ಸಿಸಿಎಲ್ ಟೂರ್ನಿಯಲ್ಲಿ ಕರ್ನಾಟಕ ಬುಲ್ಡೋಜರ್ಸ್ ಗೆಲುವಿನ ಓಟ ಮುಂದುವರೆಸಿದೆ. ಹೈದರಾಬಾದ್ನ ರಾಜೀವ್ ಗಾಂಧಿ ಕ್ರೀಡಾಂಗಣದಲ್ಲಿ ನಿನ್ನೆ ನಡೆದ ಚೆನ್ನೈ ರೈನೋಸ್ ವಿರುದ್ಧದ ಪಂದ್ಯದಲ್ಲಿ ಕರ್ನಾಟಕ ಬುಲ್ಡೋಜರ್ಸ್ 7 ವಿಕೆಟ್ಗಳಿಂದ ಭರ್ಜರಿ ಗೆಲುವು ಸಾಧಿಸಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ನಲ್ಲಿ ಉತ್ತಮ ಪ್ರದರ್ಶನ ನೀಡಿದ ಕಿಚ್ಚ ಸುದೀಪ್ ಪಡೆ ಸುಲಭ ಗೆಲುವು ದಾಖಲಿಸಿದೆ.
ಎರಡನೇ ಪಂದ್ಯದಲ್ಲಿ ಟಾಸ್ ಗೆದ್ದ ಚೆನ್ನೈ ರೈನೋಸ್ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಮೊದಲ ಇನ್ನಿಂಗ್ಸ್ನ 10 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 108 ರನ್ ಕಲೆಹಾಕಿತು.
ಬಳಿಕ ಮೊದಲ ಇನ್ನಿಂಗ್ಸ್ ಬ್ಯಾಟಿಂಗ್ ಮಾಡಿದ ಕರ್ನಾಟಕ ಬುಲ್ಡೋಜರ್ಸ್ 10 ಓವರ್ ಗಳಲ್ಲಿ 4 ವಿಕೆಟ್ ಕಳೆದುಕೊಂಡು 142 ರನ್ ಕಲೆಹಾಕುವ ಮೂಲಕ 34 ರನ್ಗಳ ಭರ್ಜರಿ ಮುನ್ನಡೆ ಪಡೆದುಕೊಂಡಿತು. ಡಾರ್ಲಿಂಗ್ ಕೃಷ್ಣ 22 ಎಸೆತಗಳಲ್ಲಿ 8 ಬೌಂಡರಿ 1 ಭರ್ಜರಿ ಸಿಕ್ಸರ್ ಸಹಿತ ಅಜೇಯ 50 ರನ್ ಗಳಿಸಿದರು. ಕರಣ್ ಆರ್ಯನ್ 19 ಎಸೆತಗಳಲ್ಲಿ 42 ರನ್ ಗಳಿಸಿದರು. 34 ರನ್ಗಳ ಹಿನ್ನಡೆಯೊಂದಿಗೆ ಎರಡನೇ ಇನ್ನಿಂಗ್ಸ್ ಆರಂಭಿಸಿದ ಚೆನ್ನೈ ರೈನೋಸ್ 10 ಓವರ್ ಗಳಲ್ಲಿ 7 ವಿಕೆಟ್ ಕಳೆದುಕೊಂಡು 103 ರನ್ ಗಳಿಸಿತು.
ಎರಡನೇ ಇನ್ನಿಂಗ್ಸ್ನಲ್ಲಿ 70 ರನ್ಗಳ ಸುಲಭ ಗುರಿಯನ್ನು ಬೆನ್ನಟ್ಟಿದ ಕರ್ನಾಟಕ ಬುಲ್ಡೋಜರ್ಸ್ 6.5 ಓವರ್ ಗಳಲ್ಲಿ 3 ವಿಕೆಟ್ ಕಳೆದುಕೊಂಡು 70 ರನ್ ಗಳಿಸಿ 7 ವಿಕೆಟ್ಗಳ ಅಮೋಘ ಗೆಲುವು ಸಾಧಿಸಿತು. ಡಾರ್ಲಿಂಗ್ ಕೃಷ್ಣ 13 ಎಸೆತಗಳಲ್ಲಿ 1 ಬೌಂಡರಿ 1 ಸಿಕ್ಸರ್ ಸಹಿತ ಅಜೇಯ 22 ರನ್ ಗಳಿಸಿದರೆ, ರಾಜೀವ್ ಹನು 9 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿ ತಂಡಕ್ಕೆ ಸುಲಭ ಗೆಲುವ ತಂದುಕೊಟ್ಟರು.









