ತಮಿಳು ನಟ ವಿಜಯ್‌ ರ‍್ಯಾಲಿಯಲ್ಲಿ ಕಾಲ್ತುಳಿತ – ಮಕ್ಕಳು ಸೇರಿ 33 ಮಂದಿ ಸಾವು!

ಚೆನ್ನೈ: ತಮಿಳುನಾಡಿನ ಕರೂರಿನಲ್ಲಿ ಶನಿವಾರ ನಡೆದ ನಟ-ರಾಜಕಾರಣಿ ವಿಜಯ್ ದಳಪತಿ ರ‍್ಯಾಲಿಯಲ್ಲಿ ಉಂಟಾದ ಕಾಲ್ತುಳಿತಕ್ಕೆ 33 ಮಂದಿ ಬಲಿಯಾಗಿದ್ದಾರೆ. ಈ ದುರ್ಘಟನೆಯಲ್ಲಿ ಹಲವರು ಗಾಯಗೊಂಡಿದ್ದು, 50ಕ್ಕೂ ಹೆಚ್ಚು ಜನರಿಗೆ ಚಿಕಿತ್ಸೆ ನೀಡಲಾಗುತ್ತಿದೆ.
ವೆಟ್ರಿ ಕಳಗಂ (ಟಿವಿಕೆ) ಮುಖ್ಯಸ್ಥ ನಟ ವಿಜಯ್ ನೇತೃತ್ವದ ಬೃಹತ್ ರ್ಯಾಲಿಯಲ್ಲಿ ಹತ್ತಾರು ಸಾವಿರ ಜನರು ಪಾಲ್ಗೊಂಡಿದ್ದರು. ಈ ವೇಳೆ ನೂಕುನುಗ್ಗಲು ಉಂಟಾಗಿ 33 ಜನರು ಮೃತಪಟ್ಟಿದ್ದಾರೆ. ಜನರು ಮೂರ್ಛೆ ತಪ್ಪಿದ ವಿಷಯ ಗಮನಕ್ಕೆ ಬರುತ್ತಿದ್ದಂತೆ ವಿಜಯ್ ಅವರು ತಕ್ಷಣ ಆ್ಯಂಬುಲೆನ್ಸ್ ಅನ್ನು ಕರೆಸಿ ಅವರನ್ನು ಆಸ್ಪತ್ರೆಗೆ ದಾಖಲಿಸುವ ವ್ಯವಸ್ಥೆ ಮಾಡಿದ್ದರು. ಕಾಲ್ತುಳಿತದ ನಂತರ ವಿಜಯ್ ಅರ್ಧಕ್ಕೇ ತಮ್ಮ ಭಾಷಣವನ್ನು ಮುಗಿಸಿದ್ದಾರೆ.
ಮೃತ ವಯಸ್ಕರು, ವಿಜಯ್ ಅವರ ರಾಜಕೀಯ ಪಕ್ಷವಾದ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಬೆಂಬಲಿಗರಾಗಿದ್ದರು. ರ‍್ಯಾಲಿಗಾಗಿ ಕನಿಷ್ಠ ಆರು ಗಂಟೆಗಳ ಕಾಲ ಕಾದಿದ್ದರು. ಸ್ಥಳಕ್ಕೆ ರ‍್ಯಾಲಿ ತಡವಾಗಿ ಬಂದಿತು. ಹೀಗಾಗಿ, ಹೆಚ್ಚಿನ ಜನಸಂದಣಿಯಾಗಿ ಕಾಲ್ತುಳಿತ ಸಂಭವಿಸಿದೆ.
ರಸ್ತೆಯ ತುಂಬ ಸಾವಿರಾರು ಜನ ಸೇರಿದ್ದರಿಂದ ನೂಕುನುಗ್ಗಲು ಉಂಟಾಗಿದೆ. ಕರೂರಿನಲ್ಲಿ ನಡೆದ ತಮ್ಮ ರ್ಯಾಲಿಯಲ್ಲಿ ಜನರು ಪ್ರಜ್ಞೆ ತಪ್ಪಿದಾಗ “ಪೊಲೀಸರೇ, ದಯವಿಟ್ಟು ಸಹಾಯ ಮಾಡಿ” ಎಂದು ವಿಜಯ್ ಹೇಳುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. “ಯಾರೂ ಗಾಬರಿಯಾಗಬೇಡಿ, ಈಗ ಆ್ಯಂಬುಲೆನ್ಸ್ ಬರುತ್ತದೆ” ಎಂದು ಅವರು ಮೈಕ್​ನಲ್ಲಿ ಹೇಳಿದ್ದಾರೆ.

 

ಇದನ್ನೂ ಓದಿ : ಸಿಂಪಲ್ ಸುನಿ‌ ನಿರ್ದೇಶನದ ‘ಗತವೈಭವ’ ರಿಲೀಸ್​ಗೆ ರೆಡಿ – ನ.14ಕ್ಕೆ‌ ಸಿನಿಮಾ ತೆರೆಗೆ!

Btv Kannada
Author: Btv Kannada

Read More