AI ತಂತ್ರಜ್ಞಾನದಲ್ಲಿ ಮೂಡಿಬಂದಿರುವ “ರಾಣಿ ಚೆನ್ನಮ್ಮ” ಚಿತ್ರದ ಟೀಸರ್ ರಿಲೀಸ್!

ಕೃತಕ ಬುದ್ಧಿಮತ್ತೆ (AI) ತಂತ್ರಜ್ಞಾನವನ್ನು ಸೃಜನಾತ್ಮಕವಾಗಿ ಬಳಸಿಕೊಂಡು ನಿರ್ಮಿಸಲಾಗಿರುವ ಐತಿಹಾಸಿಕ ಚಿತ್ರ “ರಾಣಿ ಚೆನ್ನಮ್ಮ”. ಈ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ.

ಕಿತ್ತೂರಿನ ಗರ್ವ, ಧೈರ್ಯ, ಹೆಮ್ಮೆ ಮತ್ತು ಸ್ವಾಭಿಮಾನದ ಪ್ರತೀಕವಾದ ರಾಣಿ ಚೆನ್ನಮ್ಮ ಅವರ ಜೀವನಗಾಥೆಯನ್ನು ಆಧರಿಸಿದ ಈ ಚಿತ್ರವು, ಇತಿಹಾಸ ವನ್ನು ಆಧುನಿಕ ತಂತ್ರಜ್ಞಾನದ ಮೂಲಕ ಪುನರ್ಜೀವಗೊಳಿಸುವ ಮಹತ್ವಾಕಾಂಕ್ಷೆಯ ಪ್ರಯತ್ನವಾಗಿದೆ. “ಕಿತ್ತೂರಿನ ಗತ್ತು … ದೇಶಕ್ಕೆ ಗೊತ್ತು” ಎಂಬ ಅಡಿಬರಹ ಈ ಚಿತ್ರಕ್ಕಿದೆ. ಕೇವಲ ಕಥೆಯನ್ನು ಹೇಳುವುದಲ್ಲ. ಇದು ಇತಿಹಾಸದ ಘರ್ಜನೆ, ಒಂದು ಪೀಳಿಗೆಯನ್ನು ಎಚ್ಚರಿಸುವ ಕೂಗು ಎಂದರೆ ತಪ್ಪಾಗಲಾರದು.

ಈ ಚಿತ್ರದ ಪ್ರಮುಖ ವೈಶಿಷ್ಟ್ಯವೆಂದರೆ, ಚಿತ್ರದಲ್ಲಿನ ದೃಶ್ಯ ವಿನ್ಯಾಸ, ಪಾತ್ರ ರೂಪಕ, ಯುದ್ಧದ ಸನ್ನಿವೇಶಗಳು ಸೇರಿದಂತೆ ಬಹುಪಾಲು ವಿಷುಯಲ್ ಅಂಶಗಳನ್ನು AI ತಂತ್ರಜ್ಞಾನದಿಂದ ರೂಪಿಸಲಾಗಿದೆ. ಕನ್ನಡ ಸಿನೆಮಾದಲ್ಲಿ ಇದು ಹೊಸ ಪ್ರಯೋಗವಾಗಿದ್ದು, ಭವಿಷ್ಯದ ಚಿತ್ರ ನಿರ್ಮಾಣಕ್ಕೆ ಹೊಸ ದಾರಿಯನ್ನು ತೆರೆದಿಡುವ ಉದ್ದೇಶ ಹೊಂದಿದೆ.

ವಿಶೇಷವಾಗಿ, ಈ ಚಿತ್ರದ ವೀಡಿಯೋ ನಿರ್ಮಾಣದಲ್ಲಿ AI ತಂತ್ರಜ್ಞಾನವನ್ನು ಬಳಸಲಾಗಿದ್ದು, ಆಡಿಯೋ ಪ್ರೊಡಕ್ಷನ್ ಸಂಪೂರ್ಣವಾಗಿ ಮ್ಯಾನುಯಲ್ ರೀತಿಯಲ್ಲಿರುತ್ತದೆ. ಇದರಿಂದ ತಂತ್ರಜ್ಞಾನ ಮತ್ತು ಮಾನವ ಸೃಜನಶೀಲತೆಯ ಸಮತೋಲನವನ್ನು ಸಾಧಿಸಲಾಗಿದೆ. ಈ ಚಿತ್ರದಲ್ಲಿ AI ಕ್ರಿಯೇಟಿವ್ ತಂಡಗಳು ಸಹ ಸಕ್ರಿಯವಾಗಿ ಕೆಲಸ ಮಾಡುತ್ತಿದ್ದು, ದೃಶ್ಯ ವೈಭವಕ್ಕೆ ಹೊಸ ಮಟ್ಟವನ್ನು ತಂದಿವೆ.

ಚಿತ್ರದ ನಿರ್ದೇಶನವನ್ನು ಶ್ವೇತಾ ಶೆಟ್ಟಿ ವಹಿಸಿಕೊಂಡಿದ್ದಾರೆ. ಲತಾ ಜೈಪ್ರಕಾಶ್ ಬಿಎಂಕೆ ಪ್ರೊಡಕ್ಷನ್ ಅಡಿಯಲ್ಲಿ ಈ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸಂಕಲನವನ್ನು ಸಂಜೀವ್ ರೆಡ್ಡಿ ನಿರ್ವಹಿಸಿದ್ದು, ಸಂಗೀತವನ್ನು ಶ್ರೀಹರಿ ನೀಡಿದ್ದಾರೆ. ಹಾಡುಗಳನ್ನು ಶಿವನಂಜೆಗೌಡ ಮತ್ತು ಡಾ. ವಿ.ನಾಗೇಂದ್ರ ಪ್ರಸಾದ್ ರಚಿಸಿದ್ದಾರೆ.

ಈ ಚಿತ್ರವು ಕೇವಲ ಐತಿಹಾಸಿಕ ಘಟನೆಗಳ ಪುನರ್‌ಸೃಷ್ಟಿ ಮಾತ್ರವಲ್ಲ. ಇದು ಬ್ರಿಟಿಷರ ವಿರುದ್ಧ ಧ್ವನಿ ಎತ್ತಿದ ಭಾರತದ ಮೊದಲನೇ ಮಹಿಳೆಯ ಮನೋಬಲ, ನಾಯಕತ್ವ ಮತ್ತು ಸ್ವಾತಂತ್ರ್ಯದ ಆಕಾಂಕ್ಷೆಯ ಚಿತ್ರಣವನ್ನು ಕಟ್ಟಿಕೊಡುತ್ತದೆ. ಬ್ರಿಟಿಷ್ ಆಳ್ವಿಕೆಯ ವಿರುದ್ಧ ಧೈರ್ಯವಾಗಿ ನಿಂತ ರಾಣಿ ಚೆನ್ನಮ್ಮ ಅವರ ಹೋರಾಟವು ಇಂದಿಗೂ ಪ್ರೇರಣೆಯಾಗಿದ್ದು, ಈ ಚಿತ್ರವು ಹೊಸ ತಂತ್ರಜ್ಞಾನದ ಮೂಲಕ ಜೀವಂತಗೊಳಿಸುತ್ತದೆ.

ಇದನ್ನೂ ಓದಿ : http://ಬೆಂಗಳೂರಿನ 17 ಕಡೆ ಇಡಿ ದಾಳಿ – BDA ಅಧ್ಯಕ್ಷ ಹ್ಯಾರಿಸ್‌, ನಲಪಾಡ್ ಮನೆ ಮೇಲೆ ರೇಡ್!

Btv Kannada
Author: Btv Kannada

Leave a Comment

Read More