ಭೂಗತ ಪಾತಕಿ ವಿಕ್ಕಿ ಶೆಟ್ಟಿ ಹೆಸರಲ್ಲಿ ರಿಯಲ್ ಎಸ್ಟೇಟ್ ಉದ್ಯಮಿಗೆ ಬೆದರಿಕೆ – FIR ದಾಖಲು!

ಬೆಂಗಳೂರು : ಭೂಗತ ಪಾತಕಿ ವಿಕ್ಕಿಶೆಟ್ಟಿ ಹೆಸರಲ್ಲಿ ಬೆಂಗಳೂರಿನ ವಿದ್ಯಾರಣ್ಯಪುರದ ರಿಯಲ್ ಎಸ್ಟೇಟ್ ಉದ್ಯಮಿಗೆ ಬೆದರಿಕೆ ಹಾಕಿರುವ ಘಟನೆ ನಡೆದಿದೆ. ಕೇಳಿದಷ್ಟು ಹಣ ಕೊಡದಿದ್ದರೆ ಕೊಲೆ ಮಾಡುವುದಾಗಿ ದುಷ್ಕರ್ಮಿಗಳು  ಡೆಡ್‍ಲೈನ್ ನೀಡಿದ್ದು, ಈ ಸಂಬಂಧ ರಿಯಲ್ ಎಸ್ಟೇಟ್ ಉದ್ಯಮಿ ಜಿ.ಕೆ ಶಂಕರ್‌ ಸಿಸಿಬಿಯಲ್ಲಿ FIR ದಾಖಲಿಸಿದ್ದಾರೆ.

ಏ.21 ರಂದು ಬೆಳಗ್ಗೆ ಶಂಕರ್ ಮೊಬೈಲ್‍ಗೆ ಇಂಟರ್‌ನೆಟ್‌ ಕರೆ ಮಾಡಿದ್ದ ಅಪರಿಚಿತ, ತಾನು ವಿಕ್ಕಿಶೆಟ್ಟಿ ಎಂದು ಹೇಳಿಕೊಂಡಿದ್ದ. ಬಳಿಕ ಕೇಳಿದಷ್ಟು ಹಣ ಕೊಡದಿದ್ದರೆ ಮೇ ಮೊದಲ ವಾರದಲ್ಲಿ ನಿಗದಿಯಾಗಿರುವ ನಿಮ್ಮ ಮಗನ ಮದುವೆ ವೇಳೆ ನಿನ್ನನ್ನು ಕೊಲ್ಲುತ್ತೇನೆ ಎಂದು ಬೆದರಿಕೆ ಹಾಕಿದ್ದ.

ಈ ಕರೆಯನ್ನು ಉದ್ಯಮಿ ಶಂಕರ್ ನಿರ್ಲಕ್ಷಿಸಿದ್ದರು. ಇದಾದ ಬಳಿಕ ಪುನಃ ಬೇರೆ ಬೇರೆ ನಂಬರ್‌ನಿಂದ ಆರೇಳು ಬಾರಿ ಕರೆಮಾಡಿ ಪುನಃ ಹಣಕ್ಕೆ ಬೇಡಿಕೆ ಇಡಲಾಗಿತ್ತು. ಬೆದರಿಕೆ ಕರೆಗಳಿಂದ ಕಂಗಾಲಾಗಿದ್ದ ಶಂಕರ್, ತಮ್ಮ ಮೊಬೈಲ್ ಸ್ವಿಚ್ ಆಫ್ ಮಾಡಿದ್ದರು. ಇತ್ತಿಚೆಗೆ ಪುತ್ರನ ಮದುವೆ ಮುಗಿದ ಬಳಿಕ ವಿಕ್ಕಿ ಶೆಟ್ಟಿಯ ಕುರಿತು ತಿಳಿದುಕೊಂಡಿದ್ದ ಅವರು, ಆತನೇ ಈ ಕರೆಗಳನ್ನು ಮಾಡಿಸಿದ್ದನೇ? ಅವನ ಸಹಚರರ ಪಾತ್ರವಿದೆಯೇ? ಇಲ್ಲವೇ ಉದ್ಯಮ ವೈಷಮ್ಯ ಹಿನ್ನೆಲೆಯಲ್ಲಿ ಬೇರೆಯವರು ಕರೆ ಮಾಡಿ ಬೆದರಿಸಿದ್ದರೇ ಎಂಬ ಶಂಕೆಯಲ್ಲಿ ದೂರು ನೀಡಿದ್ದರು. ಇದೀಗ ಈ ಸಂಬಂಧ ತನಿಖೆ ನಡೆಯುತ್ತಿದೆ.

ಮಂಗಳೂರಿನ ವಿಕ್ಕಿ ಶೆಟ್ಟಿ ದೇಶದ ಮೋಸ್ಟ್ ವಾಂಟೆಡ್ ಪಾತಕಿಗಳ ಪಟ್ಟಿಯಲ್ಲಿ ಒಬ್ಬ. ಎರಡು ದಶಕಗಳಿಗೂ ಹೆಚ್ಚಿನ ಕಾಲದಿಂದ ಈತ ವಿದೇಶದಲ್ಲಿ ತಲೆಮರೆಸಿಕೊಂಡಿದ್ದಾನೆ. ವಿಕ್ಕಿ ಶೆಟ್ಟಿ ಬಂಧನಕ್ಕೆ ಸಿಬಿಐ ರೆಡ್‍ಕಾರ್ನರ್ ನೋಟಿಸ್ ಜಾರಿಗೊಳಿಸಿತ್ತು. ದುಬೈ ಅಥವಾ ದಕ್ಷಿಣ ಆಫ್ರಿಕಾ ದೇಶಗಳಲ್ಲಿ ವಿಕ್ಕಿ ಶೆಟ್ಟಿ ಅಡಗಿರುವ ಮಾಹಿತಿ ಇದೆ. ಪಾತಕಿ ರವಿಪೂಜಾರಿ ಬಲಗೈ ಬಂಟನಾಗಿ ಗುರುತಿಸಿಕೊಂಡಿದ್ದ ವಿಕ್ಕಿ, ಬಳಿಕ ಸ್ವಂತ ಸಿಂಡಿಕೇಟ್ ಕಟ್ಟಿದ್ದ. ಕೊಲೆ, ಸುಲಿಗೆ, ಬೆದರಿಕೆಯನ್ನೇ ಕಸುಬು ಮಾಡಿಕೊಂಡಿದ್ದಾನೆ.

ಮಂಗಳೂರಿನ ಹಲವು ಕೊಲೆ ಪ್ರಕರಣಗಳಲ್ಲಿ ಆರೋಪಿಯಾಗಿರುವ ವಿಕ್ಕಿ ಶೆಟ್ಟಿ ವಿರುದ್ಧ ಮಂಗಳೂರು ಪೊಲೀಸರು 2000ನೇ ಇಸವಿಯಲ್ಲಿ ಕೋಕಾ ಕಾಯಿದೆ ಅಡಿ ಪ್ರಕರಣ ದಾಖಲಿಸಿದ್ದರು. 2020ರಲ್ಲಿ ಮಂಗಳೂರಿನಲ್ಲಿ ನಡೆದಿದ್ದ ತುಳು ನಟ ಸುರೇಂದ್ರ ಭಂಡಾರಿ ಕೊಲೆಯಲ್ಲಿ ಆತನ ಪಾತ್ರವಿರುವ ಬಗ್ಗೆ ಸುದ್ದಿ ಹರಿದಾಡಿತ್ತು. ಸದ್ಯಕ್ಕೆ ಸಿಸಿಬಿಯಲ್ಲಿ FIR ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ಇದನ್ನೂ ಓದಿ : ಪೊಲೀಸರ ಕಣ್ತಪ್ಪಿಸಿ ನಿರಾಶ್ರಿತರ ಕೇಂದ್ರದಲ್ಲಿದ್ದ ನಾಲ್ವರು ವಿದೇಶಿ ಅಕ್ರಮ ವಲಸಿಗರು ಎಸ್ಕೇಪ್!

Btv Kannada
Author: Btv Kannada

Leave a Comment

Read More

Read More