ಮುಂದುವರೆದ ಡೊನಾಲ್ಡ್ ಟ್ರಂಪ್ ಹುಚ್ಚಾಟ – ಭಾರತದ ಮೇಲೆ ಶೇ. 25ರಷ್ಟು ಹೆಚ್ಚುವರಿ ಸುಂಕ ವಿಧಿಸಿದ ‘ದೊಡ್ಡಣ್ಣ’!

ವಾಷಿಂಗ್ಟನ್ : ರಷ್ಯಾದಿಂದ ನಿರಂತರವಾಗಿ ತೈಲ ಖರೀದಿಸುತ್ತಿರುವುದಕ್ಕಾಗಿ ಭಾರತದ ಮೇಲೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಹೆಚ್ಚುವರಿಯಾಗಿ ಶೇ. 25ರಷ್ಟು ವ್ಯಾಪಾರ ಸುಂಕವನ್ನು ವಿಧಿಸಿದ್ದಾರೆ. ಈ ಮೂಲಕ ಭಾರತದ ಮೇಲಿನ ಒಟ್ಟು ಅಮೆರಿಕನ್ ಸುಂಕವು ಶೇಕಡಾ ಶೇ.50ಕ್ಕೆ ಏರಿಕೆಯಾಗಿದೆ.

ಈ ಕುರಿತು ಬುಧವಾರ ಕಾರ್ಯಕಾರಿ ಆದೇಶಕ್ಕೆ ಸಹಿ ಹಾಕಿರುವ ಟ್ರಂಪ್, ಹೆಚ್ಚುವರಿ ಸುಂಕಗಳು 21 ದಿನಗಳ ನಂತರ, ಅಂದರೆ ಆಗಸ್ಟ್ 27, 2025ರಿಂದ ಜಾರಿಗೆ ಬರಲಿದೆ ಎಂದು ಸ್ಪಷ್ಟಪಡಿಸಿದ್ದಾರೆ. ರಷ್ಯಾದಿಂದ ತೈಲ ಖರೀದಿಸುವುದನ್ನು ಮುಂದುವರಿಸಿದರೆ 24 ಗಂಟೆಗಳಲ್ಲಿ ಕ್ರಮ ಕೈಗೊಳ್ಳುವುದಾಗಿ ಎಚ್ಚರಿಸಿದ ಒಂದು ದಿನದ ನಂತರ ಈ ನಿರ್ಧಾರ ಹೊರಬಿದ್ದಿದೆ.

ಟ್ರಂಪ್ ಸಹಿ ಮಾಡಿದ ಒಂಬತ್ತು ವಿಭಾಗಗಳ ಕಾರ್ಯಕಾರಿ ಆದೇಶವು ಸುಂಕದ ಹಿನ್ನೆಲೆ, ವ್ಯಾಪ್ತಿ ಮತ್ತು ಇತರ ವಿವರಗಳನ್ನು ಒಳಗೊಂಡಿದೆ. ಉಕ್ರೇನ್ ವಿರುದ್ಧ ಯುದ್ಧ ಸಾರಿರುವ ಕಾರಣ ರಷ್ಯಾದ ಸರಕುಗಳ, ವಿಶೇಷವಾಗಿ ಇಂಧನ ಮತ್ತು ತೈಲದ ಆಮದನ್ನು ನಿರ್ಬಂಧಿಸುವ ಅಮೆರಿಕದ ಕಾನೂನುಗಳನ್ನು ಆದೇಶದಲ್ಲಿ ಉಲ್ಲೇಖಿಸಲಾಗಿದೆ.

“ಭಾರತವು ರಷ್ಯಾದಿಂದ ನೇರವಾಗಿ ಅಥವಾ ಪರೋಕ್ಷವಾಗಿ ತೈಲವನ್ನು ಆಮದು ಮಾಡಿಕೊಳ್ಳುತ್ತಿದೆ. ಆದ್ದರಿಂದ ಭಾರತದಿಂದ ಬರುವ ಆಮದುಗಳ ಮೇಲೆ ಹೆಚ್ಚುವರಿ ಸುಂಕ ವಿಧಿಸುವುದು ಅಗತ್ಯವಾಗಿದೆ,” ಎಂದು ಆದೇಶದಲ್ಲಿ ಹೇಳಲಾಗಿದೆ. ಆದರೂ, ಆದೇಶ ಜಾರಿಗೆ ಬರುವ ಮುನ್ನ ಸಾಗಾಟದಲ್ಲಿರುವ ಸರಕುಗಳಿಗೆ ಈ ಸುಂಕದಿಂದ ವಿನಾಯಿತಿ ನೀಡಲಾಗಿದೆ.

ಇದೇ ವೇಳೆ, ತನ್ನ ಕ್ರಮಕ್ಕೆ ಪ್ರತಿಯಾಗಿ ಯಾರಾದರೂ ಪ್ರತೀಕಾರ ತೀರಿಸಿಕೊಂಡರೆ, ಈ ಆದೇಶವನ್ನು ಮತ್ತಷ್ಟು ಕಠಿಣಗೊಳಿಸುವುದಾಗಿ ಟ್ರಂಪ್ ಎಚ್ಚರಿಕೆ ನೀಡಿದ್ದಾರೆ. ಅಷ್ಟೇ ಅಲ್ಲದೆ, ರಷ್ಯಾದಿಂದ ತೈಲವನ್ನು ಆಮದು ಮಾಡಿಕೊಳ್ಳುತ್ತಿರುವ ಇತರ ದೇಶಗಳನ್ನು ಗುರುತಿಸಿ, ಅವುಗಳ ಮೇಲೂ ಯಾವ ಪ್ರಮಾಣದ ಸುಂಕ ವಿಧಿಸಬಹುದು ಎಂದು ಸಲಹೆ ನೀಡಲು ತಮ್ಮ ಆಡಳಿತದ ಪ್ರಮುಖ ಇಲಾಖೆಗಳಿಗೆ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಇದನ್ನೂ ಓದಿ : ಬಿಗ್​ಬಾಸ್​ ರಜತ್​ಗೆ ಡೆತ್ ಥ್ರೆಟ್​​ ಕೊಟ್ಟ ಶಾರದಾ ಭಟ್!

Btv Kannada
Author: Btv Kannada

Read More