ಬಾಲಿವುಡ್ ಸುಲ್ತಾನ್ ಸಲ್ಮಾನ್ ಖಾನ್ ಜೊತೆ ‘ಜೈ ಹೋ’ ಮೂಲಕ ಮಿಂಚಿದವರು ನಟಿ ಡೈಸಿ ಶಾ. ಕನ್ನಡದಲ್ಲಿ ಭದ್ರ, ಬಾಡಿಗಾರ್ಡ್ ನಂತಹ ಸಿನಿಮಾಗಳ ಮೂಲಕ ಕನ್ನಡಿಗರಿಗೂ ಚಿರಪರಿಚಿತರಾದ ಈ ಸುಂದರಿ, ಸದಾ ನಗುಮೊಗದಿಂದಲೇ ಪ್ರೇಕ್ಷಕರನ್ನು ರಂಜಿಸುತ್ತಾರೆ. ಆದರೆ ಈ ನಗುವಿನ ಹಿಂದೆ ಅಳಿಸಲಾಗದ ನೋವಿನ ಕಥೆಯೊಂದಿದೆ. ತಾವು ಎದುರಿಸಿದ ‘ಕಾಸ್ಟಿಂಗ್ ಕೌಚ್’ ಎಂಬ ಕರಾಳ ಸತ್ಯವನ್ನು ಡೈಸಿ ಈಗ ಹಂಚಿಕೊಂಡಿದ್ದಾರೆ.

ಸಂದರ್ಶನವೊಂದರಲ್ಲಿ ಮಾತನಾಡಿದ ಡೈಸಿ ಶಾ, ದಕ್ಷಿಣ ಭಾರತದ ನಿರ್ದೇಶಕರೊಬ್ಬರು ತಮಗೆ ನೀಡಿದ ಕಿರುಕುಳದ ಬಗ್ಗೆ ಮನಬಿಚ್ಚಿ ಮಾತನಾಡಿದ್ದಾರೆ. ಆಗ ನಾನು ಚಿತ್ರರಂಗಕ್ಕೆ ಹೊಸಬಳು. ದಕ್ಷಿಣದ ಒಬ್ಬ ಪ್ರಖ್ಯಾತ ನಿರ್ದೇಶಕರು ನಟಿಯರ ಆಯ್ಕೆಗಾಗಿ ಮುಂಬೈಗೆ ಬಂದಿದ್ದರು. ನಾನು ಸೇರಿದಂತೆ ಸುಮಾರು 6-7 ಹುಡುಗಿಯರು ಅವರನ್ನು ಭೇಟಿ ಮಾಡಲು ಹೋಗಿದ್ದೆವು. ಅವರು ಎಲ್ಲರನ್ನೂ ಒಬ್ಬೊಬ್ಬರನ್ನಾಗಿ ಪ್ರತ್ಯೇಕವಾಗಿ ಕರೆದು ಮಾತನಾಡಿಸುತ್ತಿದ್ದರು ಎಂದು ಘಟನೆಯನ್ನು ವಿವರಿಸಿದ್ದಾರೆ.
ನನ್ನ ಸರದಿ ಬಂದಾಗ ನಾನು ಆ ನಿರ್ದೇಶಕನ ಬಳಿ ಹೋದೆ. ಆದರೆ ಅವರು ನನ್ನನ್ನು ಕಂಡ ಕೂಡಲೇ ಅತ್ಯಂತ ಅಸಭ್ಯವಾಗಿ ವರ್ತಿಸಿದರು. ನನ್ನ ಅನುಮತಿ ಇಲ್ಲದೆಯೇ ನನ್ನ ಕೈ ಹಿಡಿದು ತುಂಬಾ ಕೆಟ್ಟದಾಗಿ ಮುಟ್ಟಿದರು. ಅವರ ಆ ಸ್ಪರ್ಶದಲ್ಲಿ ಕಾಮವಿತ್ತು ಹೊರತು ಗೌರವವಿರಲಿಲ್ಲ. ಆ ಕ್ಷಣ ನನಗೆ ಜಿಗುಪ್ಸೆ ಉಂಟಾಯಿತು ಎಂದು ಡೈಸಿ ಆಕ್ರೋಶ ಹೊರಹಾಕಿದ್ದಾರೆ.

ಈ ಘಟನೆ ಅವರ ಮನಸ್ಸಿನ ಮೇಲೆ ಎಷ್ಟು ಪ್ರಭಾವ ಬೀರಿದೆಯೆಂದರೆ, ಇಂದಿಗೂ ಅವರು ಮಸಾಜ್ ಮಾಡಿಸಿಕೊಳ್ಳಲು ಕೂಡ ಭಯಪಡುತ್ತಾರಂತೆ. ಯಾರಾದರೂ ತಮ್ಮನ್ನು ಅನಿರೀಕ್ಷಿತವಾಗಿ ಮುಟ್ಟಿದರೆ ಅವರಿಗೆ ಆಗದ ಅಸಹ್ಯ ಉಂಟಾಗುತ್ತದೆ. ಆದರೆ, ಅಷ್ಟು ಧೈರ್ಯವಾಗಿ ಮಾತನಾಡಿದ ಡೈಸಿ, ಆ ನಿರ್ದೇಶಕ ಯಾರು ಎಂಬ ಹೆಸರನ್ನು ಮಾತ್ರ ಗುಟ್ಟಾಗಿಟ್ಟಿದ್ದಾರೆ.
ಡೈಸಿ ಶಾ ಅವರ ಸಿನಿಮಾ ಪಯಣ ಶುರುವಾಗಿದ್ದು ನೃತ್ಯ ನಿರ್ದೇಶಕ ಗಣೇಶ್ ಆಚಾರ್ಯ ಅವರ ಅಸಿಸ್ಟೆಂಟ್ ಆಗಿ. ನಂತರ ಸಲ್ಮಾನ್ ಖಾನ್ ಕಣ್ಣಿಗೆ ಬಿದ್ದ ಈ ಚೆಲುವೆ, ‘ಜೈ ಹೋ’ ಮೂಲಕ ಸ್ಟಾರ್ ನಟಿಯಾಗಿ ಹೊರಹೊಮ್ಮಿದರು. ‘ಹೇಟ್ ಸ್ಟೋರಿ 3’ ನಂತಹ ಬೋಲ್ಡ್ ಚಿತ್ರಗಳಲ್ಲೂ ನಟಿಸಿ ಪಡ್ಡೆಹೈಕಳ ನಿದ್ದೆ ಗೆಡಿಸಿದರು. ಕನ್ನಡದಲ್ಲಿ ಮೂರು ಹಿಟ್ ಸಿನಿಮಾಗಳನ್ನು ನೀಡಿರುವ ಡೈಸಿ, ಸದ್ಯ ವೆಬ್ ಸರಣಿಗಳತ್ತ ಒಲವು ತೋರುತ್ತಿದ್ದಾರೆ.
ಇದನ್ನೂ ಓದಿ : http://ಕೆಆರ್‌ಎಸ್ ಡ್ಯಾಂ ನೀರಿನ ಮಟ್ಟ 99 ಅಡಿಗೆ ಕುಸಿತ – ಕಾದಿದೆಯೇ ಜಲಕ್ಷಾಮ?








