಿ ಡಿವೈಎಸ್ಪಿ (ಪಿಆರ್)ಗಳ ಮಧ್ಯೆ ಫೈಟ್ ನಡೆದಿದೆ. ಹಳೇ ದಾಖಲೆಗಳಿಲ್ಲದೆ ಜ್ಯೇಷ್ಠತಾ ಪಟ್ಟಿ ಪ್ರಕಟಣೆಗೆ ಪಿಆರ್ ಡಿವೈಎಸ್ಪಿಗಳು ಆಕ್ಷೇಪಣೆ ಸಲ್ಲಿಸಿದ್ದಾರೆ. ಇದಕ್ಕೆ ಪ್ರತಿರೋಧವಾಗಿ ಪಿಆರ್ ಡಿವೈಎಸ್ಪಿಗಳು ಸಹ ಹಳೇ ತಪ್ಪುಗಳನ್ನು ಸರ್ಕಾರ ಸರಿಪಡಿಸಿದೆ ಎಂದು ವಾದಿಸಿದ್ದಾರೆ.
ಈ ವಿವಾದವು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದ್ದಂತೆ ಎಚ್ಚೆತ್ತ ಗೃಹ ಇಲಾಖೆ, ಕಡತಗಳ ಪತ್ತೆಗಾಗಿ ಐವರು ಅಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿದೆ. ಸರ್ಕಾರದ ಅಧೀನ ಕಾರ್ಯದರ್ಶಿ ಎಸ್. ರಶ್ಮಿ ಅವರು ಈ ಸಮಿತಿ ರಚನೆಯ ಅಧಿಕೃತ ಆದೇಶ ಹೊರಡಿಸಿದ್ದಾರೆ.
ಸಮಿತಿಯಲ್ಲಿ ಯಾರ್‍ಯಾರಿದ್ದಾರೆ?
ಚಂದ್ರಕಾಂತ್- ಶಾಖಾಧಿಕಾರಿ ಪೊಲೀಸ್ ಸೇವೆಗಳು, ವಿಶ್ವನಾಥ್- ಸಹಾಯಕ ಆಡಳಿತಾಧಿಕಾರಿ ಎಚ್ಆರ್‌ಎಂ-1 ಡಿಜಿ-ಐಜಿಪಿ ಕಚೇರಿ, ಹನುಮಂತಪ್ಪ- ಹಿರಿಯ ಸಹಾಯಕರು ಪೊಲೀಸ್ ಸೇವೆಗಳು-ಎ ಒಳಾಡಳಿತ ಇಲಾಖೆ, ಸಾಗರ್- ದ್ವಿತೀಯ ದರ್ಜೆ ಸಹಾಯಕರು ಡಿಜಿ-ಐಜಿಪಿ ಕಚೇರಿ ಹಾಗೂ ನಿತ್ಯಾ-ಡಾಟಾ ಎಂಟ್ರಿ ಆಪರೇಟರ್ ಒಳಾಡಳಿತ ಇಲಾಖೆ.
ಐಪಿಎಸ್ ದಾಖಲೆ ನಾಪತ್ತೆ ಹೇಗೆ?
ಸೇವಾ ಹಿರಿತನ ಆಧಾರದ ಮೇರೆಗೆ ಡಿವೈಎಸ್ಪಿ ಜ್ಯೇಷ್ಠತಾ ಪಟ್ಟಿ ರಚನೆಗೆ ನಿವೃತ್ತ ಸಮಾಜ ಕಲ್ಯಾಣಾಧಿಕಾರಿ ಬಿ.ಕೆ.ಚಿನ್ನಮಾರಯ್ಯ ಸಲಹೆಗಾರರನ್ನಾಗಿ ಸರ್ಕಾರ ನೇಮಿಸಿತ್ತು. ಇತ್ತೀಚೆಗೆ ಈ ಏಕಸದಸ್ಯ ಸಮಿತಿ ಶಿಫಾರಸು ಆಧರಿಸಿ ತಾತ್ಕಾಲಿಕ ಜ್ಯೇಷ್ಠತಾ ಪಟ್ಟಿಯನ್ನು ರಾಜ್ಯಪತ್ರದಲ್ಲಿ ಸರ್ಕಾರ ಪಟ್ಟಿಸಿದೆ. ಆದರೆ 1984 ರಿಂದ 2007ರವರೆಗೆ ಮುಂಬಡ್ತಿ ಹೊಂದಿದ್ದ ಸುಮಾರು 318 ಅಧಿಕಾರಿಗಳಿಗೆ ಸಂಬಂಧಿಸಿದ ದಾಖಲೆಗಳು ನಾಪತ್ತೆಯಾಗಿವೆ ಎಂದು ಸಮಿತಿ ಹೇಳಿತ್ತು. ಈ ಡಿವೈಎಸ್ಪಿಗಳ ಪೈಕಿ 16 ಮಂದಿ ಡಿಆರ್ ಹಾಗೂ 302 ಪಿಆರ್ ಡಿವೈಎಸ್ಪಿಗಳು ಸೇರಿದ್ದಾರೆ. ಗಮನಾರ್ಹ ಸಂಗತಿ ಅಂದರೆ ಡಿಆರ್ ಅಧಿಕಾರಿಗಳು ಎಲ್ಲರೂ ಐಪಿಎಸ್ ಹುದ್ದೆಗೆ ಸಹ ಬಡ್ತಿ ಪಡೆದಿದ್ದಾರೆ. ಆದರೆ ಹಳೇ ಕಡತ ನಾಪತ್ತೆಯಾಗಿವೆ ಎಂಬ ಸಂಗತಿ ಆಕ್ಷೇಪಣೆಗೆ ಕಾರಣವಾಗಿದೆ. ಅದರಲ್ಲೂ ಐಜಿಪಿ ಡಾ। ಬಿ.ಆರ್.ರವಿಕಾಂತೇಗೌಡ, ರಾಜ್ಯ ಗುಪ್ತದಳದ ಮಾಜಿ ಮುಖ್ಯಸ್ಥ ನಿವೃತ್ತ ಐಜಿಪಿ ಗೋಪಾಲ್ ಹೊಸೂರು, ಡಿಐಜಿಗಳಾದ ಡಿ.ದೇವರಾಜ್, ಎಸ್.ಗಿರೀಶ್, ಅಬ್ದುಲ್ ಅಹದ್, ಡಾ। ಧರಣಿದೇವಿ ಹಾಗೂ ಡಿ.ಆರ್.ಸಿರಿಗೌರಿ ಸೇರಿ ಘಟಾನುಘಟ್ಟಿ ಅಧಿಕಾರಿಗಳ ದಾಖಲೆಗಳು ನಾಪತ್ತೆಯಾಗಿವೆ.
ಇದನ್ನೂ ಓದಿ : ಮೂರು ಬಾರಿ ಸೋತವರು ಮಾತನಾಡಲು ಯೋಗ್ಯರೇ? – ನಿಖಿಲ್ ಕುಮಾರಸ್ವಾಮಿಗೆ ಚೇತನ್ ಟಾಂಗ್!









