ಮಂಗಳೂರು ಕಮಿಷನರ್ ವಿರುದ್ಧ ದೂರು ಕೊಟ್ಟ ಮತ್ತೊಬ್ಬ ಹಿರಿಯ ಅಧಿಕಾರಿ!

ಬೆಂಗಳೂರು : ಮಂಗಳೂರು ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ವಿರುದ್ಧ ಡಿಜಿಪಿ ಸಲೀಂ ಅವರಿಗೆ DCRE ಎಸ್‌ಪಿ ಕಾಶಿನಾಥ್ ಅವರು ದೂರು ನೀಡಿದ್ದಾರೆ.

IPS ಸುಧೀರ್ ಕುಮಾರ್ ರೆಡ್ಡಿ ಅವರು ತಮಗೆ ನಿರಂತರವಾಗಿ ಮಾನಸಿಕ ಕಿರುಕುಳ ನೀಡುತ್ತಿದ್ದಾರೆ ಹಾಗೂ ಕರ್ತವ್ಯದಲ್ಲಿ ತಾರತಮ್ಯ ಎಸಗುತ್ತಿದ್ದಾರೆ ಎಂದು ಕಾಶಿನಾಥ್ ಆರೋಪಿಸಿದ್ದಾರೆ. ಅಷ್ಟೇ ಅಲ್ಲದೆ, ನನಗೆ ಕೇವಲ 30 ನಿಮಿಷಗಳ ಕಾಲಾವಕಾಶ ನೀಡಿ, ಈ ಐಪಿಎಸ್ ಅಧಿಕಾರಿಯ ಎಲ್ಲಾ ಕರ್ಮಕಾಂಡಗಳನ್ನು ನಿಮ್ಮ ಮುಂದೆ ಬಯಲು ಮಾಡುತ್ತೇನೆ ಎಂದು ಡಿಜಿಪಿಯವರಿಗೆ ಬರೆದ ಪತ್ರದಲ್ಲಿ ನೇರ ಸವಾಲು ಹಾಕಿದ್ದಾರೆ.

ಪತ್ರದಲ್ಲಿ ಏನಿದೆ?

ರಾಜ್ಯದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳು ತಮ್ಮ ಅಧಿಕಾರ ಬಲದಿಂದ ಕೆಳಹಂತದ ಅಧಿಕಾರಿಗಳು/ಸಿಬ್ಬಂದಿ ಮೇಲೆ ದರ್ಪ, ತಾರತಮ್ಯ, ಸ್ವಜನ ಪಕ್ಷಪಾತದಂತಹ ಪ್ರವೃತ್ತಿಗಳನ್ನು ತೋರುತ್ತಿರುತ್ತಾರೆ. ಅದರಲ್ಲೂ ಬೇರೆ ರಾಜ್ಯಗಳಿಂದ ಬಂದು ಕರ್ನಾಟಕದಲ್ಲಿ ಕೆಲಸ ಮಾಡುತ್ತಿರುವ ಕೆಲವು ಐಪಿಎಸ್ ಅಧಿಕಾರಿಗಳು ಮೂಲತಃ ಕರ್ನಾಟಕದಲ್ಲಿಯೇ ಹುಟ್ಟಿ ಬೆಳೆದು ಇಲ್ಲಿಯೇ ತಾಯ್ನಾಡಿನಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಕನ್ನಡಿಗ ಅಧಿಕಾರಿಗಳನ್ನು ಹತ್ತಿಕ್ಕುವ ಉದ್ದೇಶದಿಂದ ವಿಪರೀತ ದರ್ಪ ತೋರಿಸಿ ಅಧಿಕಾರವನ್ನು ದುರುಪಯೋಗ ಪಡಿಸಿಕೊಳ್ಳುತ್ತಿರುತ್ತಾರೆ.

ಹೊರರಾಜ್ಯದಿಂದ ಕನ್ನಡಿಗರ ಸೇವೆಗೆಂದು ಬಂದು ಕನ್ನಡಿಗರಿಂದ ಕೂಲಿ ಪಡೆಯುತ್ತಿರುವ ಮಂಗಳೂರು ಕಮಿಷನರ್‌ವರ ಕರ್ಮಕಾಂಡಗಳು, ಅಧೀನ ಅಧಿಕಾರಿ/ಸಿಬ್ಬಂದಿಗೆ ನೀಡಿರುವ ಕಿರುಕುಳಗಳು. ಮಾಡಿರುವ ದೌರ್ಜನ್ಯಗಳನ್ನು ಹಾಗೂ ಇತರೆ ಕೆಲವು ಐಪಿಎಸ್ ಅಧಿಕಾರಿಗಳ ಕರ್ಮಕಾಂಡವನ್ನು ಮತ್ತು ಕರ್ನಾಟಕದಲ್ಲಿ ಕನ್ನಡಿಗ ಅಧಿಕಾರಿಗಳ ಮೇಲೆ ನಡೆಯುತ್ತಿರುವ ದೌರ್ಜನ್ಯವನ್ನು ಎಳೆಎಳೆಯಾಗಿ ತೆರೆದಿಡುವ ಸದುದ್ದೇಶದಿಂದ ಮುಕ್ತವಾಗಿ ಮಾತಾಡಿ, ಕರ್ಮಕಾಂಡ ಬಯಲು ಮಾಡಲು ಒಂದು ವಾರದೊಳಗೆ ಭೇಟಿಗೆ ಅವಕಾಶ ನೀಡುವಂತೆ ಮನವಿ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ : ಬೆಂಗಳೂರಿನ 17 ಕಡೆ ಇಡಿ ದಾಳಿ – BDA ಅಧ್ಯಕ್ಷ ಹ್ಯಾರಿಸ್‌, ನಲಪಾಡ್ ಮನೆ ಮೇಲೆ ರೇಡ್!

Btv Kannada
Author: Btv Kannada

Leave a Comment

Read More