ನಿಯತ್ತಿಗೆ ಮತ್ತೊಂದು ಹೆಸರೇ ನಾಯಿ. ಅನ್ನ ಕೊಟ್ಟು ಸಾಕಿದ ಮಾಲೀಕನಿಗಾಗಿ ಶ್ವಾನಗಳು ಪ್ರಾಣ ತ್ಯಾಗ ಮಾಡಿದ ಅನೇಕ ಉದಾಹರಣೆಗಳು ಇವೆ. ಆದರೆ ಇಲ್ಲೊಂದು ಇದಕ್ಕೆ ವಿರುದ್ಧವಾಗಿರುವ ಘಟನೆ ನಡೆದಿದೆ.
ಹೌದು.. 23 ವರ್ಷದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ತಾನು ಪ್ರೀತಿಯಿಂದ ಸಾಕುತ್ತಿದ್ದ ಪಿಟ್ಬುಲ್ ಶ್ವಾನಗಳ ದಾಳಿಗೆ ಬಲಿಯಾಗಿದ್ದಾಳೆ. ಈ ಘಟನೆಯು ಪಿಟ್ಬುಲ್ಗಳಂತಹ ಅಪಾಯಕಾರಿ ತಳಿಗಳನ್ನು ಸಾಕುವುದು ಎಷ್ಟು ಮಾರಣಾಂತಿಕ ಎಂಬುದನ್ನು ಮತ್ತೊಮ್ಮೆ ಎತ್ತಿ ತೋರಿಸುತ್ತದೆ. ಈ ಘಟನೆ ಅಮೆರಿಕಾದ ಟೆಕ್ಸಾಸ್ನಲ್ಲಿ ನಡೆದಿದೆ.
ನವೆಂಬರ್ 21ರಂದು ಮ್ಯಾಡಿಸನ್ ರಿಲೇ ಹಲ್ ಎಂಬ 23ರ ಹರೆಯದ ಯುವತಿ ತಾನೇ ಸಾಕಿದ ಪಿಟ್ಬುಲ್ ಶ್ವಾನಗಳ ದಾಳಿಗೆ ಪ್ರಾಣ ಬಿಟ್ಟಿದ್ದಾರೆ. ಈಕೆಯ ಟೈಲರ್ನಲ್ಲಿರುವ ನಿವಾಸದಲ್ಲೇ ಈ ಘಟನೆ ನಡೆದಿದೆ. ಮ್ಯಾಡಿಸನ್ ರಿಲೇ ಹಲ್ ಸಂಜೆ 4.15ರ ಸುಮಾರಿಗೆ ಮನೆಯ ಹಿತ್ತಲಿನಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ. ಆ ನಾಯಿಗಳು ಆಕೆಯನ್ನು ಪ್ರೀತಿಸುವಂತೆ ಕಾಣುತ್ತಿದ್ದವು. ಹಲವಾರು ವಾರಗಳಿಂದ ಅವುಗಳನ್ನು ಆಕೆಯೇ ನೋಡಿಕೊಳ್ಳುತ್ತಿದ್ದಳು ಎಂದು ಯುವತಿ ರಿಲೇ ಹಲ್ ತಾಯಿ ಜೆನ್ನಿಫರ್ ಹಬ್ಬೆಲ್ ಘಟನೆಗೆ ಆಘಾತ ವ್ಯಕ್ತಪಡಿಸಿದ್ದಾರೆ.
ಮೂರು ಪಿಟ್ ಬುಲ್ಗಳು ಹಿತ್ತಲಿನಲ್ಲಿ ದಾಳಿ ಮಾಡಿದಾಗ ಹಲ್ ಅವರು ನಾಯಿಗಳನ್ನು ಒಳಗೆ ಬಿಡುವುದಕ್ಕೆ ಹೋಗಿದ್ದರು. ನಂತರ ಬೊಬ್ಬೆ ಕೇಳಿ ನೆರೆಹೊರೆಯವರು ತುರ್ತು ಸೇವೆಗಳಿಗೆ ಕರೆ ಮಾಡಿದ್ದಾರೆ. ತುರ್ತು ಕರೆಯ ನಂತರ ಸ್ಥಳಕ್ಕೆ ಬಂದ ಸ್ಮಿತ್ ಕೌಂಟಿ ಶೆರಿಫ್ನ ಡೆಪ್ಯೂಟಿಯೊಬ್ಬರು ಹಿತ್ತಲಿನಲ್ಲಿ ಹಲ್ ಅವರನ್ನು ನೋಡಿದಾಗ ನಾಯಿಗಳು ಅವರತ್ತ ಬಂದಿವೆ. ಈ ವೇಳೆ ಅವರು ಒಂದು ನಾಯಿಗೆ ಗುಂಡು ಹಾರಿಸಿದ್ದಾರೆ. ಇದರಿಂದಾಗಿ ಉಳಿದೆರಡು ನಾಯಿಗಳು ಓಡಿ ಹೋಗಿವೆ. ಆದರೆ ಇದಾಗಿ ಸ್ವಲ್ಪ ಸಮಯದ ನಂತರ ಅವರು ಗಾಯಗಳಿಂದ ಸಾವನ್ನಪ್ಪಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ಓದಿ : ದಕ್ಷ IAS ಅಧಿಕಾರಿ ಮಹಾಂತೇಶ್ ಬೀಳಗಿ ಕುಟುಂಬಕ್ಕೆ ಕ್ಲಾಸ್-1 ಹುದ್ದೆ ನೀಡಿ – ಸಿಎಂಗೆ ಬಿವೈ ವಿಜಯೇಂದ್ರ ಪತ್ರ!







