ಮಂಡ್ಯ : ಲೋಕಾಯುಕ್ತರ ಹೆಸರಲ್ಲಿ ಹಣ ಸಂಗ್ರಹಿಸಲಾಗುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದ ಕರುನಾಡ ಸೇವಕರು ಸಂಘಟನೆಯ ಮುಖಂಡ ಎಂ.ಬಿ. ನಾಗಣ್ಣಗೌಡಗೆ ಈಗ ಕಾನೂನು ಸಂಕಷ್ಟ ಎದುರಾಗಿದೆ. ಅವರ ವಿರುದ್ಧ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ಸುಮೊಟೊ ಕೇಸ್ ದಾಖಲಿಸಿಕೊಂಡಿದ್ದಾರೆ.
ಏನಿದು ಘಟನೆ?
ಮೇ 20 ರಿಂದ 22 ರವರೆಗೆ ಮಂಡ್ಯ ಮತ್ತು ಮಳವಳ್ಳಿ ತಾಲ್ಲೂಕುಗಳ ಬಾಕಿ ಪ್ರಕರಣಗಳ ವಿಚಾರಣೆಗಾಗಿ ಉಪಲೋಕಾಯುಕ್ತರು ಮಂಡ್ಯಕ್ಕೆ ಭೇಟಿ ನೀಡಿದ್ದರು. ಈ ಸಂದರ್ಭದಲ್ಲಿ, ಉಪಲೋಕಾಯುಕ್ತರ ಮುಂದಿರುವ ಪ್ರಕರಣಗಳಲ್ಲಿ ಕ್ಲೀನ್ ಚಿಟ್ ಕೊಡಿಸುವುದಾಗಿ ಅಥವಾ ಶಿಕ್ಷೆಯ ಪ್ರಮಾಣ ಕಡಿಮೆ ಮಾಡಿಸುವುದಾಗಿ ಆಮಿಷ ಒಡ್ಡಿ ಅಧಿಕಾರಿಗಳಿಂದ ಸುಮಾರು 2 ಕೋಟಿ ಹಣ ಸಂಗ್ರಹಿಸಲಾಗಿದೆ ಎಂದು ನಾಗಣ್ಣಗೌಡ ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿದ್ದರು. ಅಷ್ಟೇ ಅಲ್ಲದೆ, ಈ ಕುರಿತು ಸರ್ಕಾರದ ಮುಖ್ಯ ಕಾರ್ಯದರ್ಶಿಗೂ ಪತ್ರ ಬರೆದಿದ್ದರು.
ಈ ನಿರಾಧಾರ ಆರೋಪವನ್ನು ಗಂಭೀರವಾಗಿ ಪರಿಗಣಿಸಿರುವ ಉಪಲೋಕಾಯುಕ್ತ ನ್ಯಾಯಮೂರ್ತಿ ಬಿ. ವೀರಪ್ಪ ಅವರು ನಾಗಣ್ಣಗೌಡ ವಿರುದ್ಧ ಕಾನೂನು ಕ್ರಮಕ್ಕೆ ಮುಂದಾಗಿದ್ದಾರೆ.
ಲೋಕಾಯುಕ್ತ ಸಂಸ್ಥೆಯ ಬಗ್ಗೆ ಸಾರ್ವಜನಿಕರಲ್ಲಿ ಅಪನಂಬಿಕೆ ಉಂಟು ಮಾಡಲು ಈ ಕೃತ್ಯ ಮಾಡಲಾಗಿದೆ ಎಂದು ಭಾವಿಸಿ, ಲೋಕಾಯುಕ್ತ ಕಾಯ್ದೆ 1984ರ ಸೆಕ್ಷನ್ 17ರ ಅಡಿಯಲ್ಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು ಎಂದು ಉಪಲೋಕಾಯುಕ್ತರು ಆದೇಶದಲ್ಲಿ ತಿಳಿಸಿದ್ದಾರೆ.
ಈ ಪ್ರಕರಣದ ವಿಚಾರಣೆಯನ್ನು ಜೂನ್ 1ರಂದು ನಿಗದಿಪಡಿಸಲಾಗಿದೆ. ಆದೇಶ ಪ್ರತಿಯನ್ನು ಗೃಹಸಚಿವ, ಸರ್ಕಾರದ ಮುಖ್ಯ ಕಾರ್ಯದರ್ಶಿ ಮತ್ತು ಜಿಲ್ಲಾಧಿಕಾರಿಗೆ ಕಳುಹಿಸಲಾಗಿದೆ.
ಎಸ್ಪಿಗೆ ದೂರು
ಹಣ ವಸೂಲಾತಿಯಲ್ಲಿ ವಕೀಲರೊಬ್ಬರು ಭಾಗಿಯಾಗಿದ್ದಾರೆ ಎಂದು ಸುಳ್ಳು ಆರೋಪ ಮಾಡಲಾಗಿದ್ದು, ಆರೋಪ ಮಾಡಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕೆಂದು ಜಿಲ್ಲಾ ವಕೀಲರ ಸಂಘದ ವತಿಯಿಂದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅವರಿಗೆ ದೂರು ನೀಡಲಾಗಿದೆ.
ಆಧಾರರಹಿತ ಆರೋಪವನ್ನು ಪ್ರಸಾರ ಮಾಡಿದ್ದ ಸಾಮಾಜಿಕ ಮಾಧ್ಯಮಗಳಿಗೂ ಲೋಕಾಯುಕ್ತ ಪೊಲೀಸರು ನೋಟಿಸ್ ನೀಡುತ್ತಿದ್ದಾರೆ’ ಎಂಬ ಮಾಹಿತಿ ಇಲಾಖೆ ಮೂಲಗಳಿಂದ ತಿಳಿದುಬಂದಿದೆ.
ಇದನ್ನೂ ಓದಿ : ವೈಶಾಖ ಹುಣ್ಣಿಮೆ ದಿನ ಹುಟ್ಟಿದ ಮೊಮ್ಮಗಳ ಕಾಲ್ಗುಣ – ಡಿಕೆ ಶಿವಕುಮಾರ್ಗೆ ಒಲಿದ ಮುಖ್ಯಮಂತ್ರಿ ಪಟ್ಟ!








