ಭಾರತ 7 ವರ್ಷಗಳಲ್ಲಿ ಮೊದಲ ಬಾರಿಗೆ ಇರಾನ್‌ನಿಂದ ಕಚ್ಚಾ ತೈಲ ಖರೀದಿ ಮಾಡಿದೆ. ಇರಾನಿನ ಕಚ್ಚಾ ತೈಲ ತುಂಬಿದ 2 ಬೃಹತ್ ಟ್ಯಾಂಕರ್‌ಗಳು ಭಾರತದ ಬಂದರುಗಳನ್ನ ತಲುಪಿವೆ ಎಂದು LSEG ಹಡಗು ಟ್ರ್ಯಾಕಿಂಗ್ ದತ್ತಾಂಶ ತೋರಿಸಿದೆ ಎಂದು ವರದಿಯಾಗಿದೆ.
ಕಳೆದ ಮಾರ್ಚ್ 20 ರಂದು ಅಥವಾ ಅದಕ್ಕೂ ಮುನ್ನ ಅನುಮೋದಿತ ಟ್ಯಾಂಕರ್‌ಗಳು ಸೇರಿದಂತೆ ಯಾವುದೇ ಹಡಗಿನಲ್ಲಿ ತುಂಬಿಸಿ ಏಪ್ರಿಲ್ 19ರ ಒಳಗೆ ಬಿಡುಗಡೆ ಮಾಡಲಾದ ತೈಲಕ್ಕೆ ಅಮೆರಿಕದ ವಿನಾಯಿತಿ ಅನ್ವಯಿಸುತ್ತದೆ. ಏಪ್ರಿಲ್ 19 ರಂದು ವಿನಾಯಿತಿ ಕೊನೆಗೊಳ್ಳುತ್ತದೆ.
ಹಡಗು ಟ್ರ್ಯಾಕಿಂಗ್ ದತ್ತಾಂಶದ ಪ್ರಕಾರ, ಇರಾನ್‌ನ ಧ್ವಜ ಹೊತ್ತ ʻFelicityʼ ಹಡಗು ಪಶ್ಚಿಮ ಭಾರತದ ಸಿಕ್ಕಾ ಬಂದರನ್ನು ತಲುಪಿದೆ. ಆದ್ರೆ ಕುರಾಕಾವೊ ಧ್ವಜ ಹೊತ್ತ ʻಜಯಾʼ ಹಡಗು ಒಡಿಶಾದ ಪೂರ್ವ ಬಂದರಿನಲ್ಲಿದೆ ಎಂದು ತಿಳಿದುಬಂದಿದೆ. VLCC (Very Large Crude Carrier) ಹಡಗು 2 ಮಿಲಿಯನ್ ಬ್ಯಾರೆಲ್ ತೈಲ ಹೊತ್ತುತಂದಿದೆ.
ವಿಶ್ವದ 3ನೇ ಅತಿದೊಡ್ಡ ತೈಲ ಆಮದುದಾರ ಮತ್ತು ಗ್ರಾಹಕ ಕೂಡ ಆಗಿರುವ ಭಾರತ ಕಚ್ಚಾ ತೈಲ ಖರೀದಿಸದಂತೆ ಅಮೆರಿಕ ಒತ್ತಡ ಹೇರಿತ್ತು. ಹಾಗಾಗಿ 2019ರ ಬಳಿಕ ಇರಾನ್‌ನಿಂದ ಭಾರತ ತೈಲ ಖರೀದಿ ಮಾಡಿಯೇ ಇರಲಿಲ್ಲ. ಆದ್ರೆ ಹಾರ್ಮುಜ್ ಜಲಸಂಧಿ ಮತ್ತು ಮಧ್ಯಪ್ರಾಚ್ಯದಲ್ಲಿ ಉಂಟಾದ ಬಿಕ್ಕಟ್ಟಿನ ನಂತರ ಅಮೆರಿಕ ಏ.19ರ ವರೆಗೆ ನೀಡಿದ ವಿನಾಯ್ತಿ ಬಳಸಿಕೊಂಡು ತೈಲ ಖರೀದಿ ಮಾಡಿದೆ.
ದೇಶದ ಪ್ರಮುಖ ತೈಲ ಸಂಸ್ಕರಣಾ ಕಂಪನಿಯಾದ ಇಂಡಿಯನ್ ಆಯಿಲ್ ಕಾರ್ಪ್ ʻಜಯಾʼ ಹಡಗಿನಲ್ಲಿ ಬಂದ ತೈಲವನ್ನು ಖರೀದಿ ಮಾಡಿದೆ.








