ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ ಶಿವಕುಮಾರ್ ಆಯ್ಕೆ – ಹೇಗಿತ್ತು ಆಯ್ಕೆ ಪ್ರಕ್ರಿಯೆ?

ಬೆಂಗಳೂರು : ಡಿ.ಕೆ ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆ ಆಗಿದ್ದಾರೆ. ವಿಧಾನಸೌಧದ ಸಮ್ಮೇಳನ ಸಭಾಂಗಣದಲ್ಲಿ ಇಂದು ನಡೆದ ಮಹತ್ವದ ಶಾಸಕರ ಸಭೆಯಲ್ಲಿ ಈ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ.

ಹೊಸ ಶಾಸಕಾಂಗ ಪಕ್ಷದ ನಾಯಕರಾಗಿ ಡಿ.ಕೆ. ಶಿವಕುಮಾರ್ ಅವರ ಹೆಸರನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸೂಚಿಸಿದರು. ಇದನ್ನು ಹಿರಿಯ ನಾಯಕ ಹಾಗೂ ಸಚಿವ ಡಾ. ಜಿ. ಪರಮೇಶ್ವರ್ ಅವರು ಅನುಮೋದಿಸಿದರು. ಸಭೆಯಲ್ಲಿದ್ದ ಎಲ್ಲರೂ ಇದಕ್ಕೆ ಒಕ್ಕೊರಲಿನ ಬೆಂಬಲ ಸೂಚಿಸಿದರು.

ಶಾಸಕರ ಒಮ್ಮತದ ನಿರ್ಧಾರದ ಬೆನ್ನಲ್ಲೇ, ಎಐಸಿಸಿ ಪ್ರಧಾನ ಕಾರ್ಯದರ್ಶಿ ಕೆ.ಸಿ. ವೇಣುಗೋಪಾಲ್ ಅವರು ಡಿ.ಕೆ. ಶಿವಕುಮಾರ್ ನೂತನ ನಾಯಕರಾಗಿ ಆಯ್ಕೆಯಾಗಿದ್ದಾರೆ ಎಂದು ಅಧಿಕೃತವಾಗಿ ಘೋಷಿಸಿದರು.

ಇದಕ್ಕೂ ಮೊದಲು ಸಭೆಯ ಆರಂಭದಲ್ಲಿ ಕಾಂಗ್ರೆಸ್ ಶಾಸಕಾಂಗ ಪಕ್ಷದ ನೂತನ ನಾಯಕನ ಆಯ್ಕೆ ಪ್ರಕ್ರಿಯೆಯು ಸಿಎಂ ಸಿದ್ದರಾಮಯ್ಯ ಅವರ ಪ್ರಸ್ತಾವನೆಯೊಂದಿಗೆ ನಡೆಯಲಿದೆ ಎಂದು ಎಐಸಿಸಿ ಮತ್ತೊಬ್ಬ ಪ್ರಧಾನ ಕಾರ್ಯದರ್ಶಿ ರಣದೀಪ್ ಸಿಂಗ್ ಸುರ್ಜೆವಾಲ ಅವರು ಪ್ರಕಟಿಸಿದ್ದರು.

ನಂತರ, ನಾಯಕನ ಆಯ್ಕೆಯ ಜವಾಬ್ದಾರಿಯನ್ನು ಎಐಸಿಸಿ ವಿವೇಚನೆಗೆ ಬಿಡಲು ಸಿದ್ದರಾಮಯ್ಯ ಅವರು ಒಂದು ಸಾಲಿನ ನಿರ್ಣಯ ಮಂಡಿಸಿದರು. ಇದನ್ನು ಪರಮೇಶ್ವರ್ ಅನುಮೋದಿಸಿದರೆ, ಎಲ್ಲಾ ಶಾಸಕರು ಕೈ ಎತ್ತುವ ಮೂಲಕ ಬೆಂಬಲಿಸಿದರು.

ನಿರ್ಣಯದ ಬೆನ್ನಲ್ಲೇ ಸುರ್ಜೆವಾಲ ಅವರು ಸಭೆಗೆ 10 ನಿಮಿಷಗಳ ವಿರಾಮ ಘೋಷಿಸಿದರು. ಈ ಸಂದರ್ಭದಲ್ಲಿ ಸಿಎಂ ಸಿದ್ದರಾಮಯ್ಯ, ಕೆ.ಸಿ. ವೇಣುಗೋಪಾಲ್ ಹಾಗೂ ಸುರ್ಜೆವಾಲ ಅವರು ಮುಖ್ಯಮಂತ್ರಿಗಳ ಕೊಠಡಿಗೆ ತೆರಳಿದರು. ಅಲ್ಲಿಂದ ವಾಪಸ್ ಬಂದ ನಂತರವೇ ಡಿ.ಕೆ. ಶಿವಕುಮಾರ್ ಅವರ ಹೆಸರು ಅಧಿಕೃತವಾಗಿ ಹೊರಬಿತ್ತು.

ನಂತರ ನೂತನ ನಾಯಕ ಡಿ.ಕೆ ಶಿವಕುಮಾರ್ ಅವರು ನಿರ್ಗಮಿತ ನಾಯಕ ಸಿದ್ದರಾಮಯ್ಯ ಅವರ ಮುಖ್ಯಮಂತ್ರಿ ಅವಧಿಯ ಸೇವೆಯನ್ನು ಕೊಂಡಾಡುವ ನಿರ್ಣಯ ಮಂಡಿಸಿ, ಸಭೆಯ ಬೆಂಬಲ ಕೋರಿದರು. ಸಭೆ ಒಕ್ಕೋರಲಿನಿಂದ ಸಹಮತ ವ್ಯಕ್ತಪಡಿಸಿತು.

ಇದನ್ನೂ ಓದಿ : ಡಿ.ಕೆ. ಶಿವಕುಮಾರ್​​ ಕರ್ನಾಟಕದ ನೂತನ ಸಿಎಂ – ಸಿಎಲ್​​ಪಿ ಸಭೆಯಲ್ಲಿ ಅಧಿಕೃತ ಘೋಷಣೆ!

Btv Kannada
Author: Btv Kannada

Leave a Comment

Read More

Read More