ಬೆಂಗಳೂರು : ಸಿಲಿಕಾನ್ ಸಿಟಿ ಬೆಂಗಳೂರಲ್ಲಿ ಬರೋಬ್ಬರಿ 100 ಕೋಟಿಗೂ ಹೆಚ್ಚು ಮಾಲ್ಯದ ಭೂಗಳ್ಳತನ ಪ್ರಕರಣ ಬೆಳಕಿಗೆ ಬಂದಿದ್ದು, ನಕಲಿ ಜಿಪಿಎ ಪತ್ರಗಳನ್ನು ಸೃಷ್ಟಿಸಿಕೊಂಡು ಕುಖ್ಯಾತ ಭೂಗಳ್ಳ ಶಾಲೂಮ್ ಕುಮಾರ್ ಅರ್ಕಾವತಿ ಲೇಔಟ್ ಮತ್ತು ಒಎಂಬಿಆರ್ ಲೇಔಟ್ ಸೇರಿದಂತೆ ಹಲವು ಕಡೆಗಳಲ್ಲಿ ಬಿಡಿಎಗೆ ಸೇರಿದ 100 ಕೋಟಿಗೂ ಹೆಚ್ಚು ಬೆಲೆ ಬಾಳುವ ಸೈಟ್‌ಗಳನ್ನು ಕಬಳಿಸುತ್ತಿದ್ದ. ಇದೀಗ ಖತರ್ನಾಕ್ ಭೂಗಳ್ಳ ಶಾಲೂಮ್ ಕುಮಾರ್ನನ್ನು ಶೇಷಾದ್ರಿಪುರಂ ಪೊಲೀಸರು ಬಂಧಿಸಿದ್ದಾರೆ.

ಈ ದಂಧೆಗೆ ಬಿಡಿಎ ಒಳಗಿನ ಅಧಿಕಾರಿಗಳೇ ಸಾಥ್ ನೀಡಿರುವುದು ಈಗ ಬೆಳಕಿಗೆ ಬಂದಿದ್ದು, ಶಾಲೂಮ್ ಕುಮಾರ್‌ನ ಈ ನಕಲಿ ದಂಧೆಗೆ ಸಂಪೂರ್ಣ ಸಹಕಾರ ನೀಡುತ್ತಿದ್ದ ಆರೋಪದ ಮೇಲೆ ಬಿಡಿಎ ಉತ್ತರ ವಿಭಾಗದ AEE ಜಯರಾಮ್ ವಿರುದ್ಧ ಕೂಡ ಪ್ರಕರಣ ದಾಖಲಾಗಿದೆ. ಕೇಸ್ ದಾಖಲಾಗುತ್ತಿದ್ದಂತೆ ಉತ್ತರ ವಿಭಾಗದ AEE ಜಯರಾಮ್ ತಲೆಮರಿಸಿಕೊಂಡಿದ್ದಾನೆ.

ಶಾಲೂಮ್ ಕುಮಾರ್ ಮತ್ತು ಆತನ ಗ್ಯಾಂಗ್ ನಡೆಸುತ್ತಿದ್ದ ನಕಲಿ ಜಿಪಿಎ ದಂಧೆಯ ಕುರಿತು ಬಿಡಿಎ ವಿಜಿಲೆನ್ಸ್ ಡಿಪಾರ್ಟ್ಮೆಂಟ್‌ಗೆ ಹತ್ತಕ್ಕೂ ಹೆಚ್ಚು ದೂರುಗಳು ಬಂದಿದ್ದವು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ಬಿಡಿಎ ವಿಜಿಲೆನ್ಸ್ ವಿಭಾಗದ ಎಸ್‌ಪಿ ನಾಗರಾಜ್ ಅವರು ಈ ಬಗ್ಗೆ ತನಿಖೆ ನಡೆಸಿದ್ದರು.

ತನಿಖೆಯ ವೇಳೆ ಶಾಲೂಮ್ ಕುಮಾರ್ ಮತ್ತು ಆತನ ಗ್ಯಾಂಗ್ ಅರ್ಕಾವತಿ ಮತ್ತು ಒಎಂಬಿಆರ್ ಲೇಔಟ್‌ಗಳಲ್ಲಿ ಬಿಡಿಎ ಸೈಟ್‌ಗಳನ್ನು ನಕಲಿ ಜಿಪಿಎ ಮೂಲಕ ಸುಮಾರು 100 ಕೋಟಿಗೂ ಹೆಚ್ಚು ಬೆಲೆ ಬಾಳುವ ಸೈಟ್‌ಗಳನ್ನು ಲೂಟಿ ಮಾಡಿರುವುದು ಪತ್ತೆಯಾಗಿದೆ. ಎಸ್‌ಪಿ ನಾಗರಾಜ್ ಅವರು ಲೂಟಿಯ ಸಂಪೂರ್ಣ ವಿವರಗಳನ್ನೊಳಗೊಂಡ ತನಿಖಾ ವರದಿಯನ್ನು ಬಿಡಿಎ ಕಮಿಷನರ್ ಮೇಜರ್ ಮಣಿವಣ್ಣನ್ ಅವರಿಗೆ ಸಲ್ಲಿಸಿದ್ದರು.

ವರದಿಯನ್ನು ಪರಿಶೀಲಿಸಿದ ಕಮಿಷನರ್ ಮೇಜರ್ ಮಣಿವಣ್ಣನ್ ಅವರು ತಕ್ಷಣವೇ ಶಾಲೂಮ್ ಕುಮಾರ್ ವಿರುದ್ಧ FIR ದಾಖಲಿಸಲು ಖಡಕ್ ಆದೇಶ ನೀಡಿದ್ದರು. ಬಿಡಿಎ ಕಮಿಷನರ್ ಆದೇಶದ ಬೆನ್ನಲ್ಲೇ ಬಿಡಿಎ ವಿಜಿಲೆನ್ಸ್ ವಿಭಾಗದ ಪೊಲೀಸ್ ಅಧಿಕಾರಿ ಗೋವಿಂದರಾಜು ಶೇಷಾದ್ರಿಪುರಂ ಪೊಲೀಸ್ ಠಾಣೆಗೆ ದೂರು ಸಲ್ಲಿಸಿದ್ದರು. ಈ ದೂರಿನ ಆಧಾರದ ಮೇಲೆ ಪೊಲೀಸರು ಭೂಗಳ್ಳ ಶಾಲೂಮ್ ಕುಮಾರ್ ವಿರುದ್ಧ ಐಪಿಸಿ ಸೆಕ್ಷನ್ 471, 419, 465, 420, 120B, 468, 34 ಅಡಿಯಲ್ಲಿ ಎಫ್ಐಆರ್ ದಾಖಲಿಸಿದ್ದರು.

ಶೇಷಾದ್ರಿಪುರಂ ಪೊಲೀಸರು ತಡರಾತ್ರಿ ಕಾರ್ಯಾಚರಣೆ ನಡೆಸಿ ಶಾಲೂನ್ ಕುಮಾರ್ನನ್ನು ಅರೆಸ್ಟ್ ಮಾಡಿದ್ದಾರೆ. ಇನ್ನಿಬ್ಬರು ಭೂಗಳ್ಳರು ಎಸ್ಕೇಪ್ ಆಗಿದ್ದು, ಜೊತೆಗೆ ಉತ್ತರ ವಿಭಾಗದ AEE ಜಯರಾಮ್ ಕೂಡ ಪರಾರಿಯಾಗಿದ್ದಾನೆ. ಉಳಿದವರ ಬಂಧನಕ್ಕಾಗಿ ಇದೀಗ ಶೇಷಾದ್ರಿಪುರಂ ಪೊಲೀಸರು ವಿಶೇಷ ತಂಡ ರಚಿಸಿದ್ದಾರೆ.







ಇದನ್ನೂ ಓದಿ : ಲೋಕಾಯುಕ್ತ ಹೆಸರಲ್ಲಿ ಕೋಟಿ ಕೋಟಿ ವಸೂಲಿ ಆರೋಪ – ಎಂ.ಬಿ. ನಾಗಣ್ಣಗೌಡ ವಿರುದ್ಧ ಸುಮೊಟೊ ಕೇಸ್ ದಾಖಲು!








