ಹೊಸದಿಲ್ಲಿ : ಭಾರತದ ನೂತನ ಮುಖ್ಯ ಚುನಾವಣಾ ಆಯುಕ್ತರಾಗಿ ಜ್ಞಾನೇಶ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಇವರು ಕಳೆದ ವರ್ಷ ಮಾರ್ಚ್‌ನಲ್ಲಿ ಚುನಾವಣಾ ಆಯುಕ್ತರಾಗಿ ನೇಮಕಗೊಂಡಿದ್ದರು. ಇದೀಗ ಮುಖ್ಯ ಚುನಾವಣಾ ಆಯುಕ್ತರಾಗಿ ಆಯ್ಕೆಯಾಗಿದ್ದು, ನಿರ್ಗಮಿತ ಆಯುಕ್ತ ರಾಜೀವ್ ಕುಮಾರ್ ಅವರ ಸ್ಥಾನವನ್ನು ತುಂಬಲಿದ್ದಾರೆ.
ರಾಜೀವ್ ಕುಮಾರ್ (ಫೆ.18) ಇಂದು ಮುಖ್ಯ ಚುನಾವಣಾ ಆಯುಕ್ತ ಸ್ಥಾನದಿಂದ ನಿವೃತ್ತರಾಗಲಿದ್ದು, ಬಾಕಿ ಉಳಿದ ಇಬ್ಬರು ಆಯುಕ್ತರಲ್ಲಿ ಜ್ಞಾನೇಶ್ ಕುಮಾರ್ ಹಿರಿಯರಾಗಿದ್ದಾರೆ. ಹೀಗಾಗಿ ಅವರನ್ನೇ ಮುಖ್ಯ ಆಯುಕ್ತರಾಗಿ ನೇಮಕ ಮಾಡಲಾಗಿದೆ.
ಮುಖ್ಯ ಚುನಾವಣಾ ಆಯುಕ್ತರ ನೇಮಕಾತಿಗೆ ಸಂಬಂಧಿಸಿದಂತೆ ಹೊಸ ಕಾನೂನಿನ ಅಡಿಯಲ್ಲಿ ನೇಮಕಗೊಂಡ ಮೊದಲ ಸಿಇಸಿ ಎಂಬ ಹೆಗ್ಗಳಿಕೆಗೆ ಜ್ಞಾನೇಶ್ ಕುಮಾರ್ ಪಾತ್ರರಾಗಿದ್ದಾರೆ. ಇನ್ನು ಜ್ಞಾನೇಶ್ ಕುಮಾರ್ ಅವರು ಈ ವರ್ಷದ ಕೊನೆಯಲ್ಲಿ ನಡೆಯಲಿರುವ ಬಿಹಾರ ವಿಧಾನಸಭೆ ಚುನಾವಣೆ ಮತ್ತು ಮುಂದಿನ ವರ್ಷ ನಡೆಯಲಿರುವ ಪಶ್ಚಿಮ ಬಂಗಾಳ, ಅಸ್ಸಾಂ ಮತ್ತು ತಮಿಳುನಾಡು ಚುನಾವಣೆಗಳ ಮೇಲ್ವಿಚಾರಣೆ ಮಾಡಲಿದ್ದಾರೆ.
ಯಾರಿದು ಜ್ಞಾನೇಶ್ ಕುಮಾರ್? ನೂತನ ಮುಖ್ಯ ಚುನಾವಣಾ ಆಯುಕ್ತರಾಗಿರುವ ನೇಮಕಗೊಂಡಿರುವ ಜ್ಞಾನೇಶ್ ಕುಮಾರ್ ಅವರು 1988-ಬ್ಯಾಚ್‌ನ ಕೇರಳ ಕೇಡರ್‌ನ ಐಎಎಸ್ ಅಧಿಕಾರಿಯಾಗಿದ್ದಾರೆ. ಉತ್ತರ ಪ್ರದೇಶದರಾಗಿರುವ ಇವರು ಚುನಾವಣಾ ಆಯೋಗದ ಇಬ್ಬರು ಆಯುಕ್ತರ ಪೈಕಿ ಹಿರಿಯರಾಗಿದ್ದಾರೆ.
61 ವರ್ಷದ ಜ್ಞಾನೇಶ್, ಕೇಂದ್ರ ಗೃಹ ವ್ಯವಹಾರ ಹೆಚ್ಚುವರಿ ಕಾರ್ಯದರ್ಶಿಯಾಗಿದ್ದರು. ನಿವೃತ್ತಿ ವೇಳೆ ಅವರು ಸಹಕಾರ ಇಲಾಖೆಯ ಕಾರ್ಯದರ್ಶಿಯಾಗಿದ್ದರು ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಆತ್ಮೀಯರು ಎನ್ನಲಾಗಿದೆ. ಜಮ್ಮು-ಕಾಶ್ಮೀರದಲ್ಲಿ ಜಾರಿಯಲ್ಲಿದ್ದ ಆರ್ಟಿಕಲ್ 370 ರದ್ದು ಹಾಗೂ ವಿಶೇಷ ಸ್ಥಾನಮಾನ ತೆಗೆದು ಹಾಕುವ ವೇಳೆ ಕೇಂದ್ರ ಗೃಹ ಸಚಿವಾಲಯದಲ್ಲಿ ಜ್ಞಾನೇಶ್ ಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು.
