ರಾಜ್ಯಸಭಾ ಚುನಾವಣೆಯಲ್ಲಿ ಕಾಂಗ್ರೆಸ್ಗೆ ಶಾಸಕರ ಖರೀದಿ ಭೀತಿ ಆವರಿಸಿದ್ದು, ಇದೀಗ ಶಾಸಕರ ಖರೀದಿ ಭೀತಿಯಿಂದ ಕಾಂಗ್ರೆಸ್ ಪಕ್ಷ ಮಧ್ಯಪ್ರದೇಶ ವಿಧಾನಸಭೆಯ ತನ್ನ 62 ಶಾಸಕರನ್ನು ಚುನಾವಣೆ ಮುನ್ನ ದಿನದವರೆಗೂ ಕರ್ನಾಟಕಕ್ಕೆ ಸ್ಥಳಾಂತರಿಸಲು ಮುಂದಾಗಿದೆ.
ಜೂನ್ 18 ರಂದು ನಡೆಯಲಿರುವ ಚುನಾವಣೆಯಲ್ಲಿ ಬಿಜೆಪಿ ತನ್ನ ಶಾಸಕರ ಬಲದಿಂದ 2 ಸ್ಥಾನಗಳನ್ನು ಗೆಲ್ಲುವುದು ಖಚಿತವಾಗಿದೆ. ಆದರೆ, ಬಿಜೆಪಿಯು ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸುವ ಮೂಲಕ ಮೂಲಕ ಚುನಾವಣೆಯು ರಾಜ್ಯದಲ್ಲಿ ಹೊಸ ತಿರುವು ಪಡೆದುಕೊಂಡಿದೆ.
ಸದ್ಯ ಮಧ್ಯಪ್ರದೇಶ ವಿಧಾನಸಭೆಯ ಒಟ್ಟು ಬಲ 229 ಆಗಿದ್ದು, ರಾಜ್ಯಸಭೆಗೆ ಆಯ್ಕೆಯಾಗಲು ಒಬ್ಬ ಅಭ್ಯರ್ಥಿಗೆ ಕನಿಷ್ಠ 58 ಪ್ರಥಮ ಪ್ರಾಶಸ್ತ್ಯದ ಮತಗಳ ಅಗತ್ಯವಿದೆ. ಆಡಳಿತಾರೂಢ ಬಿಜೆಪಿ 164 ಶಾಸಕರನ್ನು ಹೊಂದಿದ್ದು, ಮೊದಲ ಎರಡು ಸ್ಥಾನಗಳನ್ನು ಸುಲಭವಾಗಿ ಗೆಲ್ಲಬಹುದು.
ಬಿಜೆಪಿ ಈಗಾಗಲೇ ತರುಣ್ ಚುಗ್ ಮತ್ತು ರಜನೀಶ್ ಅಗರ್ವಾಲ್ ಅವರನ್ನು ಕಣಕ್ಕಿಳಿಸಿದೆ. ಒಂದು ಸ್ಥಾನವನ್ನು ಪಡೆಯಲು ಸಂಖ್ಯಾಬಲ ಹೊಂದಿರುವ ಕಾಂಗ್ರೆಸ್ ಪಕ್ಷ ರಾಹುಲ್ ಗಾಂಧಿಯವರ ಆಪ್ತೆ, ಮಾಜಿ ಲೋಕಸಭಾ ಸಂಸದೆ ಮೀನಾಕ್ಷಿ ನಟರಾಜನ್ ಅವರನ್ನು ಕಣಕ್ಕಿಳಿಸಿದೆ.
ಕೊನೆಯ ದಿನದಂದು ಬಿಜೆಪಿ ಮಹೇಶ್ ಕೇವತ್ ಅವರನ್ನು ಮೂರನೇ ಅಭ್ಯರ್ಥಿಯಾಗಿ ಕಣಕ್ಕಿಳಿಸುವ ಮೂಲಕ ಚುನಾವಣಾ ಕಣವನ್ನು ರೋಚಕಗೊಳಿಸಿದೆ. ಮೂರನೇ ಸೀಟು ಗೆಲ್ಲಲು ಬಿಜೆಪಿಗೆ ಇನ್ನು 8 ಮತಗಳ ಕೊರತೆಯಿದೆ. ವಿರೋಧ ಪಕ್ಷದ ನಾಯಕ ಉಮಂಗ್ ಸಿಂಘಾರ್ ಅವರ ನಿವಾಸದಲ್ಲಿ ತಡರಾತ್ರಿ ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ (CLP) ಸಭೆಯಲ್ಲಿ ಶಾಸಕರನ್ನು ರಾಜ್ಯದಿಂದ ಹೊರಗೆ ಕಳುಹಿಸುವ ಬಗ್ಗೆ ಚರ್ಚಿಸಲಾಗಿದ್ದು, ಕರ್ನಾಟಕದ ರಾಜಧಾನಿ ಬೆಂಗಳೂರಿಗೆ ಸ್ಥಳಾಂತರಿಸುವ ಸಾಧ್ಯತೆ ಇದೆ.
ಇದನ್ನೂ ಓದಿ : ಬಿಟ್‌ಕಾಯಿನ್ ಹಗರಣ : ಚಾರ್ಜ್‌ಶೀಟ್ ಬೆನ್ನಲ್ಲೇ ನಲಪಾಡ್‌ಗೆ 3ನೇ ಬಾರಿ ಸಮನ್ಸ್ ಜಾರಿ!








