ಬೆಂಗಳೂರು : ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಅಧಿಕಾರ ಸ್ವೀಕಾರ ಮಾಡಿ ಸಂಪುಟ ಸಚಿವರಿಗೆ ಖಾತೆ ಹಂಚಿಕೆ ಮಾಡಿದ ಬೆನ್ನಲ್ಲೇ ಮೊದಲ ವಿಕೆಟ್ ಪತನವಾಗಿದೆ. ಬೆಂಗಳೂರು ಅಭಿವೃದ್ಧಿ ಖಾತೆ ಸಿಗಲಿಲ್ಲ ಎಂಬ ಕಾರಣಕ್ಕೆ ತೀವ್ರ ಅಸಮಾಧಾನಗೊಂಡಿರುವ ರಾಮಲಿಂಗಾ ರೆಡ್ಡಿ ಇಂದು ಬೆಳಗ್ಗೆ ಸಚಿವ ಸ್ಥಾನಕ್ಕೆ ಅಧಿಕೃತವಾಗಿ ರಾಜೀನಾಮೆ ನೀಡಿದ್ದಾರೆ.

ನನಗೆ ತಮ್ಮ ಸಂಪುಟದಲ್ಲಿ ಸಚಿವ ಸ್ಥಾನ ನೀಡಿದಕ್ಕೆ ತಮಗೂ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ನನ್ನ ಧನ್ಯವಾದಗಳು. ನಾನು ನನ್ನ ಆತ್ಮಸಾಕ್ಷಿ ವಿರುದ್ಧವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗದ ಕಾರಣ ಸಚಿವ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದೇನೆ. ನಾನು ಶಾಸಕರಾಗಿ ಹಾಗೂ ಕಾಂಗ್ರೆಸ್ ಪಕ್ಷದ ಕಾರ್ಯಕರ್ತನಾಗಿ ಮುಂದುವರಿಯುತ್ತೇನೆ ಎಂದು ರಾಜೀನಾಮೆ ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

ಇನ್ನು, ಬೆಂಗಳೂರಿನ ಕೋರಮಂಗಲದ ಕಚೇರಿಯಲ್ಲಿ ಮಹತ್ವದ ಸುದ್ದಿ ನಡೆಸಿದ ರಾಮಲಿಂಗಾ ರೆಡ್ಡಿ, ರಾಜೀನಾಮೆಯ ಹಿಂದಿನ ಅಸಲಿ ಕಾರಣಗಳನ್ನು ಮುಕ್ತವಾಗಿ ಬಿಚ್ಚಿಟ್ಟಿದ್ದಾರೆ. ಜಲಸಂಪನ್ಮೂಲ ಇಲಾಖೆ ನೀಡಿದ್ದಕ್ಕೆ ಬೇಸರ ಎಂಬ ಒಂದೇ ಕಾರಣಕ್ಕೆ ರಾಜೀನಾಮೆ ನೀಡುತ್ತಿಲ್ಲ. ಈಗಿನ ಮುಖ್ಯಮಂತ್ರಿಗಳು ಹಿಂದೆ ಅವರಾಗಿಯೇ ಬೆಂಗಳೂರು ನಗರಾಭಿವೃದ್ಧಿ ಖಾತೆ ಕೊಡುವ ಬಗ್ಗೆ ಭರವಸೆ ನೀಡಿದ್ದರು. ಆದರೆ, ಅದರಂತೆ ನಡೆದುಕೊಂಡಿಲ್ಲ. ಈ ವಿಚಾರ ಜನರಿಗೆ ತಿಳಿಯಬೇಕು ಎಂದು ಹೇಳಿದರು.
ನನಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರ ಮೇಲಾಗಲಿ ಅಥವಾ ಸಿದ್ದರಾಮಯ್ಯ ಅವರ ಮೇಲಾಗಲಿ ಯಾವುದೇ ವೈಯಕ್ತಿಕ ಕೋಪವಿಲ್ಲ. ನಾನು ಯಾವ ಕಾರಣಕ್ಕಾಗಿ ರಾಜೀನಾಮೆ ನೀಡಿದ್ದೇನೆ ಎಂಬ ಸತ್ಯ ಜನರಿಗೆ ಗೊತ್ತಾಗಬೇಕಷ್ಟೇ. ನಾನು ಕಳೆದ 53 ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಒಬ್ಬ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತಿದ್ದೇನೆ. ಪಕ್ಷ ನನಗೆ ಸಾಕಷ್ಟು ಅವಕಾಶಗಳನ್ನು ಮಾಡಿಕೊಟ್ಟಿದೆ. ನಾನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆಯೇ ಹೊರತು, ಕಾಂಗ್ರೆಸ್ ಪಕ್ಷಕ್ಕಲ್ಲ. ನನ್ನ ಜೀವನದಲ್ಲಿ ಎಂದಿಗೂ ಕಾಂಗ್ರೆಸ್‌ಗೆ ರಾಜೀನಾಮೆ ನೀಡಿಲ್ಲ, ಮುಂದೆಯೂ ನೀಡುವುದಿಲ್ಲ ಎಂದರು.
ಇದನ್ನೂ ಓದಿ : ವಾಹನ ಸವಾರರಿಗೆ ಗುಡ್ ನ್ಯೂಸ್ – ಟ್ರಾಫಿಕ್ ಫೈನ್ ಪಾವತಿಗೆ ಮತ್ತೆ 50% ಡಿಸ್ಕೌಂಟ್!









