ನವದೆಹಲಿ : ಇತ್ತೀಚಿನ ಪ್ರಶ್ನೆಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಜೂನ್ 21ರಂದು NEET-UG ಮರುಪರೀಕ್ಷೆ ನಡೆಸಲಿದೆ. ಮುಂದಿನ ವರ್ಷದಿಂದ ಕಂಪ್ಯೂಟರ್ ಆಧಾರಿತ ನೀಟ್ (CBT) ಪರೀಕ್ಷೆ ನಡೆಸಲಾಗುವುದು ಎಂದು ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಹೇಳಿದ್ದಾರೆ.
ಪ್ರಶ್ನೆ ಪರೀಕ್ಷೆಯ ಸೋರಿಕೆಯ ಜವಾಬ್ದಾರಿಯನ್ನು ತೆಗೆದುಕೊಂಡು ಪರೀಕ್ಷಾ ಮಾಫಿಯಾ ವಿರುದ್ಧ ಹೋರಾಡುತ್ತೇವೆ. ಮೇ 3ರಂದು ನಡೆಸಲಾಗಿದ್ದ ನೀಟ್ ಪರೀಕ್ಷೆಯನ್ನು ಈಗಾಗಲೇ ರದ್ದುಗೊಳಿಸಲಾಗಿದ್ದು, ಜೂನ್ 21ಕ್ಕೆ ಮರುಪರೀಕ್ಷೆ ದಿನಾಂಕ ನಿಗದಿಪಡಿಸಲಾಗಿದೆ. ಮುಂದಿನ ವರ್ಷದಿಂದ ನೀಟ್ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ಪರೀಕ್ಷೆ ವಿಧಾನದಲ್ಲಿ ನಡೆಸಲಾಗುವುದು ಎಂದು ಮಾಹಿತಿ ಹಂಚಿಕೊಂಡಿದ್ದಾರೆ.
ಮೇ 3ರಂದು ಪರೀಕ್ಷೆ ನಡೆದ ಬಳಿಕ ಮೇ 7ರಂದು ರಾಷ್ಟ್ರೀಯ ಪರೀಕ್ಷಾ ಮಂಡಳಿಗೆ ದೂರು ಬಂದಿತ್ತು. ಪರೀಕ್ಷೆಗೂ ಮುನ್ನ ಕೆಲವೆಡೆ ನೀಡಲಾಗಿದ್ದ ಗೆಸ್ ಪೇಪರ್‌ನಲ್ಲಿ ಪರೀಕ್ಷೆಯಲ್ಲಿ ನೀಡಲಾಗಿದ್ದ ಹೆಚ್ಚಿನ ಪ್ರಶ್ನೆಗಳು ಬಂದಿದ್ದವು ಎಂದು ಆರೋಪಿಸಲಾಗಿತ್ತು. ಕೂಡಲೇ ಉನ್ನತ ಶಿಕ್ಷಣ ಸಚಿವಾಲಯ ಈ ಸಂಬಂಧ ವಿಚಾರಣೆ ಆರಂಭಿಸಿ, ತನಿಖೆ ಹಸ್ತಾಂತರಿಸಿ ಬೇರೆ ರಾಜ್ಯಗಳನ್ನು ಸಂಪರ್ಕಿಸಿತ್ತು. ಮೇ 12ರಂದು ಗೆಸ್ ಪೇಪರ್ ಹೆಸರಲ್ಲಿ ಮೂಲ ಪ್ರಶ್ನೆ ಪತ್ರಿಕೆ ಸೋರಿಕೆಯಾಗಿರುವುದು ಖಚಿತವಾಗಿದೆ. ಬಳಿಕ ಮೇ 13ರಂದು ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿದೆವು ಎಂದು ಧರ್ಮೇಂದ್ರ ಪ್ರಧಾನ್ ತಿಳಿಸಿದ್ದಾರೆ.
ನಡೆಯುತ್ತಿರುವ ಅಕ್ರಮಗಳ ವಿಷಯದಲ್ಲಿ ನಾವು ಯಾವುದೇ ಕಾರಣಕ್ಕೂ ರಾಜಿಯಾಗುವುದಿಲ್ಲ. ಇದರಿಂದ ಮಕ್ಕಳು ತಮ್ಮ ಹಕ್ಕುಗಳಿಂದ ವಂಚಿರಾಗಲು ಬಿಡುವುದಿಲ್ಲ. ಈ ಪರೀಕ್ಷಾ ಮಾಫಿಯಾ ಬಹುದಿನಗಳಿಂದ ನಡೆಯುತ್ತಿದ್ದು, ಇದರ ವಿರುದ್ಧ ಹೋರಾಟ ನಡೆಸುತ್ತೇವೆ. ಇದರ ಜೊತೆಗೆ ಸಾಮಾಜಿಕ ಜಾಲತಾಣಗಳಲ್ಲಿಯೂ ತಪ್ಪು ಮಾಹಿತಿ ಹರಡುತ್ತಿವೆ. ಈ ಸಂಬಂಧ ಪ್ರಕರಣವನ್ನು ಸಿಬಿಐ ತನಿಖೆಗೆ ನೀಡಿದ್ದು, ವಿಚಾರಣೆ ನಡೆಯುತ್ತಿದೆ. ತಪ್ಪಿತಸ್ಥರ ವಿರುದ್ಧ ಕಠಿಣ ಶಿಕ್ಷೆ ತೆಗೆದುಕೊಳ್ಳಲಾಗುವುದು ಎಂದಿದ್ದಾರೆ.
ಇದನ್ನೂ ಓದಿ : ಮದ್ಯಪ್ರಿಯರಿಗೆ ಗುಡ್ ನ್ಯೂಸ್ – ಬೀರ್, ವಿಸ್ಕಿ ದರ ಇಳಿಕೆ ಮಾಡಿದ ರಾಜ್ಯ ಸರ್ಕಾರ!








