ಇಸ್ರೇಲ್-ಲೆಬನಾನ್ ಸಂಘರ್ಷಕ್ಕೆ ತಾತ್ಕಾಲಿಕ ಬ್ರೇಕ್ – 10 ದಿನಗಳ ಕದನ ವಿರಾಮ ಘೋಷಣೆ!

ಇರಾನ್ ಮತ್ತು ಅಮೆರಿಕದ ನಡುವೆ ತೀವ್ರ ವಾಕ್ಸಮರ ಹಾಗೂ ಯುದ್ಧದ ಭೀತಿಗೆ ಕಾರಣವಾಗಿದ್ದ ಇಸ್ರೇಲ್ ಮತ್ತು ಲೆಬನಾನ್ ಸಂಘರ್ಷದಲ್ಲಿ ಈಗ ಮಹತ್ವದ ತಿರುವು ಕಂಡುಬಂದಿದೆ. ಅಮೆರಿಕದ ಮಧ್ಯಸ್ಥಿಕೆಯಲ್ಲಿ ನಡೆದ ರಾಜತಾಂತ್ರಿಕ ಮಾತುಕತೆ ಯಶಸ್ವಿಯಾಗಿದ್ದು, ಎರಡೂ ರಾಷ್ಟ್ರಗಳು 10 ದಿನಗಳ ಕದನ ವಿರಾಮಕ್ಕೆ ಸಮ್ಮತಿ ಸೂಚಿಸಿವೆ.

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಈ ಬೆಳವಣಿಗೆಯನ್ನು ಅಧಿಕೃತವಾಗಿ ಖಚಿತಪಡಿಸಿದ್ದು, ಉದ್ವಿಗ್ನತೆಯನ್ನು ಶಮನಗೊಳಿಸಲು 10 ದಿನಗಳ ಕದನ ವಿರಾಮ ಜಾರಿಗೆ ಬರಲಿದೆ ಎಂದಿದ್ದಾರೆ.

ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಿರುವ ಟ್ರಂಪ್, ಲೆಬನಾನ್ ಅಧ್ಯಕ್ಷ ಜೋಸೆಫ್ ಔನ್ ಹಾಗೂ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗೆ ನಡೆದ ಮಾತುಕತೆ ಫಲಪ್ರದವಾಗಿದೆ. ಕದನ ವಿರಾಮ ಒಪ್ಪಂದಕ್ಕೆ ಇಬ್ಬರೂ ನಾಯಕರು ಒಪ್ಪಿಕೊಂಡಿದ್ದಾರೆ. ಲೆಬನಾನ್ ಸ್ಥಳೀಯ ಕಾಲಮಾನ ರಾತ್ರಿ 12 ಗಂಟೆಯ ನಂತರ 10 ದಿನಗಳ ಕಾಲ ಕದನ ವಿರಾಮ ಜಾರಿಯಾಗಲಿದೆ. ಮಂಗಳವಾರ, 34 ವರ್ಷಗಳ ಬಳಿಕ ಮೊದಲ ಬಾರಿಗೆ ಲೆಬನಾನ್ ಮತ್ತು ಇಸ್ರೇಲ್ ಪ್ರತಿನಿಧಿಗಳು ವಾಷಿಂಗ್ಟನ್ ಡಿ.ಸಿ.ಯಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಮಾರ್ಕೊ ರುಬಿಯೊ ಅವರೊಂದಿಗೆ ಚರ್ಚೆ ನಡೆಸಿದ ಹಿನ್ನೆಲೆ ಈ ಬೆಳವಣಿಗೆ ನಡೆದಿದೆ. ಉಪಾಧ್ಯಕ್ಷ ಜೆಡಿ ವ್ಯಾನ್ಸ್ ಹಾಗೂ ವಿದೇಶಾಂಗ ಕಾರ್ಯದರ್ಶಿ ರುಬಿಯೊ ಅವರೊಂದಿಗೆ ಶಾಶ್ವತ ಕದನ ವಿರಾಮಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳಲು ಸೂಚಿಸಲಾಗಿದೆ ಎಂದು ತಿಳಿಸಿದ್ದಾರೆ.

ಈ ಬಗ್ಗೆ ಮಾಹಿತಿ ಹಂಚಿಕೊಳ್ಳುತ್ತಾ ಟ್ರಂಪ್ ಮತ್ತೆ ಬಡಾಯಿ ಕೊಚ್ಚಿಕೊಂಡಿದ್ದಾರೆ. ವಿಶ್ವದ ವಿವಿಧ ಭಾಗಗಳಲ್ಲಿ ಒಂಭತ್ತು ಯುದ್ಧಗಳನ್ನು ನಿಲ್ಲಿಸುವಲ್ಲಿ ಭಾಗಿಯಾಗಿರುವುದು ಗೌರವದ ಸಂಗತಿ. ಇದು ನನ್ನ 10ನೇ ಪ್ರಯತ್ನವಾಗಿದ್ದು, ಇದನ್ನೂ ಅಂತ್ಯಗೊಳಿಸಲು ಬದ್ಧನಾಗಿದ್ದೇನೆ ಎಂದು ಟ್ರಂಪ್ ಅವರು ಹೇಳಿದ್ದಾರೆ. ಈ ಮೂಲಕ ಇಸ್ರೇಲ್ ಲೆಬನಾನ್ ಯುದ್ಧವನ್ನು ಅಂತ್ಯಗೊಳಿಸುವ ಭರವಸೆ ನೀಡಿದ್ದಾರೆ. ಒಂದು ಕಡೆ ಕದನ ವಿರಾಮದ ಮೂಲಕ ಶಾಂತಿ ಮಂತ್ರ ಪಠಿಸುವ ಟ್ರಂಪ್ ಮತ್ತೊಂದು ಕಡೆ ಇರಾನ್ ಮೇಲೆ ದಾಳಿ ಮಾಡುವ ಎಚ್ಚರಿಕೆ ಟ್ರಂಪ್ ನೀಡಿದ್ದಾರೆ.

ಇರಾನ್ ಜೊತೆಗಿನ ಯುದ್ಧದ ಬಗ್ಗೆ ಮಾತನಾಡಿರುವ ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್, ಅಮೆರಿಕದ ಸೇನೆಯು ಸಂಪೂರ್ಣವಾಗಿ ಸಿದ್ಧವಾಗಿದೆ ಮತ್ತು ಅಗತ್ಯವಿದ್ದರೆ ತಕ್ಷಣವೇ ಯುದ್ಧದಂತಹ ಕಾರ್ಯಾಚರಣೆಗಳನ್ನು ಪುನರಾರಂಭಿಸಬಹುದು ಎಂದು ಹೇಳಿದ್ದಾರೆ.

ಇದನ್ನೂ ಓದಿ : ಬ್ಲಾಕ್​ನಲ್ಲಿ ಟಿಕೆಟ್ ಮಾರುತ್ತಿರುವ ಕರ್ನಾಟಕ ಕ್ರಿಕೆಟ್ ಅಸೋಸಿಯೇಷನ್ ಪದಾಧಿಕಾರಿಗಳು – FIR ದಾಖಲು ಹಲವರು ಜೈಲಿಗೆ!

Btv Kannada
Author: Btv Kannada

Leave a Comment

Read More

Read More