ಬೆಂಗಳೂರು : ಕರ್ನಾಟಕ ಮುಖ್ಯಮಂತ್ರಿ ಸ್ಥಾನಕ್ಕೆ ಸಿದ್ದರಾಮಯ್ಯ ಕೊನೆಗೂ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ. ರಾಜ್ಯಪಾಲರ ಅನುಪಸ್ಥಿತಿಯ ಹಿನ್ನೆಲೆ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಗೆ ಸಿಎಂ ಪದತ್ಯಾಗದ ಪತ್ರ ಸಲ್ಲಿಕೆ ಮಾಡಿದ್ದಾರೆ.
ರಾಜೀನಾಮೆ ಸಲ್ಲಿಕೆ ಬಳಿಕ ಸುದ್ದಿಗೋಷ್ಠಿಯಲ್ಲಿ ಸಿದ್ದರಾಮಯ್ಯ ಮಾತನಾಡಿ, ಹೈಕಮಾಂಡ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ನಾನು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ಹೈಕಮಾಂಡ್ನವರು ರಾಜೀನಾಮೆ ಕೊಡಿ ಎಂದು ಹೇಳಿದ ತಕ್ಷಣ, ನಾನು ನಾಡಿದ್ದು (ಇಂದು) ಕೊಡುತ್ತೇನೆ ಎಂದು ತಿಳಿಸಿದ್ದೆ ಎಂದಿದ್ದಾರೆ.
ಅದರಂತೆಯೇ ನಾನು ಇಂದು ನನ್ನ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದೇನೆ. ನಾನು ಮೊದಲಿನಿಂದಲೂ ಹೇಳುತ್ತಿದ್ದೆ, ಹೈಕಮಾಂಡ್ ಯಾವಾಗ ಸೂಚನೆ ನೀಡುತ್ತದೆಯೋ ಆಗ ನಾನು ರಾಜೀನಾಮೆ ಕೊಡುತ್ತೇನೆ ಎಂದು. ಈಗ ಅದರಂತೆಯೇ ನಡೆದುಕೊಂಡಿದ್ದೇನೆ ಎಂದು ತಿಳಿಸಿದರು.
ನಾನು ರಾಜಭವನಕ್ಕೆ ತೆರಳಿ ರಾಜೀನಾಮೆ ಸಲ್ಲಿಸಿದ್ದೇನೆ. ಆದರೆ ರಾಜ್ಯಪಾಲರು ಸದ್ಯ ಊರಿನಲ್ಲಿ ಇಲ್ಲ, ಅವರು ಇಂದು ರಾತ್ರಿ ವಾಪಸ್ ಬರುತ್ತಾರೆ ಎಂದು ಅಲ್ಲಿನ ಕಚೇರಿಯಲ್ಲಿ ತಿಳಿಸಿದರು. ಹಾಗಾಗಿ, ನನ್ನ ರಾಜೀನಾಮೆ ಪತ್ರವನ್ನು ಅವರ ಕಾರ್ಯದರ್ಶಿಗೆ ಸಲ್ಲಿಸಿ ಬಂದಿದ್ದೇನೆ. ರಾಜ್ಯಪಾಲರು ಬಂದ ಮೇಲೆ ರಾಜೀನಾಮೆ ಅಂಗೀಕಾರ ಮಾಡುತ್ತಾರೆ ಎಂಬ ವಿಶ್ವಾಸವಿದೆ. ಸಂವಿಧಾನದ ಪ್ರಕಾರ ಅವರು ಪ್ರಕ್ರಿಯೆ ನಡೆಸಬೇಕಾಗುತ್ತದೆ ಎಂದರು.
ಇದನ್ನೂ ಓದಿ : ಸಿಎಂ ರಾಜೀನಾಮೆಗೂ ಮುನ್ನವೇ ಸಿದ್ದರಾಮಯ್ಯ ಆಪ್ತ ಕಾರ್ಯದರ್ಶಿ, ವಿಶೇಷ ಕರ್ತವ್ಯಾಧಿಕಾರಿಗಳ ವರ್ಗಾವಣೆ!







