ಬೆಂಗಳೂರು : ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಡಿ.ಕೆ ಶಿವಕುಮಾರ್ ಆಡಳಿತ ಚುರುಕುಗೊಳಿಸಿದ್ದಾರೆ. ಇಂದು ವಿಧಾನಸೌಧದಲ್ಲಿ ರಾಜ್ಯದ ಹಿರಿಯ ಐಎಎಸ್ ಮತ್ತು ಐಪಿಎಸ್ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿದ್ದಾರೆ.
ಮೊದಲ ಸಚಿವ ಸಂಪುಟ ಸಭೆಯಲ್ಲಿ ಒಪ್ಪಿಗೆ ಪಡೆದಿರುವ ವಿದ್ಯಾರ್ಥಿಗಳಿಗೆ ಉಚಿತ ಬಸ್ ಪಾಸ್ ಸೇರಿದಂತೆ ಎಲ್ಲಾ 6 ಪ್ರಮುಖ ಯೋಜನೆಗಳನ್ನು ತಕ್ಷಣವೇ ಜಾರಿಗೆ ತರುವಂತೆ ಖಡಕ್ ಸೂಚನೆ ನೀಡಿದ್ದಾರೆ. ಸರ್ಕಾರದ ಸುಗಮ ಆಡಳಿತಕ್ಕೆ ಅಧಿಕಾರಿಗಳೇ ಬೆನ್ನೆಲುಬು ಎಂದಿರುವ ಸಿಎಂ, ಯಾವುದೇ ಕಾರಣಕ್ಕೂ ಆಡಳಿತ ಹಾದಿ ತಪ್ಪಲು ಬಿಡುವುದಿಲ್ಲ ಎಂದು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ (CSR) ನಿಧಿ ದುರ್ಬಳಕೆಯಾಗುತ್ತಿರುವುದು ನನ್ನ ಗಮನಕ್ಕೆ ಬಂದಿದೆ. ಇದಕ್ಕೆ ತಕ್ಷಣವೇ ಬ್ರೇಕ್ ಹಾಕಿ, ಆಡಳಿತದಲ್ಲಿ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು ಎಂದು ಗುಡುಗಿದ್ದಾರೆ.
ಪ್ರತಿಯೊಬ್ಬ ಅಧಿಕಾರಿಯೂ ನಿಮ್ಮ ಆತ್ಮಸಾಕ್ಷಿ ಒಪ್ಪುವ ಹಾಗೆ ಪ್ರಾಮಾಣಿಕವಾಗಿ ಕೆಲಸ ಮಾಡಬೇಕು. ಸಾರ್ವಜನಿಕರ ಕಷ್ಟಗಳಿಗೆ ತಕ್ಷಣ ಸ್ಪಂದಿಸಿ, ಸರ್ಕಾರದ ಯೋಜನೆಗಳನ್ನು ಸಮರ್ಥವಾಗಿ ಜನರಿಗೆ ತಲುಪಿಸಬೇಕು. ಅಭಿವೃದ್ಧಿಯ ಹಾದಿಗೆ ಮೆಟ್ಟಿಲಾಗಿ ಜನ ಮೆಚ್ಚುವಂತೆ ಕೆಲಸ ಮಾಡುವ ಮೂಲಕ ಸರ್ಕಾರಕ್ಕೂ ಒಳ್ಳೆಯ ಹೆಸರು ತನ್ನಿ, ನೀವೂ ಉತ್ತಮ ಹೆಸರು ಗಳಿಸಿ ಎಂದು ಕರೆ ನೀಡಿದ್ದಾರೆ.
ಇದೇ ವೇಳೆ, ಕಾನೂನು ಸುವ್ಯವಸ್ಥೆ ಕಾಪಾಡುವ ಕುರಿತು ಪೊಲೀಸ್ ಅಧಿಕಾರಿಗಳಿಗೆ ಕಠಿಣ ಸೂಚನೆ ನೀಡಿದ ಸಿಎಂ, ರಾಜ್ಯದಲ್ಲಿ ಯಾವುದೇ ರೀತಿಯ ಕಾನೂನುಬಾಹಿರ ಚಟುವಟಿಕೆಗಳಿಗೆ ಆಸ್ಪದ ಕೊಡಬಾರದು ಎಂದಿದ್ದಾರೆ.
ಇದನ್ನೂ ಓದಿ : ಮಚ್ಚು ಹಿಡಿದು ಪ್ರವಾಸಿಗರಿಗೆ ಬೆದರಿಸಿದ್ದ ಹೋಟೆಲ್ ಮಾಲೀಕ – ಟೂರಿಸ್ಟ್ ವಿರುದ್ಧ ಸುಳ್ಳು ದೂರು!









