ಬೆಂಗಳೂರು : ದೇಶದ ಹಿತದೃಷ್ಟಿಯಿಂದ ಚಿನ್ನ ಮತ್ತು ಇಂಧನ ಬಳಕೆಯನ್ನು ಕಡಿಮೆ ಮಾಡುವಂತೆ ಪ್ರಧಾನಿ ನರೇಂದ್ರ ಮೋದಿ ನೀಡಿರುವ ಕರೆಗೆ ಕಾಂಗ್ರೆಸ್ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದರು. ಈ ಬೆನ್ನಲ್ಲೇ ನಾಯಕ ಆರ್ ಅಶೋಕ್ ಕಾಂಗ್ರೆಸ್ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ್ದಾರೆ.
ಕಾಂಗ್ರೆಸ್ ಪಕ್ಷದ ನೆನಪಿನ ಶಕ್ತಿ ವಿಚಿತ್ರವಾಗಿ ಕೆಲಸ ಮಾಡುತ್ತದೆ. ಪ್ರಧಾನಿ ಮೋದಿ ಆರ್ಥಿಕ ಶಿಸ್ತಿನ ಬಗ್ಗೆ ಮಾತನಾಡಿದರೆ ಕಾಂಗ್ರೆಸ್ಗೆ ಅದು ತಪ್ಪಾಗಿ ಕಾಣುತ್ತದೆ. ಆದರೆ ಇದೇ ರೀತಿಯ ಕರೆಗಳನ್ನು ಹಿಂದೆ ಕಾಂಗ್ರೆಸ್ ಸರ್ಕಾರವೇ ನೀಡಿತ್ತು ಎಂಬುದನ್ನು ಈಗ ಮರೆತಂತಾಗಿದೆ ಎಂದು ಆರ್ ಅಶೋಕ್ ಟೀಕಿಸಿದ್ದಾರೆ.
ತಮ್ಮ ಹೇಳಿಕೆಗೆ ಬಲ ನೀಡಲು ಆರ್ ಅಶೋಕ್ ಮೂರು ಪ್ರಮುಖ ಉದಾಹರಣೆಗಳನ್ನು ಉಲ್ಲೇಖಿಸಿದ್ದಾರೆ. 1967ರಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಭಾರತೀಯರು ಚಿನ್ನ ಖರೀದಿ ಕಡಿಮೆ ಮಾಡಬೇಕು ಎಂದು ಕರೆ ನೀಡಿದ್ದರು. ಆಗ ಕಾಂಗ್ರೆಸ್ ಅದನ್ನು “ರಾಷ್ಟ್ರೀಯ ಶಿಸ್ತು” ಎಂದು ಬಣ್ಣಿಸಿತ್ತು ಎಂದು ನೆನಪಿಸಿದ್ದಾರೆ.
ಇದೇ ರೀತಿ 2013ರಲ್ಲಿ ಯುಪಿಎ ಸರ್ಕಾರದ ಅವಧಿಯಲ್ಲಿ ಹಣಕಾಸು ಸಚಿವರಾಗಿದ್ದ ಪಿ. ಚಿದಂಬರಂ ಜನರು ಚಿನ್ನ ಖರೀದಿ ಕಡಿಮೆ ಮಾಡಬೇಕು ಎಂದು ಮನವಿ ಮಾಡಿದ್ದರು. ಅಂದು ಅದನ್ನು “ಆರ್ಥಿಕ ಜವಾಬ್ದಾರಿ” ಎಂದು ಕಾಂಗ್ರೆಸ್ ಸಮರ್ಥಿಸಿತ್ತು ಎಂದು ಹೇಳಿದ್ದಾರೆ.
ಆದರೆ ಈಗ ಪ್ರಧಾನಿ ಮೋದಿ ವಿದೇಶಿ ವಿನಿಮಯ ಉಳಿಸಲು ಮತ್ತು ರೂಪಾಯಿ ಮೌಲ್ಯ ಬಲಪಡಿಸಲು ಇದೇ ರೀತಿಯ ಕರೆ ನೀಡಿದಾಗ ಕಾಂಗ್ರೆಸ್ ನಾಯಕರು ವಿರೋಧ ವ್ಯಕ್ತಪಡಿಸುತ್ತಿದ್ದಾರೆ. ಭಾರತದ ಆರ್ಥಿಕತೆ ರಾಷ್ಟ್ರೀಯ ಹಿತಾಸಕ್ತಿಯೊಂದಿಗೆ ಮುನ್ನಡೆಯುತ್ತಿರುವುದನ್ನು ಕಾಂಗ್ರೆಸ್ ಒಪ್ಪಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಅಶೋಕ್ ಲೇವಡಿ ಮಾಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಟೀಕೆ ಮಾಡುವ ಮೊದಲು ಕಾಂಗ್ರೆಸ್ ನಾಯಕರು ತಮ್ಮದೇ ಪಕ್ಷದ ಹಳೆಯ ಹೇಳಿಕೆಗಳನ್ನು ಒಮ್ಮೆ ಪರಿಶೀಲಿಸಲಿ ಎಂದು ಅವರು ಖಾರವಾಗಿ ಪ್ರತಿಕ್ರಿಯಿಸಿದ್ದಾರೆ.
ಇದನ್ನೂ ಓದಿ : ದೇವಸ್ಥಾನ, ಬಸ್ ನಿಲ್ದಾಣ, ಶಾಲೆಗಳ ಬಳಿಯಿರುವ 717 ಮದ್ಯದಂಗಡಿ ಮುಚ್ಚಲು ಸಿಎಂ ವಿಜಯ್ ಆದೇಶ!








