ಆಟಗಾರರಿಗೆ ಅವಮಾನ ಆರೋಪ – RCB ವಿರುದ್ಧ ದೂರು ದಾಖಲಿಸಿದ CSK!

ಬೆಂಗಳೂರು : IPL ಇತಿಹಾಸದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಚೆನ್ನೈ ಸೂಪರ್ ಕಿಂಗ್ಸ್ (CSK) ನಡುವಿನ ಪಂದ್ಯಗಳೆಂದರೆ ಅದೊಂದು ಭಾವನಾತ್ಮಕ ಸಮರ. ಆದರೆ, ಈ ಬಾರಿಯ ಹಣಾಹಣಿ ಕೇವಲ ಮೈದಾನದ ಆಟಕ್ಕೆ ಸೀಮಿತವಾಗದೆ, ದೊಡ್ಡ ಮಟ್ಟದ ವಿವಾದಕ್ಕೆ ನಾಂದಿ ಹಾಡಿದೆ.

ಬೆಂಗಳೂರಿನ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದ ವೇಳೆ ಆತಿಥೇಯ ತಂಡದ ಡಿಜೆ ವರ್ತನೆಯನ್ನು ಖಂಡಿಸಿ CSK ಮ್ಯಾನೇಜ್‌ಮೆಂಟ್ ಈಗ ಬಿಸಿಸಿಐ (BCCI) ಮೆಟ್ಟಿಲೇರಿದೆ.

ವಿವಾದಕ್ಕೆ ಕಾರಣವೇನು?

ಏಪ್ರಿಲ್ 5 ರಂದು ನಡೆದ ಪಂದ್ಯದಲ್ಲಿ ಸಿಎಸ್‌ಕೆ ಆಟಗಾರರು ಔಟಾದಾಗ, ಕ್ರೀಡಾಂಗಣದ ಡಿಜೆ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲ್ ಮಾಡಲು ಬಳಸುವ ದೋಸೆ, ಇಡ್ಲಿ, ಸಾಂಬಾರ್, ಚಟ್ನಿ ಎಂಬ ಹಾಡನ್ನು ಪದೇ ಪದೇ ಪ್ಲೇ ಮಾಡಿದ್ದಾರೆ. ಈ ಹಾಡನ್ನು ಸಾಮಾನ್ಯವಾಗಿ ದಕ್ಷಿಣ ಭಾರತೀಯರನ್ನು, ವಿಶೇಷವಾಗಿ ತಮಿಳು ಜನರನ್ನು ಅಣಕಿಸಲು ಮೀಮ್‌ಗಳಲ್ಲಿ ಬಳಸಲಾಗುತ್ತದೆ. ಇದು ಸಿಎಸ್‌ಕೆ ಆಟಗಾರರು ಮತ್ತು ಮ್ಯಾನೇಜ್‌ಮೆಂಟ್‌ನ ಕೆಂಗಣ್ಣಿಗೆ ಗುರಿಯಾಗಿದೆ.

ಸಿಎಸ್‌ಕೆ ನೀಡಿದ ದೂರಿನಲ್ಲಿ ಏನಿದೆ?

ಚೆನ್ನೈ ಸೂಪರ್ ಕಿಂಗ್ಸ್‌ನ ಮ್ಯಾನೇಜಿಂಗ್ ಡೈರೆಕ್ಟರ್ ಕಾಶಿ ವಿಶ್ವನಾಥನ್ ಈ ಕುರಿತು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಗೌರವಕ್ಕೆ ಧಕ್ಕೆ: “ದೋಸೆ ಇಡ್ಲಿ” ಹಾಡನ್ನು ವ್ಯಂಗ್ಯದ ರೂಪದಲ್ಲಿ ಬಳಸಿರುವುದು ಆಟಗಾರರ ಮತ್ತು ಅಭಿಮಾನಿಗಳ ಭಾವನೆಗೆ ಧಕ್ಕೆ ತಂದಿದೆ. ಇದು ಕ್ರೀಡಾ ಮನೋಭಾವಕ್ಕೆ ವಿರುದ್ಧವಾದದ್ದು ಎಂದು ಅವರು ವಾದಿಸಿದ್ದಾರೆ.

ಅವಹೇಳನಕಾರಿ ಕಾಮೆಂಟ್: ಸಿಎಸ್‌ಕೆ ಆಟಗಾರರು ಔಟಾಗಿ ಪೆವಿಲಿಯನ್‌ಗೆ ಮರಳುವಾಗ ಆರ್​ಸಿಬಿ ನೇಮಿಸಿದ ಡಿಜೆ ಮೈಕ್‌ನಲ್ಲಿ ಕೆಲವು ಆಕ್ಷೇಪಾರ್ಹ ಕಾಮೆಂಟ್‌ಗಳನ್ನು ಮಾಡಿದ್ದಾರೆ ಎಂಬುದು ತಂಡದ ಆರೋಪ.

ಅವಮಾನ: “ಡಿಜೆಗಳು ತವರು ತಂಡವನ್ನು ಬೆಂಬಲಿಸಲಿ, ಆದರೆ ಎದುರಾಳಿ ತಂಡವನ್ನು ಅವಮಾನಿಸುವುದು ಸರಿಯಲ್ಲ” ಎಂದು ಸಿಎಸ್‌ಕೆ ಸ್ಪಷ್ಟಪಡಿಸಿದೆ.

ಹಳೆಯ ದ್ವೇಷದ ಮುಂದುವರಿಕೆ?

ಈ ವಿವಾದಕ್ಕೆ 2025ರ ಐಪಿಎಲ್ ಸೀಸನ್‌ನ ನಂಟೂ ಇದೆ. ಕಳೆದ ವರ್ಷ ಆರ್‌ಸಿಬಿ ಆಟಗಾರ ಜಿತೇಶ್ ಶರ್ಮಾ ಈ ಹಾಡನ್ನು ಹಾಡಿರುವ ವಿಡಿಯೋ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಚನ್ನೈನ ಚೆಪಾಕ್ ಕ್ರೀಡಾಂಗಣದಲ್ಲಿ ಪಂದ್ಯ ನಡೆದಾಗ ಅಲ್ಲಿನ ಡಿಜೆ ಕೂಡ ಇದಕ್ಕೆ ತಿರುಗೇಟು ನೀಡಲು ಪ್ರಯತ್ನಿಸಿದ್ದರು. ಆಗ ಸಿಎಸ್‌ಕೆ ಮ್ಯಾನೇಜ್‌ಮೆಂಟ್ ಮಧ್ಯಪ್ರವೇಶಿಸಿ ಇದನ್ನು ತಡೆದಿತ್ತು. ಈಗ ಬೆಂಗಳೂರಿನಲ್ಲಿ ಅದೇ ರೀತಿಯ ಘಟನೆ ಮರುಕಳಿಸಿರುವುದು ಸಂಘರ್ಷಕ್ಕೆ ಕಾರಣವಾಗಿದೆ.

ಐಪಿಎಲ್ ಆಡಳಿತ ಮಂಡಳಿಯು ಈ ದೂರನ್ನು ಗಂಭೀರವಾಗಿ ಪರಿಗಣಿಸಿದೆ. ಕ್ರೀಡಾಂಗಣಗಳಲ್ಲಿ ಮನರಂಜನೆಯ ಹೆಸರಿನಲ್ಲಿ ವರ್ಣಭೇದ ಅಥವಾ ಪ್ರಾದೇಶಿಕ ನಿಂದನೆಯಂತಹ ಅಂಶಗಳು ನುಸುಳದಂತೆ ನೋಡಿಕೊಳ್ಳಲು ಹೊಸ ಮಾರ್ಗಸೂಚಿಗಳನ್ನು ಹೊರಡಿಸುವ ಸಾಧ್ಯತೆಯಿದೆ.

ಇದನ್ನೂ ಓದಿ : ಮಂತ್ರಾಲಯದ ಬಳಿ ಭೀಕರ ಅಪಘಾತ – 8 ಮಂದಿ ದುರ್ಮರಣ!

Btv Kannada
Author: Btv Kannada

Leave a Comment

Read More