ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಪಂದ್ಯಾವಳಿ ದಿನವೇ ಭಾರೀ ಭದ್ರತಾ ಲೋಪ ನಡೆದಿರೋದು ತಡವಾಗಿ ಬೆಳಕಿಗೆ ಬಂದಿದೆ. RCB vs GT ಪಂದ್ಯದ ದಿನ ಕಿಡಿಗೇಡಿಗಳು ಕ್ರೀಡಾಂಗಣದ ನೂರಾರು ಸಿಸಿಟಿವಿ ಕ್ಯಾಮೆರಾಗಳನ್ನು ನಿಷ್ಕ್ರಿಯಗೊಳಿಸಿ ಪೊಲೀಸರನ್ನು ಸಂಕಷ್ಟಕ್ಕೆ ದೂಡಿದ್ದರು.
ಪಂದ್ಯ ನಡೆಯುವ ದಿನದಂದು ಬೆಳಿಗ್ಗೆ ಕ್ರೀಡಾಂಗಣದ ತಾಂತ್ರಿಕ ತಂಡವು ಕ್ಯಾಮೆರಾಗಳನ್ನು ಪರಿಶೀಲಿಸಿದಾಗ, ಬರೋಬ್ಬರಿ 240ಕ್ಕೂ ಹೆಚ್ಚು ಸಿಸಿಟಿವಿ ಕ್ಯಾಮೆರಾಗಳು ಆಫ್‌ಲೈನ್ ಆಗಿರುವುದು ಪತ್ತೆಯಾಗಿದೆ. ಉಪವಿತರಕ ಸಂಸ್ಥೆಯ ಸಿಬ್ಬಂದಿಗಳಿಂದಲೇ ಈ ದುಷ್ಕೃತ್ಯ ನಡೆದಿದೆ.

ಪ್ರವೇಶ ದ್ವಾರಗಳ CCTV, ಎನ್ ವಿ ಆರ್ & ಫೈಬರ್ ಸಂಪರ್ಕಗಳ ಕಡಿತವಾಗಿತ್ತು. ಇದೀಗ ಇಬ್ಬರು ಕಿಡಿಗೇಡಿಗಳನ್ನು ಪತ್ತೆಹಚ್ಚಲಾಗಿದೆ. IVS digital solutions ಎಂಬ ಉಪವಿತರಕ ಸಂಸ್ಥೆಯಲ್ಲಿ ಕೆಲಸ ಮಾಡ್ತಿದ್ದ ಮಂಜುನಾಥ ಇ ಮತ್ತು ಅಬ್ದುಲ್ ಕಲಾಂ ಎಂಬುವವರು ಈ ಕೃತ್ಯವೆಸಗಿದ್ದಾರೆ.

ಈ ಇಬ್ಬರು ಆರೋಪಿಗಳು ಕ್ರೀಡಾಂಗಣವನ್ನು ಪ್ರವೇಶಿಸಲು ಅಗತ್ಯವಾದ ಮಾನ್ಯ ಪಾಸ್‌ಗಳನ್ನು (PASS) ಹೊಂದಿರಲಿಲ್ಲ. ಆದರೂ ಇಬ್ಬರು ಬೆಳಿಗ್ಗೆ 11:30ರ ಸುಮಾರಿಗೆ ನಿಷ್ಕ್ರಿಯಗೊಂಡ ಹಳೆಯ ಕಾರ್ಡ್ ಬಳಸಿಕೊಂಡು ಕ್ರೀಡಾಂಗಣವನ್ನು ಅನಧಿಕೃತವಾಗಿ ಪ್ರವೇಶಿಸಿದ್ದರು.

ಕ್ರೀಡಾಂಗಣವನ್ನು ಪ್ರವೇಶಿಸಿದ ಆರೋಪಿಗಳು, ಎನ್‌ವಿಆರ್ (NVR) ಮತ್ತು ಫೈಬರ್ ಸಂಪರ್ಕಗಳನ್ನು ಉದ್ದೇಶಪೂರ್ವಕವಾಗಿ ತಪ್ಪು ತಪ್ಪಾಗಿ ನಿರ್ವಹಿಸಿ ಅವುಗಳನ್ನು ಕತ್ತರಿಸಿ ಹಾನಿಗೊಳಿಸಿದ್ದಾರೆ. ಇದರಿಂದಾಗಿ ಸಿಸಿಟಿವಿ ಕ್ಯಾಮೆರಾಗಳ ಸಂಪರ್ಕ ಕಡಿತಗೊಂಡಿತ್ತು.
ಆರೋಪಿಗಳ ಕೃತ್ಯದಿಂದ ಹಲವು ಜಾಗದ ಭದ್ರತಾ ವಿಚಾರದಲ್ಲಿ ಸಮಸ್ಯೆ :
ಎಲ್ಲಾ ಪ್ರವೇಶ ದ್ವಾರಗಳಲ್ಲಿ ಸಮಸ್ಯೆ.
ಕ್ರೀಡಾಂಗಣದಲ್ಲಿ ಸುತ್ತಮುತ್ತಲಿನ ಕ್ಯಾಮೆರಾ.
ಡಿ ಕಾರ್ಪೊರೇಟ್ ಸ್ಟ್ಯಾಂಡ್.
ಎಲ್ಲಾ ಕನ್ಕೋರ್ಸ್ಗಳ ಜಾಗದಲ್ಲಿ ಸಮಸ್ಯೆ.
ಕಿಡಿಗೇಡಿಗಳ ಕೃತ್ಯದಿಂದ ಸಿಬ್ಬಂದಿಗಳಿಂದ ಪಂದ್ಯದ ಭದ್ರತಾ ಮೇಲ್ವಿಚಾರಣೆಯಲ್ಲಿ ತೊಡಕು ಉಂಟಾಗಿತ್ತು. ಎಲ್ಲಾ ನ್ಯೂನತೆಗಳ ನಡುವೆಯೂ ಪೊಲೀಸರು ಕಾರ್ಯನಿರ್ವಹಣೆ ಮಾಡಿದ್ದು, ಯಾವುದೇ ಸಮಸ್ಯೆ ಉಂಟಾಗಿಲ್ಲ. ವಿಷಯ ಗೊತ್ತಾಗ್ತಿದ್ದಂತೆ ಪೊಲೀಸರು ಮೇಲಾಧಿಕಾರಿಗಳಿಗೆ ತಿಳಿಸಿ ಬದಲಿ ವ್ಯವಸ್ಥೆ ನಿರ್ಮಿಸಿದ್ದಾರೆ. ಸದ್ಯ ಘಟನೆ ಸಂಬಂಧ ಕಬ್ಬನ್ ಪಾರ್ಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.
ಇದನ್ನೂ ಓದಿ : ಜಿ.ಕೆ. ಮುದ್ದುರಾಜ್ ನಿರ್ದೇಶನದ “ಎಜುಕೇಟಡ್ ಬುಲ್ಸ್” ಟ್ರೈಲರ್ ರಿಲೀಸ್!








