ಒಕ್ಕಲಿಗರ ಸಂಘದ ಕರ್ಮಕಾಂಡದ ಬಗ್ಗೆ ಭುಗಿಲೆದ್ದ ಆಕ್ರೋಶ – ಕ್ರಮಕ್ಕೆ ಒತ್ತಾಯಿಸಿ ಹಲವು ಮುಖಂಡರ ಪತ್ರ!

ಬೆಂಗಳೂರು : ರಾಜ್ಯ ಒಕ್ಕಲಿಗರ ಸಂಘದ ಆಡಳಿತ ಮಂಡಳಿಯ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿದ್ದು, ಸಂಘದಲ್ಲಿ ನಡೆಯುತ್ತಿರುವ ಅವ್ಯವಸ್ಥೆ ಹಾಗೂ ಅಕ್ರಮಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಹಲವು ಪ್ರಮುಖ ಮುಖಂಡರು ಪತ್ರ ಬರೆದಿದ್ದಾರೆ.

ಕಳೆದ ಕೆಲವು ವರ್ಷಗಳಿಂದ ಒಕ್ಕಲಿಗರ ಸಂಘವು ತೀವ್ರ ಆಡಳಿತಾತ್ಮಕ ಕುಸಿತ ಕಂಡಿದೆ ಎಂದು ಮುಖಂಡರು ಆರೋಪಿಸಿದ್ದಾರೆ. ಇನ್ನು ಚುನಾವಣೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾದ ನಿರ್ದೇಶಕರನ್ನು ತಕ್ಷಣವೇ ಅನರ್ಹಗೊಳಿಸಲು ಕಠಿಣ ನಿಯಮ ರೂಪಿಸಬೇಕೆಂದು ಮುಖಂಡರು ಒತ್ತಾಯಿಸಿದ್ದಾರೆ.

ಸಂಘದ ಹಲವು ನಿರ್ದೇಶಕರು ಕೋಟ್ಯಂತರ ರೂಪಾಯಿ ಹಣದ ಚಲಾವಣೆಯ ಮೂಲಕವೇ ಚುನಾವಣೆಯಲ್ಲಿ ಗೆದ್ದು ಬಂದಿದ್ದಾರೆ. ಆಡಳಿತ ಮಂಡಳಿಗಳ ಜಾಳುಜಾಳು ನಿರ್ಧಾರಗಳಿಂದಾಗಿ ಸಂಸ್ಥೆಯಲ್ಲಿ ಸುಧಾರಿಸಲು ಸಾಧ್ಯವಿಲ್ಲದಷ್ಟು ಅವ್ಯವಸ್ಥೆ ಉಂಟಾಗಿದೆ. ಈ ಹಿನ್ನೆಲೆಯಲ್ಲಿ ಸಂಸ್ಥೆಯ ಭವಿಷ್ಯವೇನು ಎಂಬ ಆತಂಕ ಎದುರಾಗಿದೆ.

11 ವರ್ಷಗಳಿಂದ ಸಂಘದ ಸರ್ವಸದಸ್ಯರ ಸಭೆ ನಡೆದಿರಲಿಲ್ಲ. ವಿವಿಧ ಮುಖಂಡರ ಗುಂಪಿನ ತೀವ್ರ ಒತ್ತಾಯದ ಮೇರೆಗೆ ಇತ್ತೀಚೆಗೆ ಕರೆಯಲಾಗಿದ್ದ ಪೂರ್ವನಿಯೋಜಿತ ಸಭೆಯು ಕೇವಲ ಗಲಾಟೆ, ಸದ್ದು-ಗದ್ದಲಕ್ಕೆ ಸೀಮಿತವಾಯಿತು. ಸದಸ್ಯರು ನೀಡಿದ ಯಾವುದೇ ಅನಿಸಿಕೆ, ಅಭಿಪ್ರಾಯ ಹಾಗೂ ಪ್ರಮುಖ ಸಲಹೆಗಳು ಯಾರಿಗೂ ಕೇಳಿಸದಂತೆ ಗದ್ದಲ ಸೃಷ್ಟಿಸಿ ಸಭೆ ಮುಗಿಸಲಾಗಿದೆ. ಅಂತಿಮವಾಗಿ ಬಂದಿದ್ದ ಜನರಿಗೆ ಭರ್ಜರಿ ಊಟವಷ್ಟೇ ಲಾಭವಾಯಿತು ಎಂದು ಮುಖಂಡರು ಲೇವಡಿ ಮಾಡಿದ್ದಾರೆ.

ಇದೀಗ ಸಂಘದ ಎಲ್ಲಾ ಅಕ್ರಮಗಳ ವಿರುದ್ಧ ಜಾಗೃತ ಮುಖಂಡರು ರಾಜ್ಯ ಒಕ್ಕಲಿಗರ ಸಂಘದ ಕಾರ್ಯದರ್ಶಿಗಳಿಗೆ ಪತ್ರ ಬರೆದಿದ್ದಾರೆ. ಚುನಾವಣೆಯಲ್ಲಿ ಅಕ್ರಮ ಎಸಗಿ ಆಯ್ಕೆಯಾದ ನಿರ್ದೇಶಕರನ್ನು ತಕ್ಷಣವೇ ಅನರ್ಹಗೊಳಿಸಿ, ನೇರ ಚುನಾವಣೆ ನಡೆಸಬೇಕು ಎಂದು ಮುಖಂಡರು ಆಗ್ರಹಿಸಿದ್ದಾರೆ.

ಮುಖಂಡರ ಪ್ರಮುಖ ಬೇಡಿಕೆಗಳು:

  • 11 ವರ್ಷಗಳ ವರದಿ ಮತ್ತು ಲೆಕ್ಕಪತ್ರಗಳ ಬಗ್ಗೆ ಸಮಗ್ರ ತನಿಖೆಯಾಗಬೇಕು.
  • ನಿಯಮಾನುಸಾರ ಪರಿಶೀಲನೆಯಾಗುವವರೆಗೆ ವರದಿಗಳಿಗೆ ಯಾವುದೇ ಕಾರಣಕ್ಕೂ ಇಲಾಖೆ ಅನುಮೋದನೆ ನೀಡಬಾರದು.
  • ಬೈಲಾ ತಿದ್ದುಪಡಿ ಮತ್ತು ನಿಯಮ ಉಲ್ಲಂಘನೆಗಳ ಕುರಿತು ಸೂಕ್ತ ಕಾನೂನು ಕ್ರಮ ಜರುಗಿಸಬೇಕು
  • ಬೆಂಗಳೂರು ನಗರಕ್ಕೆ 8 ನಿರ್ದೇಶಕರು, ದಕ್ಷಿಣ ಜಿಲ್ಲೆಗೆ 4 ನಿರ್ದೇಶಕರು, ಗ್ರಾಮಾಂತರಕ್ಕೆ 3 ನಿರ್ದೇಶಕರು ಎಂದು ಸದಸ್ಯರ ಸಂಖ್ಯೆಯ ಆಧಾರದ ಮೇಲೆ ಪ್ರತ್ಯೇಕವಾಗಿ ನಿಗದಿಪಡಿಸಬೇಕು
  • ಮತದಾರರು ಯಾವುದೇ ಮಧ್ಯವರ್ತಿಗಳಿಲ್ಲದೆ ತಮ್ಮ ಪ್ರತಿನಿಧಿಗಳನ್ನು ನೇರವಾಗಿ ಮತ ಚಲಾಯಿಸಿ ಆಯ್ಕೆ ಮಾಡಬೇಕು

ಇದನ್ನೂ ಓದಿ : ಗೃಹಲಕ್ಷ್ಮಿ, ಗೃಹಜ್ಯೋತಿ ಫಲಾನುಭವಿಗಳು ಮರು ಅರ್ಜಿ ಸಲ್ಲಿಸಬೇಕು – ಸಿಎಂ ಡಿ.ಕೆ ಶಿವಕುಮಾರ್!

Btv Kannada
Author: Btv Kannada

Leave a Comment

Read More

Read More