ಬೆಂಗಳೂರು : ದೂರು ಸ್ವೀಕರಿಸಿ ಕ್ರಮ ಕೈಗೊಳ್ಳದಿದ್ದರೆ ಪೊಲೀಸ್ ಠಾಣೆಯ ಮುಖ್ಯಸ್ಥರ ವಿರುದ್ಧವೇ ಕ್ರಮ ತೆಗೆದುಕೊಳ್ಳಲಾಗುವುದು ಎಂದು ಬೆಂಗಳೂರು ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ವಾರ್ನಿಂಗ್ ಕೊಟ್ಟಿದ್ದಾರೆ.
ಈ ಬಗ್ಗೆ ಪೊಲೀಸ್ ಕಮಿಷನರ್ ಸೀಮಂತ್ ಕುಮಾರ್ ಸಿಂಗ್ ಮಾತನಾಡಿ, ಠಾಣೆಗೆ ಪ್ರತಿನಿತ್ಯ ಹಲವು ವಿಷಯಗಳಿಗೆ ಸಂಬಂಧಿಸಿದ ದೂರುಗಳು ಬರುತ್ತವೆ. ಆ ದೂರುಗಳಿಗೆ ಠಾಣೆಯ ಮುಖ್ಯಸ್ಥರು ಸಕಾಲದಲ್ಲಿ ಸ್ಪಂದಿಸಬೇಕು. ಠಾಣೆಯ ಮುಖ್ಯಸ್ಥರು ಕಾನೂನಿಗೆ ಅನುಗುಣವಾಗಿ ಕೆಲಸ ಮಾಡಿದರೆ, ಎಲ್ಲವೂ ಸರಿ ಇರುತ್ತದೆ. ಅಲ್ಲದೇ ನೊಂದವರಿಗೆ ನ್ಯಾಯ ಕಲ್ಪಿಸುವ ಕೆಲಸ ಮಾಡಬೇಕು ಎಂದು ಹೇಳಿದರು.
ಠಾಣೆಯ ಕೆಲಸ ಕಾರ್ಯಗಳ ಬಗ್ಗೆ ಕೆಲವು ದೂರುಗಳು ಕೇಳಿ ಬರುತ್ತಿವೆ. ಲೋಪದೋಷಗಳೂ ಪತ್ತೆ ಆಗಿವೆ. ದೂರು ಕೊಡಲು ಠಾಣೆಗೆ ಹೋದಾಗ, ಕೆಲವು ಠಾಣಾಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಆಪಾದನೆಗಳು ಇವೆ. ಮುಂದಿನ ದಿನಗಳಲ್ಲಿ ಆ ರೀತಿಯ ದೂರುಗಳು ಬಾರದಂತೆ ನಿಗಾ ವಹಿಸಬೇಕು ಎಂದಿದ್ದಾರೆ.
ದೂರುದಾರರಿಗೆ ಠಾಣಾಧಿಕಾರಿಗಳು ಸ್ಪಂದಿಸದಿದ್ದರೆ ಹಿರಿಯ ಅಧಿಕಾರಿಗಳನ್ನು ಭೇಟಿ ಮಾಡುತ್ತಾರೆ. ಇದು ಆಗಬಾರದು. ಡಿಸಿಪಿ ಮತ್ತು ಎಸಿಪಿಗಳು ಪ್ರತಿ ಠಾಣೆಗಳಿಗೂ ಭೇಟಿ ನೀಡಿ ಪರಿಶೀಲಿಸಬೇಕು. ಪೊಲೀಸ್ ಇಲಾಖೆಯು ನಗರದಲ್ಲಿ ‘ನಮ್ಮ 112’ ಸೇವೆಯಲ್ಲಿ ಬಹುಭಾಷಾ ವ್ಯವಸ್ಥೆ ಜಾರಿಗೆ ತಂದಿದೆ. ಅದು ಉತ್ತಮವಾಗಿ ಕೆಲಸ ಮಾಡುತ್ತಿದೆ. ನಗರದಲ್ಲಿ ಶೇ 8ರಿಂದ 10ರಷ್ಟು ಅಪರಾಧ ಪ್ರಕರಣಗಳು ಕಡಿಮೆ ಆಗಿವೆ ಎಂದು ಹೇಳಿದರು.
ಇದನ್ನೂ ಓದಿ : ಪ್ರಧಾನಿ ಮೋದಿ ಕರೆ ಬೆನ್ನಲ್ಲೇ ಮೆಟ್ರೋದಲ್ಲಿ ಪ್ರಯಾಣಿಸಿದ ಬಿ.ವೈ. ವಿಜಯೇಂದ್ರ!






