ಕೋಲಾರ : ಮಾಲೂರಿನ 80 ಕೋಟಿ ಮೌಲ್ಯದ 16 ಎಕರೆ ಸರ್ಕಾರಿ ಭೂ ಹಗರಣಕ್ಕೆ ಇದೀಗ ಬಿಗ್ ಟ್ವಿಸ್ಟ್ ಸಿಕ್ಕಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಲೂರು ತಾಲೂಕು ಕಚೇರಿಯ ಪ್ರಥಮ ದರ್ಜೆ ಸಹಾಯಕಿ (SDA) ವಿಜಯ್ ಕುಮಾರ್, ತಹಶೀಲ್ದಾರ್ ರೂಪಾ ವಿರುದ್ಧ ಅಜ್ಞಾತ ಸ್ಥಳದಿಂದ ವಿಡಿಯೋ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟಿದ್ದಾನೆ.

ವಿಡಿಯೋದಲ್ಲಿ ಸತ್ಯಾಂಶ ಬಿಚ್ಚಿಟ್ಟಿರುವ SDA ವಿಜಯ್ ಕುಮಾರ್, ತಹಶೀಲ್ದಾರ್ ರೂಪಾ ಅವರು ತಮ್ಮನ್ನು ಈ ಪ್ರಕರಣದಲ್ಲಿ ಸಿಲುಕಿಸಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿದ್ದಾರೆ. ಸರ್ಕಾರಿ ಜಮೀನಿಗೆ ಸಂಬಂಧಿಸಿದ ಫೈಲ್ ನಾಪತ್ತೆಮಾಡಿ ಈಗ ತಹಶೀಲ್ದಾರ್ ನನ್ನ ಮೇಲೆ ಇಡುತ್ತಿದ್ದಾರೆ, ಆ ಫೈಲ್ನ್ನು ತಹಶೀಲ್ದಾರ್ ರೂಪಾ ಅವರಿಗೆ ಕೊಟ್ಟಿದ್ದೇನೆ, ಈ ಪ್ರಕರಣದಲ್ಲಿ ತಹಶೀಲ್ದಾರ್ ರೂಪಾ ತಪ್ಪಿಸಿಕೊಳ್ಳಲು ಆರೋಪವನ್ನು ನನ್ನ ಮೇಲೆ ಹಾಕುತ್ತಿದ್ದಾರೆ ಎಂದಿದ್ದಾರೆ.

ಈಗ ನನ್ನ ವಿರುದ್ಧ ಪೊಲೀಸ್ ಠಾಣೆಯಲ್ಲಿ ದೂರು ನೀಡಲು ಮುಂದಾಗಿದ್ದಾರೆ ಎಂದು ತಿಳಿದುಬಂದ ಹಿನ್ನೆಲೆಯಲ್ಲಿ ನಾನು ಈ ವಿಡಿಯೋ ಮಾಡಿ ಸತ್ಯವನ್ನು ತಿಳಿಸಿದ್ದೇನೆ ಎಂದು ವಿಜಯ್ ಕುಮಾರ್ ಅಳಲು ತೋಡಿಕೊಂಡಿದ್ದಾರೆ.

ಏನಿದು 80 ಕೋಟಿಯ ಭೂ ಹಗರಣ?
ಮಾಲೂರು ತಾಲೂಕಿನ ತೊರ್ನಹಳ್ಳಿ ಬಳಿ ಇರುವ ಸರ್ವೆ ನಂಬರ್ 280, 282, 283, 284 ಮತ್ತು 285 ರಲ್ಲಿ ಸುಮಾರು 16 ಎಕರೆ ಸರ್ಕಾರಿ ಭೂಮಿ ಇದೆ. ಈ ಕೋಟ್ಯಾಂತರ ರೂಪಾಯಿ ಬೆಲೆಬಾಳುವ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆಯ ಕೆಲವು ಅಧಿಕಾರಿಗಳು ಹಾಗೂ ಭೂಗಳ್ಳರು ಸೇರಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಕಬಳಿಸಿದ್ದಾರೆ.
ಮೂರು ದಿನಗಳ ಹಿಂದಷ್ಟೇ ಮಾಲೂರಿನ ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ನೇತೃತ್ವದಲ್ಲಿ ತಹಶೀಲ್ದಾರ್ ಕಚೇರಿಗೆ ದಿಢೀರ್ ಮುತ್ತಿಗೆ ಹಾಕಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಈ ವೇಳೆ ಮಾಜಿ ಶಾಸಕರು ಹಗರಣದ ಸ್ಫೋಟಕ ಮಾಹಿತಿಗಳನ್ನು ಬಿಚ್ಚಿಟ್ಟಿದ್ದಾರೆ.

1961ರ ಕಂದಾಯ ದಾಖಲೆಗಳ ಪ್ರಕಾರ ತೊರ್ನಹಳ್ಳಿ ಬಳಿಯ ಈ 16 ಎಕರೆ ಜಾಗವು ಅಧಿಕೃತವಾಗಿ ಸರ್ಕಾರಿ ಜಮೀನು ಎಂದು ನಮೂದಾಗಿದೆ. ಆದರೆ, 1963 ರಲ್ಲಿ ಸರ್ಕಾರಿ ರಜಾ ದಿನದಂದೇ ಅಧಿಕಾರಿಗಳ ಶಾಮೀಲಿನಿಂದ ನಕಲಿ ದಾಖಲೆಗಳನ್ನು ಸೃಷ್ಟಿಸಲಾಗಿದೆ. ಕಾನೂನುಬಾಹಿರವಾಗಿ ಈ ಜಮೀನನ್ನು ಬೆಂಗಳೂರು ಮೂಲದ ಅಶೋಕ್ ಜೈನ್ ಎಂಬುವರ ಹೆಸರಿಗೆ ಖಾತೆ ಬದಲಾವಣೆ ಮಾಡಿಕೊಡಲಾಗಿದೆ ಎಂದು ಮಾಜಿ ಶಾಸಕರು ಗಂಭೀರ ಆರೋಪ ಮಾಡಿದರು.
ಮಾಜಿ ಶಾಸಕ ಕೆ.ಎಸ್. ಮಂಜುನಾಥ್ ಗೌಡ ಅವರು ಹಳೆಯ ಕಂದಾಯ ದಾಖಲೆಗಳನ್ನು ಒಂದೊಂದಾಗಿ ಹೊರತೆಗೆದು ಅಧಿಕಾರಿಗಳ ಅಕ್ರಮವನ್ನು ತಹಶೀಲ್ದಾರ್ ರೂಪಾ ಅವರ ಮುಂದೆಯೇ ಸಾಬೀತುಪಡಿಸಲು ಆರಂಭಿಸಿದ್ದರು. ಮಾಜಿ ಶಾಸಕರ ಖಡಕ್ ಪ್ರಶ್ನೆಗಳಿಗೆ ಉತ್ತರಿಸಲಾಗದೆ ತಹಶೀಲ್ದಾರ್ ರೂಪಾ ಅವರು ಕಚೇರಿಯಿಂದಲೇ ಹೊರನಡೆದರು.

ಕಬಳಿಕೆಯಾಗಿರುವ 16 ಎಕರೆ ಸರ್ಕಾರಿ ಜಮೀನನ್ನು ಕಂದಾಯ ಇಲಾಖೆ ಕೂಡಲೇ ತನ್ನ ವಶಕ್ಕೆ ಪಡೆದುಕೊಳ್ಳಬೇಕು ಇಲ್ಲದಿದ್ದರೆ ಮುಂಬರುವ ದಿನಗಳಲ್ಲಿ ತಾಲೂಕಿನಾದ್ಯಂತ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಮಾಜಿ ಶಾಸಕರು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದ್ದರು.
ಇದನ್ನೂ ಓದಿ : ಆಗುಂಬೆ ಘಾಟಿಯಲ್ಲಿ ಭಾರಿ ವಾಹನಗಳ ಸಂಚಾರ ನಿಷೇಧ!









