ಕೆ.ರಾಜ್ ಶರಣ್ ನಿರ್ದೇಶನದ ‘ಮದ್ದಾನೆ’ ಟ್ರೈಲರ್ ರಿಲೀಸ್!

ಈ ಹಿಂದೆ ಎಮ್ಮೆ ತಿಮ್ಮ, ಮೊದಲಮಳೆ ಚಿತ್ರಗಳನ್ನು ನಿರ್ದೇಶಿಸಿದ್ದ ಕೆ.ರಾಜ್ ಶರಣ್ ಅವರ ನಿರ್ದೇಶನದ ಮೂರನೇ ಚಿತ್ರ ಮದ್ದಾನೆ. ಎಲ್.ಎಂ. ಫಿಲಂಸ್ ಮೂಲಕ ಲತಾ ಮೂರ್ತಿ ಅವರ ನಿರ್ಮಾಣದ ಈ ಚಿತ್ರದಲ್ಲಿ ಆರ್ಯ ನಾಯಕನಾಗಿ ನಟಿಸಿದ್ದಾರೆ. ಸಹ-ನಿರ್ಮಾಪಕರಾಗಿ ಡಾ. ಮಾರುತಿ ಎನ್ ಈ ಕೈಜೋಡಿಸಿದ್ದಾರೆ. ಬಿಡುಗಡೆಗೆ ಸಿದ್ದವಾಗಿರುವ ಈ ಚಿತ್ರದ ಟ್ರೈಲರ್ ಬಿಡುಗಡೆ ಕಾರ್ಯಕ್ರಮ ನಡೆಯಿತು.

ನಿರ್ದೇಶಕ ರಾಜ್ ಶರಣ್ ಅವರು, ಮದ್ದಾನೆ ಎಂದರೆ ಆ್ಯಂಗ್ರಿ ಎಲಿಫೆಂಟ್, ಅದರ ಬಳಿ ಯಾರೂ ಹೋಗಲು ಸಾಧ್ಯವಿಲ್ಲ. ಆನೆ ರೀತಿಯ ವ್ಯಕ್ತಿ ಹೇಗೆ ಮದ್ದಾನೆಯಾಗಿ ಪರಿವರ್ತನೆಯಾಗ್ತಾನೆ? ಎಂದು ಈ ಚಿತ್ರದಲ್ಲಿ ಹೇಳಿದ್ದೇವೆ. ನಾಯಕನಿಗೆ ಆನೆ, ಮದ್ದಾನೆ ಹೀಗೆ 2 ಶೇಡ್ಸ್ ಪಾತ್ರವಿದೆ. ಮೈಸೂರು, ಮಂಡ್ಯ, ಬೆಂಗಳೂರು, ಚಿತ್ರದುರ್ಗ ಹಾಗೂ ಉತ್ತರ ಕರ್ನಾಟಕದ ಸುತ್ತಮುತ್ತ ಸುಮಾರು 30 ದಿನಗಳ ಕಾಲ ಚಿತ್ರೀಕರಣ ನಡೆಸಿದ್ದೇವೆ‌ ಎಂದು ಹೇಳಿದರು.

ಚಿಕ್ಕ ವಯಸ್ಸಿನಲ್ಲೇ ಮನೆ ಬಿಟ್ಟು ಹೋದ ನಾಯಕ ಮುಂಬೈನಲ್ಲಿ ಆಂಟಿ-ಟೆರರಿಸಂ ಸ್ಕ್ಯಾಡ್ (ATS) ಆಗಿ, ಕುಟುಂಬದವರಿಗೆ ಗೊತ್ತಿಲ್ಲದಂತೆ ಕೆಲಸ ಮಾಡುತ್ತಿರುತ್ತಾನೆ. ಟೆರರಿಸಂ, ಡ್ರಗ್ಸ್ ಮಾಫಿಯಾದಲ್ಲಿ ಭಾಗಿಯಾದವರನ್ನು ಕಂಡು ಹಿಡಿಯಲು ರೌಡಿಸಂಗೆ ಇಳಿಯುತ್ತಾನೆ. ಜೊತೆಗೆ ಕಷ್ಟದಲ್ಲಿರುವ ತನ್ನ ಕುಟುಂಬವನ್ನು ಮತ್ತು ಶತೃಗಳಿಂದ ದೇಶವನ್ನು ಹೇಗೆ ರಕ್ಷಿಸಿಸುತ್ತಾನೆ ಎಂದು ಚಿತ್ರದಲ್ಲಿ ಹೇಳಲಾಗಿದೆ.

ನಾಯಕ ನಟ ಆರ್ಯ ಅವರು, ಮೂಲತಃ ನಾನೊಬ್ಬ ಉಪನ್ಯಾಸಕ, ಕಲೆಯ ಬಗ್ಗೆ ಮೊದಲಿಂದಲೂ ಆಸಕ್ತಿಯಿತ್ತು. ಪಿಹೆಚ್ ಡಿ ಮಾಡುವಾಗ ಯಾಕೆ ನಾನೂ ಆ್ಯಕ್ಟ್ ಮಾಡಬಾರದು ಎನಿಸಿತು. ಈ ಹಿಂದೆ ಕ್ಯಾಂಪಸ್ ಕ್ರಾಂತಿ ಎಂಬ ಚಿತ್ರದಲ್ಲಿ ನಟಿಸಿದ್ದೆ. ಈ ಚಿತ್ರದಲ್ಲಿ ಆ್ಯಂಟಿ ಟೆರರಿಸ್ಟ್ ಸ್ಕ್ಯಾಡ್(ಎಟಿಎಸ್), ದೇಶವಿರೋಧಿಗಳ ವಿರುದ್ದ ಹೋರಾಡುವ ಯುವಕನ ಪಾತ್ರ ಮಾಡಿದ್ದೇನೆ. ದೇಶಭಕ್ತಿ, ಲವ್ ಸ್ಟೋರಿ, ಫ್ಯಾಮಿಲಿ ಸೆಂಟಿಮೆಂಟ್ ನಂಥ ಎಲ್ಲ ಎಂಟರ್ ಟೈನಿಂಗ್ ಅಂಶಗಳನ್ನು ಇಟ್ಟುಕೊಂಡು ಈ ಸಿನಿಮಾ ಮಾಡಿದ್ದೇವೆ. ಈಗಾಗಲೇ ಚಿತ್ರಕ್ಕೆ ಯು/ಎ ಸೆನ್ಸಾರ್ ಸರ್ಟಿಫಿಕೇಟ್ ಸಿಕ್ಕಿದೆ. ಜೂನ್ 12ರಂದು ಚಿತ್ರ ರಿಲೀಸ್ ಆಗುತ್ತಿದೆ ಎಂದರು.

ಚಿತ್ರದ ಛಾಯಾಗ್ರಾಹಕ ನಾಗಭೂಷಣ್ ಪೂಜಾರ್ ಅವರು, ಈ ಚಿತ್ರಕ್ಕೆ ನಾಲ್ಕು ಹಂತಗಳಲ್ಲಿ ಚಿತ್ರೀಕರಣ ನಡೆಸಿದ್ದೇವೆ ಎಂದರು. ಸಂಗೀತ ಹಿನ್ನೆಲೆ ಸಂಗೀತ ನೀಡಿರುವ ಪ್ರಸನ್ನ ಭೋಜಶೆಟ್ಟರ್ ಮಾತನಾಡಿ ನಿರ್ದೇಶಕರ ಜೊತೆ ಇದು ಮೂರನೇ ಚಿತ್ರ. ಚಿತ್ರದಲ್ಲಿ ಒಟ್ಟು ಮೂರು ಹಾಡುಗಳಿದ್ದು, ಅನಿರುಥ್ ಶಾಸ್ತ್ರಿ, ಅಜಯ್ ವಾರಿಯರ್, ರಶ್ಮಿ ಶ್ರೀನಿವಾಸ್ ಜತೆ ನಾನೂ ಸಹ ಹಾಡಿದ್ದೇನೆ ಎಂದರು.

ನಾನು ಈ ಹಿಂದೆ ಕೆಲ ಸೀರಿಯಲ್ ಗಳಲ್ಲಿ ಅಭಿನಯಿಸಿದ್ದೆ. ಇದರಲ್ಲಿ ನಾಯಕನ ತಾಯಿಯಾಗಿ ಕಾಣಿಸಿಕೊಂಡಿದ್ದೇನೆ. ಈ ಕಥೆ ಕೇಳಿ ಇನ್ ಸ್ಪೈರ್ ಆಗಿ ಚಿತ್ರ ನಿರ್ಮಾಣಕ್ಕೆ ಮುಂದಾದೆ, ಸಿನಿಮಾ ಚೆನ್ನಾಗಿ ಬಂದಿದೆ, ಸಪೋರ್ಟ್ ಮಾಡಿ ಎಂದು ಮದ್ದಾನೆ ಚಿತ್ರದ ನಿರ್ಮಾಪಕಿ ಲತಾ ಮೂರ್ತಿ ಹೇಳಿದರು.

ರಾಜೇಶ್ ಚೌಹಾನ್ ಅವರ ಸಂಕಲನ, ಡಾ.ಮಾರುತಿ ಎನ್. ಈ, ಎಸ್. ವಿ. ಶಿವಕುಮಾರ್ (ದಾವಣಗೆರೆ)ಅವರ ಸಾಹಿತ್ಯ,
ಸ್ಟಾರ್ ನಾಗಿ ಅವರ ನೃತ್ಯ ಮದ್ದಾನೆ ಚಿತ್ರಕ್ಕಿದೆ. ಚಿತ್ರದ ಪ್ರಮುಖ ತಾರಾಗಣದಲ್ಲಿ ಆರ್ಯ, ರಾಣಿ, ಶ್ರೀನಿವಾಸ ಮೂರ್ತಿ, ಲತಾ ಮೂರ್ತಿ, ಏಕಾಂಬರಂ, ರಾಮಕೃಷ್ಣ, ಪೂಜಿತ್, ಸುಶ್ಮಿತಾ, ಮನು, ಶಿಶಿ‌ರ್ ಭಾರದ್ವಾಜ್, ಮುನಿ ಶ್ರೀಧರ್, ಲೋಕಿ ಮುಂತಾದವರಿದ್ದಾರೆ.

ಇದನ್ನೂ ಓದಿ : ಸಿಎಂ ನಿವಾಸದಲ್ಲಿ ಬ್ರೇಕ್‌ಫಾಸ್ಟ್‌ ಮೀಟಿಂಗ್‌ – ಸಿದ್ದರಾಮಯ್ಯ ಕಾಲಿಗೆ ಬಿದ್ದು ಆಶೀರ್ವಾದ ಪಡೆದ ಡಿಸಿಎಂ ಡಿಕೆಶಿ!

Btv Kannada
Author: Btv Kannada

Leave a Comment

Read More

Read More