ಮಡಿಕೇರಿ : ತಾನೇ ತಪ್ಪು ಮಾಡಿ ಪ್ರವಾಸಿಗರ ಮೇಲೆಯೇ ಸುಳ್ಳು ದೂರು ನೀಡಿ ನಂಬಿಸಲು ಹೋದ ಹೋಟೆಲ್ ಮಾಲೀಕನೊಬ್ಬನ ಅಸಲಿ ಬಣ್ಣ ಈಗ ವಿಡಿಯೋ ಸಮೇತ ಬಯಲಾಗಿದೆ. ಮಡಿಕೇರಿಯ ಬ್ಲಾಸಮ್ ಹೋಟೆಲ್ ಮಾಲೀಕ ಆಗ್ನೇಶ್ ಸುಳ್ಳು ದೂರು ನೀಡಿದ ಭೂಪ.

ಬೆಂಗಳೂರು ಮೂಲದ ಯಾಸಿನ್ ಎಂಬುವವರ ಕುಟುಂಬ ಅಬ್ಬಿ ಫಾಲ್ಸ್ ವೀಕ್ಷಿಸಿ ವಾಪಸ್ ಆಗುತ್ತಿತ್ತು. ಮಡಿಕೇರಿ ರಸ್ತೆಯ ಬ್ಲಾಸಮ್ ಹೋಟೆಲ್ ಬಳಿ ಊಟಕ್ಕಾಗಿ ಕಾರು ನಿಲ್ಲಿಸಿದ್ದರು. ಈ ವೇಳೆ ಕೇವಲ ಒಂದು ಚಿಪ್ಸ್ ಪ್ಯಾಕೆಟ್ ವಿಚಾರವಾಗಿ ಹೋಟೆಲ್ ಮಾಲೀಕ ಆಗ್ನೇಶ್ ಹಾಗೂ ಯಾಸಿನ್ ಕುಟುಂಬದ ನಡುವೆ ಗಲಾಟೆ ನಡೆದಿದೆ. ಈ ವೇಳೆ ಪ್ರವಾಸಿಗರು ನಮಗೆ ನಿಮ್ಮ ಹೋಟೆಲ್ನಲ್ಲಿ ಊಟವೇ ಬೇಡ ಎಂದು ಕಾರು ಹತ್ತಲು ಹೋಗಿದ್ದಾರೆ.
ಊಟ ಬೇಡ ಎಂದಿದ್ದಕ್ಕೆ ಆಗ್ನೇಶ್ ಮಚ್ಚಿಡಿದು ಪ್ರವಾಸಿಗರಿಗೆ ಹೊಡೆಯೋಕೆ ಹೋಗಿದ್ದ. ಹೆದರಿದ ಯಾಸಿನ್ ಕುಟುಂಬ ಕಾರಿನಲ್ಲಿ ಬೆಂಗಳೂರಿಗೆ ವಾಪಸ್ಸಾಗಿತ್ತು. ಆದ್ರೆ, ಹೋಟೆಲ್ ಮಾಲೀಕ ಆಗ್ನೇಶ್ ಯಾಸಿನ್ ಕುಟುಂಬದ ವಿರುದ್ಧ ಮಡಿಕೇರಿ ರೂರಲ್ ಠಾಣೆಯಲ್ಲಿ ದೂರು ನೀಡಿದ್ದ.

ಹಿಂದೆ ಮುಂದೆ ನೋಡದ ಪೊಲೀಸರು ಪ್ರವಾಸಿಗರ ಮೇಲೆ FIR ದಾಖಲಿಸಿದ್ದರು. ಇದೀಗ ಹೋಟೆಲ್ ಮಾಲೀಕ ಆಗ್ನೇಶ್ ಮಚ್ಚಿಡಿದು ಓಡಾಡಿರೋ ವೀಡಿಯೊ ರಿವೀಲ್ ಆಗಿದ್ದು, ಸಾಕ್ಷಿ ಸಿಕ್ಕಿಬೀಳುವ ಭಯದಿಂದ ಆಗ್ನೇಶ್ ಪ್ರವಾಸಿಗರ ಮೇಲೆಯೇ ಸುಳ್ಳು ದೂರು ಕೊಟ್ಟಿರೋದು ಬಯಲಾಗಿದೆ.
ಇದನ್ನೂ ಓದಿ : ಕುವೈತ್ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ – ಒಬ್ಬ ಭಾರತೀಯ ಸಾವು!









