ಬೆಂಗಳೂರು : ಪೆಟ್ರೋಲ್, ಡೀಸೆಲ್ ದರ ಏರಿಕೆ ಹಿನ್ನೆಲೆ ಖಾಸಗಿ ಬಸ್ ಟಿಕೆಟ್ ದರ ಕೂಡ ಹೆಚ್ಚಳವಾಗಲಿದೆ. ರಾಜ್ಯದ ಖಾಸಗಿ ಬಸ್ ಮಾಲೀಕರು ಟಿಕೆಟ್ ದರವನ್ನು ಶೇ.20ರಷ್ಟು ಹೆಚ್ಚಿಸಲು ನಿರ್ಧರಿಸಿದ್ದು, ಇಂದು ಮಧ್ಯರಾತ್ರಿಯಿಂದಲೇ ಈ ದರ ಜಾರಿಗೆ ಬರಲಿದೆ.
ಡೀಸೆಲ್ ಬೆಲೆ ನಿರಂತರ ಏರಿಕೆಯಾಗುತ್ತಿರುವ ಹಿನ್ನೆಲೆ ಕಾರ್ಯಾಚರಣಾ ವೆಚ್ಚಗಳು ಗಣನೀಯವಾಗಿ ಹೆಚ್ಚಾಗಿದ್ದು, ಇದರಿಂದಾಗಿ ದರ ಏರಿಕೆ ಅನಿವಾರ್ಯವಾಗಿದೆ ಎಂದು ಬಸ್ ಮಾಲೀಕರು ಸ್ಪಷ್ಟಪಡಿಸಿದ್ದಾರೆ. ನಿರ್ವಹಣಾ ವೆಚ್ಚ, ಚಾಲಕರ ಹಾಗೂ ಸಿಬ್ಬಂದಿಗಳ ವೇತನ, ವಾಹನಗಳ ನಿರ್ವಹಣೆ ಸೇರಿದಂತೆ ವಿವಿಧ ಖರ್ಚುಗಳು ಹೆಚ್ಚಾಗಿರುವುದರಿಂದ ಈ ತೀರ್ಮಾನ ಕೈಗೊಳ್ಳಲಾಗಿದೆ.
ಬೆಂಗಳೂರು–ಮಂಗಳೂರು ಮಾರ್ಗದಲ್ಲಿ ಮೊದಲು ₹1000 ಇದ್ದ ಟಿಕೆಟ್ ದರ ಇದೀಗ ₹1200ಕ್ಕೆ ಏರಿಕೆಯಾಗಿದೆ. ಇದೇ ರೀತಿ ಬೆಂಗಳೂರು–ಬಾಗಲಕೋಟೆ ಮಾರ್ಗದಲ್ಲಿ ₹800 ಇದ್ದ ದರ ₹1000ಕ್ಕೆ ಏರಿಕೆಯಾಗಿದೆ. ಬೆಂಗಳೂರು–ಕಲಬುರ್ಗಿ ಮಾರ್ಗದಲ್ಲಿ ₹1200 ಇದ್ದ ದರ ಈಗ ₹1400ರಿಂದ ₹1500ರವರೆಗೆ ಹೆಚ್ಚಳ ಕಂಡಿದೆ.
ಇದನ್ನೂ ಓದಿ : ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ NEET ಪರೀಕ್ಷೆ – ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್!








