ನನ್ನ ಜೀವನ ನಡೆಸಲು ಯಾರನ್ನಾದ್ರೂ ಕೇಳಬೇಕಾ? – ಫ್ಯಾನ್ಸ್​ ಪ್ರಶ್ನೆಗೆ ಕಿಚ್ಚ ಸುದೀಪ್ ಖಡಕ್ ಉತ್ತರ!

ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ ನಾಯಕ ಮಾತ್ರ ಅಲ್ಲ ನಿರ್ದೇಶಕ, ಗಾಯಕ, ಕ್ರಿಕೆಟ್ ಆಟಗಾರ, ನಿರೂಪಕರೂ ಹೌದು. ಕನ್ನಡದಲ್ಲಿ ‘ಬಿಗ್ ಬಾಸ್’ ರಿಯಾಲಿಟಿ ಶೋ ಇಷ್ಟೊಂದು ದೊಡ್ಡ ಮಟ್ಟದಲ್ಲಿ ಯಶಸ್ವಿಯಾಗಲು ಸುದೀಪ್ ಅವರ ಖಡಕ್ ನಿರೂಪಣೆಯೇ ಪ್ರಮುಖ ಕಾರಣ. ಆದರೆ, ಇದೇ ಬಿಗ್ ಬಾಸ್ ಜರ್ನಿ ಈಗ ಅವರ ಅಭಿಮಾನಿಗಳಲ್ಲಿ ಎಲ್ಲೋ ಒಂದು ಕಡೆ ಅಸಮಾಧಾನ ಮೂಡಿಸುತ್ತಿದೆ.

ಕಿಚ್ಚ ಸುದೀಪ್ ಕಳೆದ 12 ವರ್ಷಗಳಿಂದ ‘ಬಿಗ್ ಬಾಸ್’ ಕಾರ್ಯಕ್ರಮವನ್ನು ಯಶಸ್ವಿಯಾಗಿ ಮುನ್ನಡೆಸಿಕೊಂಡು ಬಂದಿದ್ದಾರೆ. ತಾವು ಎಲ್ಲೇ ಇದ್ದರೂ ಬಿಗ್ ಬಾಸ್‌ಗಾಗಿ ಸಮಯ ಮೀಸಲಿಡುತ್ತಾರೆ. ಇದೀಗ ಸುದೀಪ್ ಅವರ ಈ ನಡೆಯ ಕುರಿತು ಅವರ ಅಭಿಮಾನಿಗಳಲ್ಲಿ ಅಸಹನೆ ಇದೆ.

ಮೂರು ತಿಂಗಳು ಸಿಸಿಎಲ್ ಕ್ರಿಕೆಟ್ ಪಂದ್ಯಾವಳಿ, ಇನ್ನೊಂದು ಮೂರು ತಿಂಗಳು ಬಿಗ್ ಬಾಸ್ ಶೋ ಅಂತ ಸುದೀಪ್ ಬ್ಯುಸಿಯಾದರೆ, ಇನ್ನು ಸಿನಿಮಾಗಳನ್ನು ಮಾಡುವುದು ಯಾವಾಗ? ಅನ್ನೋದೆ ಅಭಿಮಾನಿಗಳ ಪ್ರಶ್ನೆ.

ಹೀಗಿರುವಾಗ ಇದೀಗ ಮತ್ತೆ ”ಬಿಗ್ ಬಾಸ್” ಶುರುವಾಗುತ್ತಿದೆ. ಎಂದಿನಂತೆ ಮತ್ತದೇ ವರ್ಷಗಳಿಂದ ನಡೆಯುತ್ತಾ ಬಂದ ಡಿಬೇಟ್ ಮತ್ತೆ ಶುರುವಾಗಿದೆ. ಈ ಚರ್ಚೆಯನ್ನು ಗಮನಿಸಿರುವ ಸುದೀಪ್ ಈ ಬಾರಿ ತಮ್ಮದೇ ಶೈಲಿಯಲ್ಲಿ ತಿರುಗೇಟು ನೀಡಿದ್ದಾರೆ.

ಸುದೀಪ್ ಅವರ ಅಕ್ಕನ ಮಗ ಸಂಚಿತ್ ಅಭಿನಯದ ”ಮ್ಯಾಂಗೋ ಪಚ್ಚಾ” ಸಿನಿಮಾ ಸಂದರ್ಶನವೊಂದರಲ್ಲಿ ಕಿಚ್ಚ ಮಾತನಾಡಿ, ನನ್ನ ಇಷ್ಟ ಬಂದಿರೋ ಜೀವನ, ಅದನ್ನು ನಾನು ನಡೆಸಬೇಕಾದ್ರೆ ಯಾರನ್ನಾದ್ರೂ ಕೇಳಬೇಕಾ? ಎಂದು ಪ್ರಶ್ನಿಸಿದ್ದಾರೆ. ತಮಗೆ ಇಂದು ಸಿಕ್ಕಿರುವ ಯಶಸ್ಸು ಮತ್ತು ಸ್ಟಾರ್‌ಡಮ್ ಸುಲಭವಾಗಿ ಬಂದಿದ್ದಲ್ಲ ಎನ್ನುವುದನ್ನು ಕೂಡ ಕೆ.ಆರ್.ಜಿ ಯೂಟ್ಯೂಬ್ ಮೂಲಕ ಸಮಸ್ತ ಕನ್ನಡಿಗರಿಗೆ ನೆನಪಿಸಿರುವ ಸುದೀಪ್, ಯಾವುದೇ ರಜೆ ತೆಗೆದುಕೊಳ್ಳದೆ ವರ್ಷಾನು ವರ್ಷ ಬೆವರು ಸುರಿಸಿ, ಈ ಹೆಸರು ಸಂಪಾದನೆ ಮಾಡಿದ್ಧೇನೆ ಎಂದು ಹೇಳಿದ್ಧಾರೆ.

ಇನ್ನು ಕ್ರಿಕೆಟ್ ಕುರಿತು ಕೂಡ ಮಾತನಾಡಿರುವ ಸುದೀಪ್, ”ಬಿಗ್ ಬಾಸ್” ಆಗಲಿ ”ಕ್ರಿಕೆಟ್” ಆಗಲಿ ಹೆಸರಿರುವ ಕಾರಣಕ್ಕೆ ನನ್ನನ್ನು ಹುಡುಕಿಕೊಂಡು ಬರುತ್ತವೇ ಎಂದು ಸ್ಪಷ್ಟ ಪಡಿಸಿರುವ ಸುದೀಪ್, ನಿಮ್ಮೆಲ್ಲರ ಪ್ರಕಾರ ನಾನು ಜೀವನದಲ್ಲಿ ಏನು ಮಾಡಲೇಬಾರದಾ ಎಂದು ಪ್ರಶ್ನೆ ಮಾಡಿದ್ದಾರೆ. ನನ್ನ ಜೀವನ ನನಗೆ ನಡೆಸಲು ಬಿಡಿ, ಇನ್ನೇನು ವಯಸ್ಸಾದ ಮೇಲೆ ಕೋಲು ಹಿಡ್ಕೊಂಡು ಕ್ರಿಕೆಟ್ ಆಡೋಕೆ ಹೋಗಲಾ..? ಎಂದು ಹಾಸ್ಯ ಚಟಾಕಿ ಹಾರಿಸಿದ್ದಾರೆ.

ಸದ್ಯ ಸುದೀಪ್ ಅವರ ಈ ಮಾತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಕೆಲವರು ತಮ್ಮ ಅಭಿಮಾಣಿಗಳನ್ನೇ ಸುದೀಪ್ ರೋಸ್ಟ್ ಮಾಡಿದ್ಧಾರೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರೆ, ಇನ್ನೂ ಕೆಲವರು ಸುದೀಪ್ ಅವರ ಈ ಮಾತುಗಳಿಗೆ ತಮ್ಮ ಅಸಮಾಧಾನ ವ್ಯಕ್ತಪಡಿಸುತ್ತಿದ್ಧಾರೆ.

ಇದನ್ನೂ ಓದಿ : ನಾರ್ವೆ ಚೆಸ್ ಚಾಂಪಿಯನ್ ಪ್ರಜ್ಞಾನಂದ್​ಗೆ 50 ಲಕ್ಷ ಗೌರವಧನ ನೀಡಿದ ಸಿಎಂ ವಿಜಯ್!

Btv Kannada
Author: Btv Kannada

Leave a Comment

Read More