ಕನ್ನಡ ಚಿತ್ರರಂಗದಲ್ಲಿ ನಿರ್ಮಾಪಕಿಯಾಗಿ ತನ್ನದೇ ಆದ ಛಾಪನ್ನು ಮೂಡಿಸಿರುವ ಶಿಲ್ಪಾ ಗಣೇಶ್ ಅವರು ‘ಪಿಚ್ಚರ್’ ಸಿನಿಮಾದ ಹಾಡಿಗೆ ಗಾಯಕಿಯೂ ಆಗಿದ್ದಾರೆ. ತುಳು ಮತ್ತು ಕನ್ನಡದಲ್ಲಿ ನಿರ್ಮಾಣ ಆಗುತ್ತಿರುವ ‘ಪಿಚ್ಚರ್’ ಸಿನಿಮಾವನ್ನು ಶಿಲ್ಪಾ ಅವರೇ ನಿರ್ಮಾಣ ಮಾಡಿದ್ದು, ಈ ಚಿತ್ರದ ‘ಗೋಕುಲದ ರಾಧೆ’ ಹಾಡಿಗೆ ಶಿಲ್ಪಾ ಗಣೇಶ್ ಧ್ವನಿ ನೀಡಿದ್ದಾರೆ.

ಜಸ್ಕರಣ್ ಸಿಂಗ್ ಜೊತೆ ಶಿಲ್ಪಾ ಗಣೇಶ್ ಅವರು ಹಾಡಿದ್ದು, ಶಿಲ್ಪಾ ಅವರ ಅದ್ಭುತ ಕಂಠಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಈ ಹಾಡಿಗೆ 1 ಮಿಲಿಯನ್ ವೀಕ್ಷಣೆಯಾಗಿದೆ. ಗೋಲ್ಡನ್ ಮೂವೀಸ್ ಲಾಂಛನದಲ್ಲಿ ನಿರ್ಮಾಣವಾಗಿರುವ ‘ಪಿಚ್ಚರ್’ ಜುಲೈ 24ರಂದು ತೆರೆಗೆ ಬರಲಿದೆ. ತುಳು ಮತ್ತು ಕನ್ನಡ ಎರಡೂ ಭಾಷೆಗಳಲ್ಲಿ ಈ ಸಿನಿಮಾ ಸಿದ್ಧವಾಗಿದ್ದು, ತುಳು ಚಿತ್ರರಂಗಕ್ಕೆ ನಿರ್ಮಾಪಕಿಯಾಗಿ ಮಾತ್ರವಲ್ಲದೆ, ಈ ಸಿನಿಮಾದ ಮೂಲಕ ಶಿಲ್ಪಾ ಗಣೇಶ್ ಅವರು ಗಾಯಕಿಯಾಗಿ ಪರಿಚಯವಾಗಿರೋದು ವಿಶೇಷ.

ಶಿಲ್ಪಾ ಗಣೇಶ್ ಅವರು ನಿರ್ಮಾಪಕಿಯಾಗಿ ಭಾವನಾತ್ಮಕ ಮೌಲ್ಯ ಇರುವ ಕಥೆಗಳತ್ತ ಒಲವು ತೋರಿಸುತ್ತಾರೆ. ಈ ಕಾರಣದಿಂದ ‘ಪಿಚ್ಚರ್’ ಸಿನಿಮಾದ ಮೇಲೆ ಪ್ರೇಕ್ಷಕರಿಗೆ ನಿರೀಕ್ಷೆ ಮೂಡುವಂತಾಗಿದೆ. ಶಿಲ್ಪಾ ಅವರಿಗೆ ಕನ್ನಡ ಸಿನಿಮಾಗಳ ಜೊತೆಗೆ ವರ್ಷಕ್ಕೆ ಒಂದಾದರೂ ತುಳು ಚಿತ್ರ ನಿರ್ಮಿಸುವ ಯೋಚನೆ ಇದೆ.

ಶಿಲ್ಪಾ ಗಣೇಶ್ ಅವರು ಕೇವಲ ನಿರ್ಮಾಣದ ಹಿಂದೆ ಇರುವ ವ್ಯಕ್ತಿಯಲ್ಲ. ಕಲೆಯ ವಿವಿಧ ಆಯಾಮಗಳತ್ತ ಆಸಕ್ತಿ ಹೊಂದಿರುವ ಸೃಜನಶೀಲ ವ್ಯಕ್ತಿ. ತುಳು ಸಿನಿಮಾಗಳಿಗೆ ಸೀಮಿತ ಬಂಡವಾಳದ ಕಾರಣ ಈ ತನಕ ಕಾಶ್ಮೀರದಲ್ಲಿ ಚಿತ್ರೀಕರಣ ನಡೆದಿಲ್ಲ. ಇದೇ ಮೊದಲ ಬಾರಿಗೆ ಈ ಹಾಡಿನ ಶೂಟಿಂಗ್ ಕಾಶ್ಮೀರದಲ್ಲಿ ಮಾಡಲಾಗಿದೆ.

ನಿತ್ಯಪ್ರಕಾಶ್, ಅಮೃತ ಸುದು ಈ ಹಾಡಿಗೆ ಹೆಜ್ಜೆ ಹಾಕಿದ್ದಾರೆ. ತುಳು ಚಿತ್ರರಂಗದ ಪ್ರತಿಭಾವಂತ ಕಲಾವಿದರು ಈ ಸಿನಿಮಾದಲ್ಲಿ ನಟಿಸಿದ್ದಾರೆ. ಅಲ್ಲದೇ, ಅತಿಥಿ ಪಾತ್ರದಲ್ಲಿ ಗಣೇಶ್ ಅವರು ಕಾಣಿಸಿಕೊಂಡಿದ್ದಾರೆ.
ಸಾಕಷ್ಟು ತುಳು ಸಿನಿಮಾಗಳಲ್ಲಿ ಕೆಲಸ ಮಾಡಿರುವ ಸಂದೀಪ್ ಬೆದ್ರ ರಚನೆ ಮತ್ತು ನಿರ್ದೇಶನದಲ್ಲಿ ‘ಪಿಚ್ಚರ್’ ಸಿನಿಮಾ ಮೂಡಿಬರುತ್ತಿದೆ. ನಾಯಕನಾಗಿ ನಿತ್ಯಪ್ರಕಾಶ್ ಬಂಟ್ವಾಳ ಅವರು ನಟಿಸಿದ್ದು, ನಾಯಕಿಯಾಗಿ ಅಮೃತಾ ಸುದು ಅಭಿನಯಿಸಿದ್ದಾರೆ. ಹೆಸರಾಂತ ಛಾಯಾಗ್ರಾಹಕರಾದ ಸಂತೋಷ್ ರೈ ಪಾತಾಜೆ ಮತ್ತು ಚಂದ್ರಶೇಖರ್ ಅವರು ಛಾಯಾಗ್ರಹಣ ಮಾಡಿದ್ದಾರೆ.

ದೇವದಾಸ್ ಕಾಪಿಕಾಡ್, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ವಾಮಂಜೂರ್, ಸಾಯಿಕೃಷ್ಣ, ವಜ್ರಧೀರ್ ಜೈನ್, ಸದಾಶಿವ ಅಮಿನ್, ಪ್ರಸನ್ನ ಶೆಟ್ಟಿ ಬೈಲೂರ್, ಸಂದೀಪ್ ಶೆಟ್ಟಿ ಮಾಣಿ, ಉಮೇಶ್ ಮಿಜಾರ್, ಜಯಶೀಲ ಮರೊಲಿ, ರೂಪ ವರ್ಕಾಡಿ, ರವಿ ರಾಮಕುಂಜ, ಪುಷ್ಪರಾಜ್ ಬೊಳಾರ್, ಅನಿಲ್ ಉಪ್ಪಳ ಮುಂತಾದವರು ಈ ಚಿತ್ರದ ತಾರಾಬಳಗದಲ್ಲಿದ್ದಾರೆ.
ಇದನ್ನೂ ಓದಿ : “ಮಹಾನ್” ಚಿತ್ರದ ಪ್ರಮುಖಪಾತ್ರದಲ್ಲಿ ನಟ ಕಿರಣ್ ಶ್ರೀನಿವಾಸ್!









