ಬೆಂಗಳೂರು : ಮಡಿಕೇರಿ ದುಬಾರೆ ಆನೆ ಶಿಬಿರದಲ್ಲಿ ನಡೆದ ದುರಂತದ ಬಳಿಕ ರಾಜ್ಯ ಅರಣ್ಯ ಇಲಾಖೆ ಕಠಿಣ ಸುರಕ್ಷತಾ ಕ್ರಮಗಳಿಗೆ ಮುಂದಾಗಿದ್ದು, ರಾಜ್ಯದ ಎಲ್ಲಾ ವನ್ಯಜೀವಿ ಸಫಾರಿಗಳಲ್ಲಿ ಇನ್ನುಮುಂದೆ ತೆರೆದ ಜೀಪ್‌ಗಳ ಬಳಕೆಗೆ ನಿಷೇಧ ಹೇರಲು ರಾಜ್ಯ ಸರ್ಕಾರ ನಿರ್ಧರಿಸಿದೆ.

ದುಬಾರೆ ಶಿಬಿರದಲ್ಲಿ ನಡೆದ ದುರ್ಘಟನೆಯಲ್ಲಿ ಮಹಿಳಾ ಪ್ರವಾಸಿಗೆಯೊಬ್ಬರು ಸಾವನ್ನಪ್ಪಿದ್ದು, ಈ ಘಟನೆ ವನ್ಯಜೀವಿ ಪ್ರವಾಸೋದ್ಯಮದ ಸುರಕ್ಷತೆ ಕುರಿತು ಗಂಭೀರ ಚರ್ಚೆಗೆ ಕಾರಣವಾಗಿದೆ.
ಈ ಹಿನ್ನೆಲೆಯಲ್ಲಿ ಸಚಿವ ಈಶ್ವರ್ ಖಂಡ್ರೆ ಮಾತನಾಡಿ, ಪ್ರವಾಸಿಗರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗುವುದು. ರಾಜ್ಯದ ಐದು ಪ್ರಮುಖ ಹುಲಿ ಸಂರಕ್ಷಿತ ಪ್ರದೇಶಗಳಾದ ಬಂಡೀಪುರ, ನಾಗರಹೊಳೆ, ಕಾಳಿ, ಬಿಳಿಗಿರಿರಂಗನಬೆಟ್ಟ ಮತ್ತು ಭದ್ರಾ ಹಾಗೂ ಮಲೆ ಮಹದೇಶ್ವರ ಬೆಟ್ಟ, ದಾಂಡೇಲಿ, ಕೆ.ಗುಡಿ ಮುಂತಾದೆಡೆ ಪ್ರವಾಸಿಗರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಇಲ್ಲಿಯವರೆಗೆ ತೆರೆದ ಕ್ಯಾಂಪರ್ ವಾಹನಗಳಲ್ಲಿ ಸಫಾರಿ ನಡೆಸಲಾಗುತ್ತಿತ್ತು. ಆದರೆ, ಇನ್ನು ಮುಂದೆ ತೆರೆದ ಕ್ಯಾಂಪರ್ ಬದಲಿಗೆ ಸಂಪೂರ್ಣ ಸುರಕ್ಷಿತವಾದ ಬಸ್ ಸಫಾರಿಗಳನ್ನು ನಡೆಸಲು ಸಚಿವರು ನಿರ್ದೇಶಿಸಿದ್ದಾರೆ.

ಹಾಲಿ ಬಳಕೆಯಲ್ಲಿರುವ ಕ್ಯಾಂಪರ್‌ಗಳನ್ನೇ ಬಳಸಬೇಕಾದ ಅನಿವಾರ್ಯತೆ ಇದ್ದಲ್ಲಿ, ಅವುಗಳಿಗೆ ಕಬ್ಬಿಣದ ಸರಳುಗಳಿಂದ ಕೂಡಿದ ಜಾಲರಿಗಳನ್ನು ಅಳವಡಿಸಬೇಕು. ಇಲ್ಲವೇ ಒಡೆಯಲಾಗದ ಗಾಜಿನ ಕಿಟಕಿಗಳನ್ನು ಅಳವಡಿಸಿ ಸುರಕ್ಷತೆಯನ್ನು ಹೆಚ್ಚಿಸಬೇಕು ಎಂದು ಸಚಿವ ಈಶ್ವರ್ ಖಂಡ್ರೆ ಸೂಚನೆ ನೀಡಿದ್ದಾರೆ.
ರಾಜ್ಯದ ವಿವಿಧ ಭಾಗಗಳಿಂದ ಮಾತ್ರವಲ್ಲ, ವಿದೇಶಗಳಿಂದಲೂ ಪ್ರವಾಸಿಗರು ಬರುತ್ತಿರುವ ಹಿನ್ನೆಲೆಯಲ್ಲಿ ಸುರಕ್ಷತೆಯಲ್ಲಿ ಯಾವುದೇ ರಾಜಿ ಇರಬಾರದು ಎಂದು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.
ಇದಲ್ಲದೆ, ಎಲ್ಲಾ ಸಫಾರಿ ವಾಹನಗಳಲ್ಲಿ ಪ್ರಥಮ ಚಿಕಿತ್ಸೆ ಕಿಟ್ ಕಡ್ಡಾಯವಾಗಿರಬೇಕು ಮತ್ತು ಸಫಾರಿ ಕೇಂದ್ರಗಳ ಬಳಿ ಆಂಬುಲೆನ್ಸ್ ವ್ಯವಸ್ಥೆ ಇರಬೇಕು ಎಂದು ಆದೇಶಿಸಿದ್ದಾರೆ.
ಇದನ್ನೂ ಓದಿ : ಶುರುವಾಗ್ತಿದೆ ತಾಯಿಗಾಗಿ ಬ್ರಹ್ಮಚರ್ಯವನ್ನು ಪಾಲಿಸುತ್ತಿರೋ ಪೈಲ್ವಾನನ ಪ್ರೀತಿಯ ಕಥೆ “ಮರ್ಯಾದೆ ರಾಮಣ್ಣ”!









