ಬಿಜೆಪಿ ಕೇಂದ್ರ ಶಿಸ್ತು ಸಮಿತಿ ನೋಟಿಸ್‌ಗೆ 9 ಪುಟಗಳ ಉತ್ತರ ನೀಡಿದ ಯತ್ನಾಳ್!

ಬೆಂಗಳೂರು : ರಾಜ್ಯದಲ್ಲಿ ಬಿಜೆಪಿ ಬಣ ಬಡಿದಾಟಕ್ಕೆ ಸಂಬಂಧಿಸಿದಂತೆ ಬಿಜೆಪಿ ಹೈಕಮಾಂಡ್ ನೀಡಿದ್ದ ನೋಟಿಸ್‌ಗೆ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕೊನೆಗೂ ಉತ್ತರ ನೀಡಿದ್ದಾರೆ.

ಶಿಸ್ತು ಉಲ್ಲಂಘನೆ ಆರೋಪದಲ್ಲಿ ಯತ್ನಾಳ್‌ಗೆ 72 ಗಂಟೆಯಲ್ಲಿ ಉತ್ತರ ನೀಡಲು ನೋಟಿಸ್ ನೀಡಲಾಗಿತ್ತು. ತಮಗೆ ನೋಟಿಸ್ ಬಂದಿಲ್ಲ, ಬಂದರೂ ಉತ್ತರಿಸುವುದಿಲ್ಲ ಎನ್ನುತ್ತಿದ್ದ ಯತ್ನಾಳ ಅವರು ಇದೀಗ ಶಿಸ್ತು ಸಮಿತಿ ಅಧ್ಯಕ್ಷ ಓಂ ಪಾಠಕ್‌ಗೆ 9 ಪೇಜ್ ಮೂಲಕ ಉತ್ತರ ರವಾನೆ ಮಾಡಿದ್ದಾರೆ ಎಂದು ತಿಳಿದುಬಂದಿದೆ.

ನಿರೀಕ್ಷೆಯಂತೆ ನೋಟಿಸ್‌ನಲ್ಲಿ, ತಾವು ಪಕ್ಷದ ವಿರುದ್ಧ ಯಾವುದೇ ಹೇಳಿಕೆ ನೀಡಿಲ್ಲ. ಪಕ್ಷದ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರ ಅಸಮರ್ಥತೆ, ವೈಫಲ್ಯ ಕುರಿತು ಹೇಳಿಕೆ ನೀಡಿದ್ದೇನೆ. ಇದು ಪಕ್ಷ ವಿರೋಧಿ ಚಟುವಟಿಕೆ ಅಲ್ಲ ಎಂದು ಬಲವಾಗಿ ಸಮರ್ಥಿಸಿಕೊಂಡಿದ್ದಾರೆ. ಏಕಪಕ್ಷೀಯ ನಿರ್ಧಾರ, ಹೊಂದಾಣಿಕೆ ರಾಜಕಾರಣವನ್ನೇ ರೂಢಿಸಿಕೊಂಡಿರುವ ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷರನ್ನಾಗಿ ಮುಂದುವರೆಸಿದರೆ ಪಕ್ಷಕ್ಕೆ ನಷ್ಟ ಕಟ್ಟಿಟ್ಟ ಬುತ್ತಿ ಎಂದು ಯತ್ನಾಳ್​ ಖಡಕ್ಕಾಗಿ ಹೇಳಿದ್ದಾರೆ ಎನ್ನಲಾಗಿದೆ.

RSS ನಾಯಕರ ಸಲಹೆ ಪಡೆದು ವಿವರವಾಗಿ ನೋಟಿಸ್​ಗೆ ಉತ್ತರಿಸಿದ ಯತ್ನಾಳ್, ಬಿವೈವಿ ವಿರುದ್ಧ ಉತ್ತರದಲ್ಲಿ ದೂರುಗಳ ಸುರಿಮಳೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ನಾನು ಯಾವುದೇ ಬಣ ರಾಜಕೀಯ ಮಾಡಿಲ್ಲ, ಶಿಸ್ತು ಉಲ್ಲಂಘಿಸಿಲ್ಲ . ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಬಣ ರಾಜಕೀಯ ಮಾಡುತ್ತಿದೆ. ಪಕ್ಷದ ಚೌಕಟ್ಟಿನಲ್ಲಿ ವಕ್ಫ್ ವಿರುದ್ಧ ಹೋರಾಟ ಮಾಡಿದ್ದೇವೆ. ತಂಡವಾಗಿ ಹೋರಾಟ ಮಾಡಿ ನಾವು ಯಶಸ್ವಿಯಾಗಿದ್ದೇವೆ. ಬಿ.ವೈ.ವಿಜಯೇಂದ್ರ ಏಕಪಕ್ಷೀಯ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಪಕ್ಷದಲ್ಲಿ ಕುಟುಂಬ ರಾಜಕೀಯ ಮೀತಿ ಮೀರಿದೆ, ಅದಕ್ಕೆಲ್ಲ ಬ್ರೇಕ್ ಹಾಕ್ಬೇಕು. ವಿಜಯೇಂದ್ರ ಅವರು ವ್ಯಕ್ತಿಗತ ಹಾಗೂ ಗುಂಪುಗಾರಿಕೆ ಮಾಡ್ತಿದ್ದಾರೆ. ಇದರಿಂದ ಸಂಘಟನೆಗೆ ತೊಡಕಾಗುತ್ತಿದೆ ಎಂಬ ಅಂಶಗಳನ್ನು ಯತ್ನಾಳ್​​ ಉಲ್ಲೇಖಿಸಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Btv Kannada
Author: Btv Kannada

Leave a Comment

Read More