“ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು” – ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ವಿರುದ್ಧ ದೀಪಿಕಾ ರೆಡ್ಡಿ ಕಿಡಿ!

ಬೆಂಗಳೂರು : ರಾಜ್ಯ ಯುವ ಕಾಂಗ್ರೆಸ್‌ನಲ್ಲಿ ಆಂತರಿಕ ಭಿನ್ನಮತ ಸ್ಫೋಟಗೊಂಡಿದ್ದು, ಮಾಜಿ ಉಪಾಧ್ಯಕ್ಷೆ ದೀಪಿಕಾ ರೆಡ್ಡಿ ಅಧ್ಯಕ್ಷ ಮಂಜುನಾಥ ಗೌಡ ವಿರುದ್ಧ ‘ಸ್ತ್ರೀ ದ್ವೇಷ’ ಹಾಗೂ ‘ಸೇಡಿನ ರಾಜಕೀಯ’ದ ಗಂಭೀರ ಆರೋಪ ಮಾಡಿದ್ದಾರೆ. 

ಈ ಸಂಬಂಧ ಪ್ರೆಸ್‌ನೋಟ್ ಬಿಡುಗಡೆ ಮಾಡಿರುವ ದೀಪಿಕಾ ರೆಡ್ಡಿ, ತಮ್ಮ ಹುದ್ದೆಯನ್ನು ತಡೆಹಿಡಿದಿರುವ ಕ್ರಮ ಕಾನೂನುಬಾಹಿರ ಹಾಗೂ ಪ್ರತೀಕಾರದ ರಾಜಕೀಯದ ಭಾಗ ಎಂದು ಯುವ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಗೌಡ ವಿರುದ್ಧ ಆರೋಪ ಮಾಡಿದ್ದಾರೆ.

“ಇದು ಶಿಸ್ತಿನ ಕ್ರಮವಲ್ಲ, ವೈಯಕ್ತಿಕ ಸೇಡು. ಸ್ತ್ರೀ ದ್ವೇಷದ ಪಿತೂರಿ ಮತ್ತು ಸೇಡಿನ ರಾಜಕೀಯಕ್ಕೆ ನಾನು ಮೌನವಾಗುವುದಿಲ್ಲ” ಎಂದು ದೀಪಿಕಾ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಯುವ ಕಾಂಗ್ರೆಸ್ ಚುನಾವಣೆಯಲ್ಲಿ ತಾವು 2.95 ಲಕ್ಷ ಮತಗಳನ್ನು ಪಡೆದಿದ್ದು, ದೇಶದಲ್ಲೇ ಅತಿ ಹೆಚ್ಚು ಮತ ಪಡೆದ ಮಹಿಳಾ ಅಭ್ಯರ್ಥಿಗಳಲ್ಲಿ ಒಬ್ಬಳಾಗಿದ್ದೇನೆ ಎಂದು ದೀಪಿಕಾ ರೆಡ್ಡಿ ಹೇಳಿದ್ದಾರೆ.

“ಪುರುಷ ಪ್ರಾಬಲ್ಯದ ರಾಜಕೀಯದಲ್ಲಿ ಹೋರಾಟ ನಡೆಸಿ ಬೆಳೆದಿದ್ದೇನೆ. ಚುನಾವಣೆಯ ಬಳಿಕವೂ ಪಕ್ಷ ಸಂಘಟನೆಗಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದ್ದೇನೆ. ಆದರೆ ಎಚ್.ಎಸ್. ಮಂಜುನಾಥ್ ಅಭದ್ರತೆ ಮತ್ತು ಅಸೂಯೆಯಿಂದ ನಡೆದುಕೊಳ್ಳುತ್ತಿದ್ದಾರೆ” ಎಂದು ಆರೋಪಿಸಿದ್ದಾರೆ.

“ಮಹಿಳಾ ನಾಯಕರನ್ನು ವ್ಯವಸ್ಥಿತವಾಗಿ ಗುರಿಯಾಗಿಸಲಾಗುತ್ತಿದೆ. ಮಂಜುನಾಥ್ ನೇತೃತ್ವದ ಯುವ ಕಾಂಗ್ರೆಸ್‌ನಲ್ಲಿ ಮಹಿಳೆಯರಿಗೆ ಅಸುರಕ್ಷಿತ ವಾತಾವರಣ ನಿರ್ಮಾಣವಾಗಿದೆ” ಎಂದು ಕಿಡಿಕಾರಿದ್ದಾರೆ.

ಚುನಾವಣೆಯ ಬಳಿಕ ರಾಜಕೀಯ ಪಿತೂರಿ ಹಾಗೂ ಮಾನಸಿಕ ಕಿರುಕುಳ ಎದುರಿಸುತ್ತಿರುವುದಾಗಿ ಆರೋಪಿಸಿರುವ ದೀಪಿಕಾ ರೆಡ್ಡಿ, “ಸಾರ್ವಜನಿಕ ಬೆಂಬಲ ಹೊಂದಿರುವ ಮಹಿಳಾ ನಾಯಕರನ್ನು ಬೆದರಿಸಲು ಅಧಿಕಾರ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ. ಆದರೆ ಈ ಕ್ರಮಗಳು ನನ್ನನ್ನು ಬೆದರಿಸಲಾರವು. ಜನಾದೇಶವನ್ನು ಯಾವುದೇ ಆದೇಶ ಅಳಿಸಲಾರದು” ಎಂದು ಹೇಳಿದ್ದಾರೆ.

ಈ ವಿಚಾರವನ್ನು ರಾಷ್ಟ್ರೀಯ ನಾಯಕರ ಗಮನಕ್ಕೂ ತರಲಾಗುವುದು ಎಂದು ದೀಪಿಕಾ ರೆಡ್ಡಿ ತಿಳಿಸಿದ್ದಾರೆ.

ಇದನ್ನೂ ಓದಿ : ಅಕ್ರಮ ಆಸ್ತಿ ಗಳಿಕೆ ಆರೋಪ – ಕಾಂಗ್ರೆಸ್ ಶಾಸಕ ರಮೇಶ ಬಂಡಿಸಿದ್ದೇಗೌಡ ವಿರುದ್ಧ ಚುನಾವಣಾ ಆಯೊಗಕ್ಕೆ ದೂರು!

Btv Kannada
Author: Btv Kannada

Leave a Comment

Read More

Read More