ತಿರುವನಂತಪುರಂ: ಕೇರಳ ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ವಿ.ಡಿ. ಸತೀಶನ್ ಅವರ ಹೆಸರನ್ನು ಘೋಷಣೆ ಮಾಡಲಾಗಿದೆ.
ಕೇರಳ ಕಾಂಗ್ರೆಸ್ ನಾಯಕರಾದ ಕೆ.ಸಿ ವೇಣುಗೋಪಾಲ್, ವಿ.ಡಿ ಸತೀಶನ್ ಮತ್ತು ರಮೇಶ್ ಚೆನ್ನಿತ್ತಲ ಹೆಸರುಗಳು ಪ್ರಮುಖವಾಗಿ ಸಿಎಂ ರೇಸ್ನಲ್ಲಿದ್ದವು. ಆದರೆ ಈ ಪೈಕಿ ವಿ.ಡಿ.ಸತೀಶನ್ ಅವರನ್ನು ನೂತನ ಮುಖ್ಯಮಂತ್ರಿಯಾಗಿ ಆಯ್ಕೆ ಮಾಡಲಾಗಿದೆ.
ಏಪ್ರಿಲ್ 9ರಂದು ಕೇರಳ ವಿಧಾನಸಭಾ ಚುನಾವಣೆ ನಡೆದಿದ್ದು, ಇದರ ಫಲಿತಾಂಶ ಮೇ 4ರಂದು ಪ್ರಕಟಗೊಂಡಿತ್ತು. ಕಾಂಗ್ರೆಸ್ ನೇತೃತ್ವದ ಯುಡಿಎಫ್ 140 ವಿಧಾನಸಭಾ ಸ್ಥಾನಗಳ ಪೈಕಿ 102 ಸ್ಥಾನಗಳನ್ನು ಗೆಲ್ಲುವ ಮೂಲಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿತ್ತು. ಆಡಳಿತಾರೂಢ ಎಲ್ಡಿಎಫ್ ಕೇವಲ 35 ಸ್ಥಾನಗಳನ್ನು ಪಡೆಯುವ ಮೂಲಕ ಹೀನಾಯ ಸೋಲುಂಡಿತ್ತು. ಹೀಗಿದ್ದರೂ ನೂತನ ಸಿಎಂ ಆಯ್ಕೆಗೆ ಬರೋಬ್ಬರಿ 10 ದಿನಗಳನ್ನು ಕಾಂಗ್ರೆಸ್ ನಾಯಕರು ತೆಗೆದುಕೊಂಡಿದ್ದಾರೆ.
ಕೇರಳ ರಾಜ್ಯದ ನೂತನ ಸಿಎಂ ಆಗಿ ವಿ.ಡಿ.ಸತೀಶನ್ ಆಯ್ಕೆ ಬೆನ್ನಲ್ಲೇ ತಿರುವನಂತಪುರಂನಲ್ಲಿರುವ ಕಾಂಗ್ರೆಸ್ ಕಚೇರಿಯಲ್ಲಿ ಕಾರ್ಯಕರ್ತರಿಂದ ಸಂಭ್ರಮಾಚರಣೆ ನಡೆದಿದೆ.
ಇದನ್ನೂ ಓದಿ : ದೇಶದಲ್ಲಿ ಪೆಟ್ರೋಲ್, ಡೀಸೆಲ್ ದರ ಏರಿಕೆ ಮುನ್ಸೂಚನೆ ನೀಡಿದ ಆರ್‌ಬಿಐ ಗವರ್ನರ್!









