ಕೊನೆಗೂ ಕನಸು ನನಸು – ಭಾರತದ ಸಿಂಹಿಣಿಯರ ಮುಡಿಗೇರಿದ ವಿಶ್ವಕಪ್‌ ಕಿರೀಟ!

ಮುಂಬೈ : 2025ರ ಮಹಿಳಾ ವಿಶ್ವಕಪ್ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾವನ್ನು 52 ರನ್‌ಗಳಿಂದ ಮಣಿಸಿದ ಭಾರತೀಯ ಮಹಿಳಾ ತಂಡ, ಚೊಚ್ಚಲ ಬಾರಿಗೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿದೆ.

ಏಕದಿನ ವಿಶ್ವಕಪ್‌ ಕಿರೀಟ ಭಾರತದ ಸಿಂಹಿಣಿಯರ ಮುಡಿಗೇರಿದ್ದು, ಟೀಂ ಇಂಡಿಯಾ 52 ವರ್ಷಗಳ ವಿಶ್ವಕಪ್ ಬರ ನೀಗಿಸಿಕೊಂಡಿದೆ. ನವಿ ಮುಂಬೈನ ಡಿವೈ ಪಾಟೀಲ್ ಕ್ರೀಡಾಂಗಣದಲ್ಲಿ ನಡೆದ ಫೈನಲ್ ಪಂದ್ಯದಲ್ಲಿ ಭಾರತ ಟೀಂ 52 ರನ್​​ಗಳಿಂದ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಏಕದಿನ ವಿಶ್ವಕಪ್​ನ 13ನೇ ಆವೃತ್ತಿಯ ಫೈನಲ್ ಪಂದ್ಯದಲ್ಲಿ ಭಾರತೀಯ ಮಹಿಳಾ ತಂಡ ಗೆಲುವು ಸಾಧಿಸಿದ್ದು, 5 ದಶಕಗಳ ಮಹಿಳಾ ವಿಶ್ವಕಪ್ ಕಾಯುವಿಕೆಗೆ ಭಾರತ ಅಂತ್ಯ ಹಾಡಿದೆ.

ಟೀಮ್ ಇಂಡಿಯಾ ನಾಯಕಿ ಹರ್ಮನ್​ಪ್ರೀತ್ ಕೌರ್ ನೇತೃತ್ವದಲ್ಲಿ ವಿಶ್ವಕಪ್ ಸಂಭ್ರಮ. ಮೊದಲು ಬ್ಯಾಟ್‌ ಬೀಸಿದ ಭಾರತ 50 ಓವರ್‌ಗಳಲ್ಲಿ 7 ವಿಕೆಟ್‌ ನಷ್ಟಕ್ಕೆ 298 ರನ್‌ ಗಳಿಸಿತು. ಕಠಿಣ ಗುರಿಯನ್ನು ಬೆನ್ನೆಟ್ಟಿದ ಆಫ್ರಿಕಾ 45.3 ಓವರ್‌ಗಳಲ್ಲಿ 246 ರನ್‌ಗಳಿಸಿ ಆಲೌಟ್‌ ಆಯ್ತು. ಆರಂಭಿಕ ಆಟಗಾರ್ತಿ ತಜ್ಮಿನ್ ಬ್ರಿಟ್ಸ್ 23 ರನ್‌ ಗಳಿಸಿ ರನೌಟ್‌ಗೆ ಬಲಿಯಾದರೆ ಅನ್ನೆಕೆ ಬಾಷ್ ಶೂನ್ಯಕ್ಕೆ ಔಟಾದಾಗ ಪಂದ್ಯ ಭಾರತದ ಕಡೆ ತಿರುಗಿತ್ತು. ಆದರೆ ಎರಡನೇ ವಿಕೆಟಿಗೆ ಲಾರಾ ವೊಲ್ವಾರ್ಡ್ಟ್ ಮತ್ತು ಸುನೆ ಲೂಸ್ 51 ಎಸೆತಗಳಲ್ಲಿ 52 ರನ್‌ ಜೊತೆಯಾಟವಾಡಿದರು. ಇವರಿಬ್ಬರು ಗಟ್ಟಿಯಾಗಿ ನಿಲ್ಲುತ್ತಿದ್ದಂತೆ ನಾಯಕಿ ಹರ್ಮನ್‌ ಶಫಾಲಿ ವರ್ಮಾ ಕೈಯಲ್ಲಿ ಬಾಲ್‌ ನೀಡಿದರು.

ಈ ಪ್ರಯೋಗ ಯಶಸ್ವಿ ಎಂಬಂತೆ 25 ರನ್‌ ಗಳಿಸಿದ್ದ ಸುನೆ ಲೂಸ್ ಶಫಾಲಿ ಕೈಗೆ ಕ್ಯಾಚ್‌ ನೀಡಿ ಔಟಾದರು. ನಂತರ ಬಂದ ಮರಿಝನ್ನೆ ಕಪ್ 4 ರನ್‌ ಗಳಿಸಿ ಶಫಾಲಿ ಬೌಲಿಂಗ್‌ನಲ್ಲಿ ಕೀಪರ್‌ ರಿಚಾ ಘೋಷ್‌ಗೆ ಕ್ಯಾಚ್‌ ನೀಡಿ ವಿಕೆಟ್‌ ಒಪ್ಪಿಸಿದರು. ಒಂದು ಕಡೆ ವಿಕೆಟ್‌ ಉರುಳುತ್ತಿದ್ದರೂ ನಾಯಕಿ ಲಾರಾ ವೊಲ್ವಾರ್ಡ್ಟ್ ಶತಕ ಸಿಡಿಸಿ ಹೋರಾಡುವ ಮುನ್ಸೂಚನೆ ನೀಡಿದರು. ಆದರೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಅಮನ್‌ಜೋತ್‌ ಕೌರ್‌ ಹಿಡಿದ ಕ್ಯಾಚ್‌ಗೆ 101 (98 ಎಸೆತ,11 ಬೌಂಡರಿ, 1 ಸಿಕ್ಸ್‌) ಸಿಡಿಸಿ ಔಟಾದರು.

ವೊಲ್ವಾರ್ಡ್ಟ್ ಔಟಾದಂತೆ ದೀಪ್ತಿ ಶರ್ಮಾ ಬೌಲಿಂಗ್‌ನಲ್ಲಿ ಕಮಾಲ್‌ ಮಾಡಿದರು. ಒಟ್ಟು ಐದು ವಿಕೆಟ್‌ ಪಡೆಯುವ ಮೂಲಕ ಭಾರತಕ್ಕೆ ಜಯವನ್ನು ತಂದುಕೊಟ್ಟರು. ನಾಡಿನ್‌ ಡಿ ಕ್ಲಾರ್ಕ್‌ ಅವರ ಕ್ಯಾಚನ್ನು ಹರ್ಮನ್‌ ಪಡೆಯುತ್ತಿದ್ದಂತೆ ಭಾರತೀಯರ ಸಂಭ್ರಮ ಮುಗಿಲು ಮುಟ್ಟಿತು.

ಇದನ್ನೂ ಓದಿ : ತರೀಕೆರೆಯಲ್ಲಿ ವಿಚಿತ್ರ ಕಳ್ಳತನ. ಮೊದಲು ಭಕ್ತಿ, ನಂತರ ಕಳ್ಳತನ – ₹ 80 ಸಾವಿರ ಕದ್ದು ಪರಾರಿ!

Btv Kannada
Author: Btv Kannada

Read More