ಸೀರೆ ವಿಚಾರಕ್ಕೆ ಗಲಾಟೆ – ಕೋಪದಲ್ಲಿ ಮದುವೆಗೆ ಕೇವಲ 1 ಗಂಟೆ ಇದ್ದಾಗ ವಧುವನ್ನೇ ಕೊಲೆಗೈದ ವರ!

ಭಾವನಗರ : ವಿವಾಹಕ್ಕೆ ಕೇವಲ ಒಂದು ಗಂಟೆ ಬಾಕಿ ಇರುವಾಗಲೇ ವರನೊಬ್ಬ ಸೀರೆ ಮತ್ತು ಹಣದ ವಿಚಾರಕ್ಕೆ ನಡೆದ ಜಗಳದಲ್ಲಿ ವಧುವನ್ನು ಭೀಕರವಾಗಿ ಹತ್ಯೆ ಮಾಡಿರುವ ಅಘಾತಕಾರಿ ಘಟನೆ ಗುಜರಾತ್‌ನ ಭಾವನಗರದಲ್ಲಿ ನಡೆದಿದೆ. ಪ್ರಭುದಾಸ್ ಸರೋವರದ ಟೆಕ್ರಿ ಚೌಕ್ ಬಳಿ ಶನಿವಾರ ಈ ದುರಂತ ಸಂಭವಿಸಿದೆ.

ಕೊಲೆಯಾದ ಮಹಿಳೆಯನ್ನು ಸೋನಿ ಹಿಮ್ಮತ್‌ ರಾಥೋಡ್‌ ಎಂದು ಗುರುತಿಸಲಾಗಿದ್ದು, ಆರೋಪಿ ವರನ ಹೆಸರು ಸಜನ್ ಬರಯ್ಯ. ಕಳೆದ ಒಂದೂವರೆ ವರ್ಷದಿಂದ ಲಿವಿಂಗ್‌ ರಿಲೇಷನ್‌ಶಿಪ್‌ನಲ್ಲಿದ್ದ ಈ ಜೋಡಿ ಮದುವೆಯಾಗಲು ನಿರ್ಧರಿಸಿತ್ತು. ಶನಿವಾರ ಇವರಿಬ್ಬರು ಹಸೆಮಣೆ ಏರಬೇಕಿತ್ತು. ಆದರೆ, ಮದುವೆಗೆ ಕೇವಲ ಒಂದು ಗಂಟೆ ಮುನ್ನ, ಸೀರೆ ಮತ್ತು ಹಣದ ವಿಚಾರಕ್ಕೆ ಇಬ್ಬರ ನಡುವೆ ತೀವ್ರ ಜಗಳ ನಡೆದಿದೆ. ಕೋಪದ ಭರದಲ್ಲಿ ವರ ಸಜನ್, ಸೋನಿಗೆ ಕಬ್ಬಿಣದ ಪೈಪ್‌ನಿಂದ ಹೊಡೆದು, ನಂತರ ಆಕೆಯ ತಲೆಯನ್ನು ಗೋಡೆಗೆ ಡಿಕ್ಕಿ ಹೊಡೆಸಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಕೃತ್ಯ ಎಸಗಿದ ಬಳಿಕ ಆರೋಪಿಯು ಮನೆಯನ್ನು ಧ್ವಂಸಗೊಳಿಸಿ ಸ್ಥಳದಿಂದ ಪರಾರಿಯಾಗಿದ್ದಾನೆ.

ಘಟನಾ ಸ್ಥಳಕ್ಕೆ ಧಾವಿಸಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಆರೋಪಿ ಸಜನ್‌ನ ವಿರುದ್ಧ ನೆರೆಹೊರೆಯವರೊಂದಿಗೆ ಜಗಳ ಮಾಡಿದ ಸಂಬಂಧ ಈ ಹಿಂದೆ ಕೂಡ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಇದೀಗ ಕೊಲೆ ಪ್ರಕರಣದಲ್ಲಿ ಆತನ ವಿರುದ್ಧ ಎಫ್‌ಐಆರ್‌ ದಾಖಲಾಗಿದ್ದು, ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಇದನ್ನೂ ಓದಿ : ಚಿತ್ತಾಪುರದಲ್ಲಿ RSS ಪಥಸಂಚಲನ ಯಶಸ್ವಿ- ಖರ್ಗೆ ತವರಿನಲ್ಲಿ ಭಗವಾ ಧ್ವಜ ಹಾರಿಸಿದ RSS ಕಾರ್ಯಕರ್ತರು!

Btv Kannada
Author: Btv Kannada

Read More