ಮತ್ತೆ ಬೆಂಗಳೂರಲ್ಲಿ ಮುತ್ತಪ್ಪ ರೈ ಪುತ್ರನ ಲ್ಯಾಂಬೋರ್ಗಿನಿ ಪುಂಡಾಟ – ವಿಡಿಯೋ ವೈರಲ್!

ಬೆಂಗಳೂರು : ಮುತ್ತಪ್ಪ ರೈ ಪುತ್ರ ರಿಕ್ಕಿ ರೈ ಒಡೆತನದ ಐಷಾರಾಮಿ ಲ್ಯಾಂಬೋರ್ಗಿನಿ ಕಾರು ಸಿಲಿಕಾನ್ ಸಿಟಿ ಬೆಂಗಳೂರಿನ ರಸ್ತೆಗಳಲ್ಲಿ ಮತ್ತೆ ಭಾರಿ ಸದ್ದು ಮಾಡಿದೆ.  ಏರ್‌ಪೋರ್ಟ್ ರಸ್ತೆಯಲ್ಲಿ ಡ್ರಿಫ್ಟಿಂಗ್ ಮಾಡುವ ಮೂಲಕ, ಸೈಲೆನ್ಸರ್‌ನಿಂದ ಬೆಂಕಿ ಉಗುಳುತ್ತಾ ಕರ್ಕಶ ಶಬ್ದ ಮಾಡಿರುವ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.

KA 05 NR 0009 ನೋಂದಣಿ ಸಂಖ್ಯೆಯ ಲ್ಯಾಂಬೋರ್ಗಿನಿ ಕಾರಿನ ವೈರಲ್ ವಿಡಿಯೋ ಆಧರಿಸಿ ಘಟನೆ ಯಾವ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ ಎಂಬುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಘಟನೆ ನಿಖರವಾಗಿ ಯಾವಾಗ ನಡೆದಿದೆ? ಆ ಸಮಯದಲ್ಲಿ ಕಾರಿನೊಳಗೆ ಯಾರ್ಯಾರು ಇದ್ದರು? ಕಾರನ್ನು ಸ್ವತಃ ರಿಕ್ಕಿ ರೈ ಚಲಾಯಿಸುತ್ತಿದ್ದರೇ ಅಥವಾ ಅವರ ಡ್ರೈವರ್ ಚಲಾಯಿಸುತ್ತಿದ್ದರೇ? ಎಂಬಿತ್ಯಾದಿ ಮಾಹಿತಿಗಳನ್ನು ಕಲೆಹಾಕಲು ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದಾರೆ. ಪ್ರಾಥಮಿಕ ತನಿಖೆ ನಡೆಸಿ, ಶೀಘ್ರದಲ್ಲೇ ಅತಿವೇಗದ ಚಾಲನೆ ಹಾಗೂ ಸೈಲೆನ್ಸರ್ ಮಾರ್ಪಾಡು ಕಾಯ್ದೆಯಡಿ ಪ್ರಕರಣ ದಾಖಲಿಸಿಕೊಂಡು ಕಠಿಣ ಕ್ರಮ ಕೈಗೊಳ್ಳಲು ಸಾರಿಗೆ ಮತ್ತು ಪೊಲೀಸ್ ಅಧಿಕಾರಿಗಳು ನಿರ್ಧರಿಸಿದ್ದಾರೆ.

ಇದೇ ಕಾರು ಈ ಹಿಂದೆ ಕಳೆದ ಮಾರ್ಚ್ 21 ರಂದು ಬೆಂಗಳೂರಿನ ಕುಂಬ್ಳೆ ಸರ್ಕಲ್ ಹಾಗೂ ಕಬ್ಬನ್ ರಸ್ತೆಯಲ್ಲಿ ಅಪಾಯಕಾರಿ ರೀತಿಯಲ್ಲಿ ಕಾರ್ ಡ್ರೈವಿಂಗ್ ಮಾಡಿ ‘ಡ್ರಿಫ್ಟಿಂಗ್’ ಪ್ರಕರಣದಲ್ಲಿ ಸಿಲುಕಿತ್ತು. ಘಟನೆ ನಡೆದ ಆರಂಭದಲ್ಲಿ ಅಲ್ಲಿ ಇದ್ದದ್ದು ನಾನಲ್ಲ ಎಂದು ರಿಕ್ಕಿ ರೈ ವಾದಿಸಿದ್ದರು. ಆದರೆ ಕಬ್ಬನ್ ಪಾರ್ಕ್ ಪೊಲೀಸರು ಸಿಸಿಟಿವಿ ಪರಿಶೀಲಿಸಿದಾಗ ರಿಕ್ಕಿ ರೈ ಅವರೇ ಕಾರು ಓಡಿಸುತ್ತಿರುವುದು ಪತ್ತೆಯಾಗಿ FIR ದಾಖಲಾಗಿತ್ತು.

ಇದನ್ನೂ ಓದಿ : ಬೆಂಗಳೂರು – ಚೆನ್ನೈ ಎಕ್ಸ್‌ಪ್ರೆಸ್‌ ವೇಯಲ್ಲಿ ಭೀಕರ ಅಪಘಾತ – ಯುವತಿ ಸ್ಥಳದಲ್ಲೇ ಸಾವು!

Btv Kannada
Author: Btv Kannada

Leave a Comment

Read More