ಅಂಜನಾದ್ರಿ ಆಂಜನೇಯನಿಗೆ ನಕಲಿ ಚಿನ್ನ ಕೊಟ್ಟ ಮಹೇಶ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ!

ಕೊಪ್ಪಳ : ಕೆಲ ದಿನಗಳ ಹಿಂದೆ ಕೊಪ್ಪಳದ ಅಂಜನಾದ್ರಿ ಬೆಟ್ಟದ ಆಂಜನೇಯ ಸ್ವಾಮಿ ದೇವಸ್ಥಾನಕ್ಕೆ ಉದ್ಯಮಿ ಮಹೇಶ್ ರೆಡ್ಡಿ ಮತ್ತು ಜನಾರ್ದನ ರೆಡ್ಡಿ ದೇವರಿಗೆ 2.50 ಕೋಟಿ ಮೌಲ್ಯದ ಆಭರಣ ಕೊಟ್ಟು ಸುದ್ದಿಯಾಗಿದ್ರು. ಇದೀಗ ತಪಾಸಣೆ ವೇಳೆ ಆಭರಣಕ್ಕೆ ತಾಮ್ರದ ಮೇಲೆ ಚಿನ್ನದ ಲೇಪನ ಮಾಡಿರುವುದು ಪತ್ತೆಯಾಗಿದೆ.

ಕೇವಲ 28 ಗ್ರಾಂ ಬಂಗಾರ ಇರುವುದು ದೃಢಪಟ್ಟಿದ್ದು, ಈ ಸಂಬಂಧ ಜಿಲ್ಲಾಧಿಕಾರಿಗಳು ಉದ್ಯಮಿಗೆ ಅಧಿಕೃತ ಬಿಲ್ ಸಲ್ಲಿಸುವಂತೆ ನೋಟಿಸ್ ಜಾರಿ ಮಾಡಿದ್ದಾರೆ.

ಕಳೆದ ಮೇ 8ರಂದು ಎಎಂಆರ್ (AMR) ಗ್ರೂಪ್ ಅಧ್ಯಕ್ಷ ಎ. ಮಹೇಶ್ ರೆಡ್ಡಿ ಅವರು ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಜೊತೆ ಸೇರಿ ದೇವಸ್ಥಾನಕ್ಕೆ ಬಂಗಾರದ ಪ್ರಭಾವಳಿ, ಕಿರೀಟ ಹಾಗೂ ಗದೆಯನ್ನು ಅರ್ಪಿಸಿದ್ದರು. ಈ ಆಭರಣಗಳ ಮೌಲ್ಯ ಸುಮಾರು 2.50 ಕೋಟಿ ರೂಪಾಯಿ ಎಂದು ಹೇಳಲಾಗಿತ್ತು. ಆದ್ರೆ ಜಿಲ್ಲಾಡಳಿತದ ಪರೀಕ್ಷೆ ವೇಳೆ ಇದು ಚಿನ್ನ ಲೇಪಿತ ಆಭರಣ ಅನ್ನೋದು ಗೊತ್ತಾಗಿದೆ.

ಉದ್ಯಮಿ ಮಹೇಶ ರೆಡ್ಡಿ ಅವರ ಮನವಿಯ ಮೇರೆಗೆ ಎರಡು ದಿನಗಳ ಕಾಲ ಈ ಆಭರಣಗಳನ್ನು ಆಂಜನೇಯನ ಅಲಂಕಾರಕ್ಕೆ ಬಳಸಲಾಗಿತ್ತು. ಆದರೆ, ಇವುಗಳನ್ನು ಅಧಿಕೃತವಾಗಿ ದೇವಸ್ಥಾನದ ಖಜಾನೆಗೆ ಜಮೆ ಮಾಡಿಕೊಳ್ಳುವ ಮೊದಲು ಜಿಲ್ಲಾಡಳಿತವು ಪರಿಶೀಲನೆ ನಡೆಸಿದಾಗ ಅಚ್ಚರಿಯ ವಿಷಯವೊಂದು ಬೆಳಕಿಗೆ ಬಂದಿದೆ.

2.50 ಕೋಟಿ ಮೌಲ್ಯದ ಚಿನ್ನ ಎಂದು ಹೇಳಲಾದ ಆಭರಣಗಳಲ್ಲಿ ಕೇವಲ 28 ಗ್ರಾಂ ಬಂಗಾರ ಮಾತ್ರ ಪತ್ತೆಯಾಗಿದೆ. ಇವು ಸಂಪೂರ್ಣ ಬಂಗಾರದ ಆಭರಣಗಳಲ್ಲ, ಬದಲಿಗೆ ತಾಮ್ರದ ಮೇಲೆ ಬಂಗಾರದ ಲೇಪನ ಮಾಡಲಾದ ಆಭರಣಗಳು ಎಂಬುದು ತಪಾಸಣೆಯಲ್ಲಿ ದೃಢಪಟ್ಟಿದೆ.

ಇದನ್ನೂ ಓದಿ : ದಕ್ಷ ಟ್ರಾಫಿಕ್ ಪೊಲೀಸ್ ಇನ್ಸ್​ಪೆಕ್ಟರ್​ ಮಹಮ್ಮದ್ ಆಲಿ ವರ್ಗಾವಣೆ – ಪ್ರಶಂಸೆ ವ್ಯಕ್ತಪಡಿಸಿದ MLA ಸುರೇಶ್ ಕುಮಾರ್!

Btv Kannada
Author: Btv Kannada

Leave a Comment

Read More