ಬೆಂಗಳೂರು : ಸಿಲಿಕಾನ್ ಸಿಟಿಯ ಫೇಮಸ್ ರಾಮೇಶ್ವರಂ ಕೆಫೆ ಇದೀಗ ಮತ್ತೆ ಸುದ್ದಿಯಲ್ಲಿದೆ. ಇನ್‌ಸ್ಟಾಗ್ರಾಮ್‌ನಲ್ಲಿ ವೈರಲ್ ಆಗಿರುವ ವಿಡಿಯೋವೊಂದು ಕೆಫೆಯ ಆಹಾರದ ಬೆಲೆ ಮತ್ತು ಗುಣಮಟ್ಟದ ಬಗ್ಗೆ ದೊಡ್ಡ ಚರ್ಚೆಯನ್ನೇ ಹುಟ್ಟುಹಾಕಿದೆ.
ಕೆಫೆಗೆ ಭೇಟಿ ನೀಡಿದ್ದ ಗ್ರಾಹಕರೊಬ್ಬರು ತಮ್ಮ ಅನುಭವವನ್ನು ವಿಡಿಯೋ ಮೂಲಕ ಹಂಚಿಕೊಂಡಿದ್ದು, ಇನ್ನು ಮುಂದೆ ರಾಮೇಶ್ವರಂ ಕೆಫೆಗೆ ಹೋಗುವುದಿಲ್ಲ ಎಂಬ ಶೀರ್ಷಿಕೆಯಲ್ಲಿ ಪೋಸ್ಟ್ ಮಾಡಿದ್ದಾರೆ. ವಿಡಿಯೋದಲ್ಲಿ ಒಂದು ದೋಸೆಯ ಬೆಲೆ ₹375 ಮತ್ತು ಒಂದು ಕಪ್ ಟೀಯ ಬೆಲೆ ₹195 ಎಂದು ಆರೋಪಿಸಿದ್ದಾರೆ.
ಸಾಮಾನ್ಯ ಹೋಟೆಲ್‌ಗಳಿಗಿಂತ ಹತ್ತಾರು ಪಟ್ಟು ಹೆಚ್ಚು ಬೆಲೆ ವಸೂಲಿ ಮಾಡುತ್ತಿರುವುದಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಆಕ್ರೋಶ ವ್ಯಕ್ತವಾಗುತ್ತಿದೆ.
ಬೆಲೆ ಮಾತ್ರವಲ್ಲದೆ, ಆಹಾರದ ರುಚಿ ಮತ್ತು ಸೇವೆಯ ಗುಣಮಟ್ಟದ ಮೇಲೂ ಟೀಕೆಗಳ ಸುರಿಮಳೆ ಹರಿದಿದೆ. “ರಸ್ತೆ ಬದಿ ಹೋಟೆಲ್‌ಗಳಲ್ಲಿ ಕೂಡ ಹೆಚ್ಚು ಚಟ್ನಿ ಮತ್ತು ಸಾಂಬಾರ್ ಸಿಗುತ್ತದೆ, ಆದರೆ ಇಲ್ಲಿ ಅಷ್ಟು ಹಣ ಕೊಟ್ಟರೂ ಕಾಯಬೇಕಾಗಿದೆ” ಎಂದು ಹಲವರು ಕಮೆಂಟ್ ಮಾಡಿದ್ದಾರೆ. ಇನ್ನು ಕೆಲವರು “ಇದು ದೋಸೆಯೋ ಅಥವಾ ಹಪ್ಪಳವೋ?” ಎಂದು ವ್ಯಂಗ್ಯವಾಡಿದ್ದಾರೆ.
ಕಡಿಮೆ ಅವಧಿಯಲ್ಲಿ ಭಾರೀ ಜನಪ್ರಿಯತೆ ಗಳಿಸಿದ್ದ ರಾಮೇಶ್ವರಂ ಕೆಫೆ ಇದೀಗ ದುಬಾರಿ ಬೆಲೆ ಮತ್ತು ಬದಲಾದ ರುಚಿಯಿಂದ ಟೀಕೆಗೆ ಗುರಿಯಾಗಿದೆ. ಸಾಮಾನ್ಯ ಜನರಿಗೆ ತಲುಪದ ಬೆಲೆ ನಿಗದಿ ಹೋಟೆಲ್ ಸಂಸ್ಕೃತಿಗೆ ಒಳ್ಳೆಯದಲ್ಲ ಎಂಬ ಅಭಿಪ್ರಾಯಗಳು ವ್ಯಕ್ತವಾಗುತ್ತಿವೆ.
ಇದರ ನಡುವೆ, ಗ್ರಾಹಕರು “ಪ್ರಚಾರಕ್ಕಿಂತ ಉತ್ತಮ ಗುಣಮಟ್ಟದ ಆಹಾರ ಮತ್ತು ನ್ಯಾಯಯುತ ಬೆಲೆ ಮುಖ್ಯ” ಎಂದು ಒತ್ತಾಯಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಚಾರ ದೊಡ್ಡ ಮಟ್ಟದಲ್ಲಿ ಚರ್ಚೆಯಾಗುತ್ತಿದ್ದು, ಕೆಫೆಯ ಪ್ರತಿಕ್ರಿಯೆ ಏನಿರಲಿದೆ ಎಂಬ ಕುತೂಹಲವೂ ಹೆಚ್ಚಾಗಿದೆ.
ಇದನ್ನೂ ಓದಿ : ಮೃತ್ಯುದೇವತೆಯ ‘ದೇವಿ’ ಹಾಡು ಬಿಡುಗಡೆ – ಓಂ ಸಾಯಿ ಪ್ರಕಾಶ್ ಸಾಥ್!









