Download Our App

Follow us

Home » ಸಿನಿಮಾ » ಇಂದು ವರನಟ ಡಾ.ರಾಜ್‌ಕುಮಾರ್‌ ಜನ್ಮದಿನ – ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ಕನ್ನಡದ ಕಣ್ಮಣಿ..!

ಇಂದು ವರನಟ ಡಾ.ರಾಜ್‌ಕುಮಾರ್‌ ಜನ್ಮದಿನ – ಅಭಿಮಾನಿಗಳ ಮನದಲ್ಲಿ ಅಚ್ಚಳಿಯದೇ ಉಳಿದ ಕನ್ನಡದ ಕಣ್ಮಣಿ..!

ಕನ್ನಡದ ಕಣ್ಮಣಿ, ನಟಸಾರ್ವಭೌ ಡಾ.ರಾಜ್​ಕುಮಾರ್​​​​ಗೆ ಇಂದು 95ನೇ ಜನ್ಮ ದಿನ. ಈ ವಿಶೇಷ ದಿನವನ್ನು ಇಂದಿಗೂ ಕೂಡ ದೊಡ್ಮನೆ ಅಭಿಮಾನಿಗಳು ಹಬ್ಬದಂತೆ ಆಚರಿಸುತ್ತಾರೆ. ಈ ಬಾರಿ ರಾಜ್​​ ಅಭಿಮಾನಿಗಳು 95ನೇ ಜನ್ಮದಿನವನ್ನು ಸಖತ್​ ಸ್ಪೆಷಲ್​ ಆಗಿ ಸೆಲಬ್ರೆಟ್​ ಮಾಡಲಿದ್ದಾರೆ. ಇನ್ನು ಅಣ್ಣಾವ್ರ ಹುಟ್ಟುಹಬ್ಬದ ವಿಶೇಷವಾಗಿ ಸಮಾಧಿಗೆ ದೊಡ್ಮನೆ ಫ್ಯಾಮಿಲಿ ಹಾಗೂ ರಾಜಕೀಯ ಗಣ್ಯರು ಭೇಟಿ ನೀಡಿ, ಪೂಜೆ ಸಲ್ಲಿಸಿದ್ದಾರೆ.

ಡಾ. ರಾಜ್​ಕುಮಾರ್​.. ಕನ್ನಡಿಗರು ಎಂದೂ ಮರೆಯದ ಮಾಣಿಕ್ಯ. ಮಾಲಿಯಾಗಿ, ಕೂಲಿಯಾಗಿ, ಬಡವನಾಗಿ, ರಾಜನಾಗಿ, ಕುಂಬಾರನಾಗಿ, ಕಳ್ಳನಾಗಿ, ಪೊಲೀಸ್​ ಆಫೀಸರ್​ ಆಗಿ, ಕರುನಾಡಿನ ಬಾಂಡ್​ ಆಗಿ, ಅಣ್ಣನಾಗಿ, ತಮ್ಮನಾಗಿ, ತಂದೆಯಾಗಿ, ಪ್ರೊಫೆಸರ್​ ಆಗಿ, ಕುರಿಗಾಹಿಯಾಗಿ, ಕೃಷ್ಣನಾಗಿ, ರಾಮನಾಗಿ, ರಾವಣನಾಗಿ, ಹಿರಣ್ಯಕಶ್ಯಪುವಾಗಿ, ಬೇಡನಾಗಿ, ಫಾರೆಸ್ಟ್​ ಆಫೀಸರ್​ ಆಗಿ, ರೈತನಾಗಿ, ನಗರದ ಮೇಯರ್​ ಆಗಿ ಬೆಳ್ಳಿತೆರೆಯಲ್ಲಿ ರಾರಾಜಿಸಿದ್ದಾರೆ.

ಕನ್ನಡ ಸಿನಿರಸಿಕರು ಮಾತ್ರವಲ್ಲದೇ ಭಾರತೀಯ ಚಿತ್ರರಂಗವೇ ಅಣ್ಣಾವ್ರ ಅಭಿನಯಕ್ಕೆ ಬೆರಗಾಗಿತ್ತು. ಅಮಿತಾಬ್​ ಬಚ್ಚನ್​ರಿಂದ ಹಿಡಿದು ರಜಿನಿಕಾಂತ್​ವರೆಗೆ ದೊಡ್ಡ ದೊಡ್ಡ ಸೂಪರ್​ ಸ್ಟಾರ್​ಗಳೇ ಅಣ್ಣಾವ್ರಿಗೆ ಅಭಿಮಾನಿಗಳಾಗಿಬಿಟ್ಟಿದ್ರು. ಐತಿಹಾಸಿಕ, ಪೌರಾಣಿಕ, ಸಾಮಾಜಿಕ, ಭಕ್ತಿ ಪ್ರಧಾನ, ಬಾಂಡ್, ಕಾದಂಬರಿ ಆಧಾರಿತ​ ಹೀಗೆ ಎಲ್ಲಾ ತರಹದ ಸಿನಿಮಾಗಳಲ್ಲೂ ನಟಿಸಿ ಗೆದ್ದವರು ಡಾ. ರಾಜ್​ಕುಮಾರ್​. ಅದ್ಯಾವುದೇ ಪಾತ್ರ ಇರಲಿ ಪರಕಾಯ ಪ್ರವೇಶ ಮಾಡಿಬಿಡುತ್ತಿದ್ದರು. ಅದಕ್ಕೆ ಹೇಳಿದ್ದು, ಅಣ್ಣಾವ್ರಿಗೆ ಅಣ್ಣಾವ್ರೇ ಸಾಟಿ ಅಂತ.

ನಟಸಾರ್ವಭೌಮ, ವರನಟ, ರಸಿಕರ ರಾಜ, ಕನ್ನಡ ಕಣ್ಮಣಿ, ಯೋಗ ರಾಜ, ಮೇರುನಟ, ಕನ್ನಡ ಕಂಠೀರವ. ಅಬ್ಬಬ್ಬಾ.. ಅಣ್ಣಾವ್ರ ಅಪರೂಪದ ವ್ಯಕ್ತಿತ್ವಕ್ಕೆ, ಪ್ರತಿಭೆಗೆ ಅದೆಷ್ಟೋ ಪ್ರಶಸ್ತಿ, ಬಿರುದುಗಳು ಒಲಿದಿತ್ತು. ಕನ್ನಡ ಮಾತ್ರವಲ್ಲ, ಭಾರತೀಯ ಚಿತ್ರರಂಗದ ಮಹಾನ್ ನಟ ನಮ್ಮ ನಿಮ್ಮೆಲ್ಲರ ನೆಚ್ಚಿನ ಡಾ. ರಾಜ್​​ಕುಮಾರ್. ಬಣ್ಣದ ಲೋಕದಲ್ಲಿದ್ದು, ಬಹಳ ಸರಳವಾಗಿಯೇ ಜೀವಿಸಿದವರು ಮುತ್ತುರಾಜ್.. ಸೂಪರ್ ಸ್ಟಾರ್ ಆದ್ರೂ, ಯಾವುದೇ ಹಮ್ಮು ಬಿಮ್ಮು ಅವರಲ್ಲಿ ಇರಲಿಲ್ಲ.

ಪ್ರೀತಿಯ ಅಭಿಮಾನಿಗಳನ್ನ ದೇವರ ಸ್ಥಾನದಲ್ಲಿ ಕೂರಿಸಿ, ಅಭಿಮಾನಿಗಳ ಸೇವೆಯೇ ದೇವರ ಸೇವೆ ಅಂತ ಬದುಕಿದ ಮಹಾನ್​ ಸಂತ ಡಾ. ರಾಜ್​ಕುಮಾರ್.. ಅಣ್ಣಾವ್ರದ್ದು ಅಸಾಮಾನ್ಯ ವ್ಯಕ್ತಿತ್ವ.. ಭಾರತೀಯ ಚಿತ್ರರಂಗ ಕಂಡ ಅದ್ಭುತ ಪ್ರತಿಭೆ ನಟಸಾರ್ವಭೌಮ ಡಾ. ರಾಜ್​ಕುಮಾರ್​. ನೂರಾರು ಸಿನಿಮಾಗಳಲ್ಲಿ ನಟಿಸಿ, ಕೋಟ್ಯಾಂತರ ಅಭಿಮಾನಿಗಳ ಹೃದಯ ಸಿಂಹಾಸನದಲ್ಲಿ ರಾಜನಾದ್ರು, ಎಂದಿಗೂ ಅವ್ರು ಸೂಪರ್ ಸ್ಟಾರ್ ರೀತಿ ವರ್ತಿಸಲಿಲ್ಲ. ಅಸಾಮಾನ್ಯನಾಗಿಯೂ ಒಬ್ಬ ಸಾಮಾನ್ಯನಂತೆ  ಬದುಕಿದ ಧೀಮಂತ ನಾಯಕ, ನಮ್ಮ ಡಾ. ರಾಜ್​​​ಕುಮಾರ್.

ಅಣ್ಣಾವ್ರ ಕನ್ನಡ ಸವಿನುಡಿ ಜೇನಿನ ಹೊಳೆಯೇ ಸರಿ. ಕಲಾವಿದನಿಗೆ ಭಾಷೆ ಮೇಲೆ ಹಿಡಿತ ಬಹಳ ಮುಖ್ಯ. ಡಾ. ರಾಜ್​ಕುಮಾರ್​ ನುಡಿಮುತ್ತುಗಳನ್ನ ಕೇಳೋದೇ ಚೆಂದ. ಅದು ಯಾವುದೇ ಪಾತ್ರ ಆಗ್ಲೀ ಲೀಲಾಜಾಲವಾಗಿ ನಟಿಸ್ತಿದ್ದ ಮುತ್ತುರಾಜ್​, ಪಾತ್ರದ ಸಾರವನ್ನ ಪ್ರೇಕ್ಷಕನಿಗೆ ದಾಟಿಸುತ್ತಿದ್ರು. ಕನ್ನಡ ಚಿತ್ರರಂಗದ ಜೊತೆ ಜೊತೆಗೆ ಬೆಳೆದು ಬಂದವರು ಅಣ್ಣಾವ್ರು. ಪೌರಾಣಿಕ ಸಿನಿಮಾಗಳಿಂದ ಐತಿಹಾಸಿಕ, ಸಾಮಾಜಿಕ ಸಿನಿಮಾಗಳನ್ನ ಚಿತ್ರರಂಗ ಹೊರಳಿತು. ರಾಜ್​ಕುಮಾರ್​ ಕೂಡ ಅದಕ್ಕೆ ತಕ್ಕಂತೆ ಬದಲಾಗುತ್ತಾ ಎಲ್ಲಾ ತರಹದ ಪಾತ್ರಗಳಲ್ಲೂ ಸೈ ಅನ್ನಿಸಿಕೊಂಡ್ರು.

ತಂದೆ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯನವರು 40-50ರ ದಶಕದಲ್ಲಿ ಕನ್ನಡ ರಂಗಭೂಮಿಯಲ್ಲಿ ದೊಡ್ಡ ಹೆಸರು. ಅವ್ರ ಮಗನಾದ ಮುತ್ತುರಾಜ್​​​ಗೆ ನಟನೆ ರಕ್ತದಲ್ಲೇ ಬಂದಿತ್ತು. ತಂದೆ ಜೊತೆ ನಾಟಕಗಳನ್ನ ಸಣ್ಣಪುಟ್ಟ ಪಾತ್ರಗಳನ್ನ ಮಾಡುತ್ತಿದ್ದ, ರಾಜ್​ಕುಮಾರ್​​ ಮುಂದೆ ಗುಬ್ಬಿ ವೀರಣ್ಣ ಕಂಪೆನಿಯಲ್ಲೂ ನಾಟಕಗಳನ್ನ ಮಾಡುತ್ತಿದ್ರು. ನಾಟಕದಲ್ಲಿ ಅಣ್ಣಾವ್ರ ಅಭಿನಯ ನೋಡಿಯೇ ಬೇಡರ ಕಣ್ಣಪ್ಪ ಚಿತ್ರಕ್ಕೆ ನಾಯಕರನಾಗಿ ಆಯ್ಕೆ ಮಾಡಲಾಯ್ತು.

ನಾಟಕದ ಹಿನ್ನಲೆ ಕಾರಣಕ್ಕೆ ಅಣ್ಣಾವ್ರ ಕನ್ನಡ ಉಚ್ಛಾರಣೆ ಅಷ್ಟು ಸ್ಪಷ್ಟವಾಗಿತ್ತು. ಕನ್ನಡ ಮಾತನ್ನ ಡಾ. ರಾಜ್​ಕುಮಾರ್​ ಬಾಯಲ್ಲೇ ಕೇಳಬೇಕು. ಅವ್ರ ಕನ್ನಡವನ್ನ ಪದೇ ಪದೇ ಕೇಳಬೇಕು ಅನ್ನಿಸುತ್ತೆ. ಇನ್ನು ಅವ್ರು ಗಾಯಕರಾಗಿ ಯಶಸ್ವಿ ಆಗೋದಕ್ಕೂ ಇದೇ ನಾಟಕ ಕಾರಣ. ಸಾಮಾನ್ಯವಾಗಿ ಪೌರಾಣಿಕ, ಐತಿಹಾಸಿಕ ನಾಟಕಗಳಲ್ಲಿ ಕಂದ ಪದ್ಯಗಳನ್ನ ಹಾಡುತ್ತಿದ್ದರು. ಹಾಗಾಗಿ ಅಣ್ಣಾವ್ರಿಗೆ ನಟನೆಯ ಜೊತೆಗೆ ಹಾಡುಗಾರಿಕೆ ಕೂಡ ಸುಲಭವಾಯ್ತು.

3ನೇ ಕ್ಲಾಸ್​ ಓದಿದ ಮುತ್ತುರಾಜ್​​ ಡಾ. ರಾಜ್​ಕುಮಾರ್​​ ಆಗಿದ್ದು ನಿಜಕ್ಕೂ ರೋಚಕ. ಆದ್ರೆ, ಯಾವತ್ತೂ ಅಣ್ಣಾವ್ರ ತಾವು ನಡೆದು ಬಂದ ಹಾದಿಯನ್ನ ಮರೆಯಲಿಲ್ಲ. ಕನ್ನಡ ಪ್ರೇಮವನ್ನ ಬಿಡಲಿಲ್ಲ. ಬೇಡರ ಕಣ್ಣಪ್ಪ ಚಿತ್ರದ ತೆಲುಗು ರೀಮೇಕ್​ನಲ್ಲಿ ನಟಿಸಿದ ರಾಜ್​ಕುಮಾರ್​, ಭಾಷೆ ಬರದೇ ಯಾವುದೇ ಪಾತ್ರ ಮಾಡಬಾರದು ಅಂತ ಅಂದೇ ನಿರ್ಧರಿಸಿಬಿಟ್ರು. ಮತ್ತೆಂದಿಗೂ ಪರಭಾಷೆ ಸಿನಿಮಾಗಳಲ್ಲಿ ನಟಿಸಲಿಲ್ಲ. ಸಾಕಷ್ಟು ಬಾರಿ ಅವಕಾಶಗಳು ಬಂದ್ರು, ಕನ್ನಡ ಬಿಟ್ಟು ಬೇರೆ ಭಾಷೆ ಸಿನಿಮಾಗಳಲ್ಲಿ ನಟಿಸಲ್ಲ ಅಂದ್ರು, ಅದೇ ರೀತಿ ನಡೆದುಕೊಂಡ್ರು.

ನಿರ್ಮಾಪಕರೇ ಸಿನಿಮಾದ ನಿಜವಾದ ಹೀರೋ ಅಂತ ಮನಗಂಡಿದ್ರು ಡಾ. ರಾಜ್​ಕುಮಾರ್. ಅದಕ್ಕೆ ನಿರ್ಮಾಪಕರನ್ನ ಅನ್ನದಾತರು ಅಂತ ಕರೀತಿದ್ರು. ಕೊನೆಗೊಂದು ದಿನ ರಾಜ್​ಕುಮಾರ್​ ಸಿನಿಮಾಗಳಿಂದ ನಷ್ಟವಾಗ್ತಿದೆ ಅನ್ನೋ ಗುಸುಗುಸು ಕೇಳಿಬಂದಾಗ ಸ್ವತ: ಸಿನಿಮಾ ನಿರ್ಮಾಣ ಪ್ರಾರಂಭಿಸಿದ್ರು. ಯಾವತ್ತೂ ನಿರ್ದೇಶಕನ ಕೆಲಸದಲ್ಲಿ ಮೂಗು ತೂರಿಸಿದವರಲ್ಲ ಅಣ್ಣಾವ್ರು. ಸುಖಾ ಸುಮ್ಮನೆ ಅಭಿಮಾನಿಗಳು ರಸ್ತೆ ರಸ್ತೆಯಲ್ಲೂ ಮುತ್ತುರಾಜನ ಪುತ್ಥಳಿ ಇಟ್ಟು ಪೂಜೆ ಮಾಡೋದಿಲ್ಲ. ರಾಜ್​ಕುಮಾರ್ ಅವ್ರ ನಟನೆ ಮಾತ್ರವಲ್ಲ, ಇಂತಹ ಆದರ್ಶ ಗುಣಗಳೇ ಅವ್ರನ್ನ​ ಅಭಿಮಾನಿಗಳ ಪಾಲಿಗೆ ಆರಾಧ್ಯ ದೇವರನ್ನಾಗಿ ಮಾಡಿರೋದು.

ರಾಜ್​ಕುಮಾರ್​ ನುಡಿದಂತೆ ನಡೆಯುತ್ತಿದ್ದ ವ್ಯಕ್ತಿ. ಮನೆ ಹೊರಗೆ ಹೇಗೆ ಇರುತ್ತಿದ್ದರೋ ಒಳಗಡೆಯೂ ಹಾಗೆ ಇರುತ್ತಿದ್ದರು. ಸಿನಿಮಾ ವ್ಯವಹಾರವನ್ನೆಲ್ಲಾ ಪಾರ್ವತಮ್ಮನವರೇ ನೋಡಿಕೊಳ್ತಿದ್ರಂತೆ. ದುಂಚು ವೆಚ್ಚಕ್ಕೆ ಎಂದಿಗೂ ಒಪ್ಪುತ್ತಿರಲಿಲ್ಲ. ಪುನೀತ್​ ರಾಜ್​ಕುಮಾರ್​ ತಂದೆಗೆ ಏನಾದ್ರು, ಉಡುಗೊರೆ ಕೊಟ್ರೆ, ಅದರ ಬೆಲೆಯನ್ನ ಒಂದು ಸೊನ್ನೆ ಕಮ್ಮಿ ಮಾಡಿ ಹೇಳುತ್ತಿದ್ದರಂತೆ. ಯಾಕಂದ್ರೆ, ನಿಜವಾದ ಬೆಲೆ ಕೇಳಿದ್ರೆ, ಇಷ್ಟು ದುಬಾರಿನಾ, ಬೇಡವೇ ಬೇಡ ವಾಪಸ್​​ ಕೊಟ್ಟುಬಿಡು ಅನ್ನುತ್ತಿದ್ದರಂತೆ.

ರಾಜ್​ಕುಮಾರ್​​ ಸರಳ ವ್ಯಕ್ತಿತ್ವ ಅಕ್ಕಪಕ್ಕದ ಇಂಡಸ್ಟ್ರಿ ಸ್ಟಾರ್​​ಗಳಿಗೂ ಬೆರಗೂ ಮೂಡಿಸಿತ್ತು. ಯಾರೇ ಬಂದರೂ ಎದ್ದು ನಿಂತು ಮಾತನಾಡಿಸುತ್ತಿದ್ದ ಕನ್ನಡದ ಕಂದನನ್ನ ಎಲ್ಲರೂ ಮೆಚ್ಚಿ ಕೊಂಡಾಡುತ್ತಾರೆ. ಡಾ. ರಾಜ್​ಕುಮಾರ್​​ ಅಭಿನಯ ಬಿಟ್ರೆ, ಸಿನಿಮಾಗರಂಗದ ಮತ್ಯಾವುದೇ ವಿಭಾಗದಲ್ಲಿ ಕೆಲಸ ಮಾಡಲಿಲ್ಲ. ಆದ್ರೆ, ಗಾಯಕರಾಗಿ ಡಾ. ರಾಜ್​ ಸಕ್ಸಸ್​ ಕಂಡಿದ್ರು. ಅಣ್ಣಾವ್ರ ಬಹುತೇಕ ಸಿನಿಮಾಗಳಿಗೆ ಪಿ. ಬಿ ಶ್ರೀನಿವಾಸ್​ ಹಾಡುತ್ತಿದ್ದರು. ಅವರಿಗೆ ಸಮಸ್ಯೆ ಆಗಬಾರದು ಅನ್ನೋ ಕಾರಣಕ್ಕೆ ಆರಂಭದಲ್ಲಿ ಕೆಲ ವರ್ಷಗಳ ಕಾಲ ಮುತ್ತುರಾಜ್​ ಹಾಡು ಹಾಡೋದನ್ನ ನಿಲ್ಲಿಸಿದ್ದರಂತೆ. ನನ್ನದು ಶರೀರ, ನಿಮ್ಮದು ಶಾರೀರ ಅಂತ ಸ್ವತ: ಡಾ. ರಾಜ್​ಕುಮಾರ್​, ಪಿಬಿಶ್ರೀ ಅವ್ರಿಗೆ ಹೇಳ್ತಿದ್ದರಂತೆ.

ಸಂಪತ್ತಿಗೆ ಸವಾಲ್​ ಚಿತ್ರದ ಯಾರೇ ಕೂಗಾಡಲಿ, ಊರೇ ಹೋರಾಡಲಿ ಹಾಡಿನ ನಂತ್ರ ಅಣ್ಣಾವ್ರು ಹೆಚ್ಚು ಹೆಚ್ಚು ಹಾಡೋದಕ್ಕೆ ಶುರು ಮಾಡಿದ್ರು. ಜೀವನಚೈತ್ರ ಚಿತ್ರದ ನಾದಮಯಾ ಹಾಡಿಗೆ ರಾಷ್ಟ್ರಪ್ರಶಸ್ತಿ ಗೌರವ ಸಿಕ್ಕಿತ್ತು. ಮಹಾನ್​ ಗಾಯಕರಿಗೆ ರಾಷ್ಟ್ರ ಪ್ರಶಸ್ತಿ ಗಳಿಸೋದು ಸುಲಭವಲ್ಲ. ಅಂಥಾದ್ರಲ್ಲಿ ಮೇರು ನಟ ರಾಜ್​ ಕುಮಾರ್​ ಗಾಯಕರಾಗಿ ರಾಷ್ಟ್ರ ಪ್ರಶಸ್ತಿಗೆ ಭಾಜನರಾಗಿದ್ರು.

ಬೇಡರ ಕಣ್ಣಪ್ಪ ಚಿತ್ರದಲ್ಲಿ ಶಿವನಿಗೆ ಕಣ್ಣುಗಳನ್ನ ಕಿತ್ತು ಕೊಡುವ ಕಣ್ಣಪ್ಪನಾಗಿ ಡಾ. ರಾಜ್​ಕುಮಾರ್​ ಬಣ್ಣ ಹಚ್ಚಿದ್ರು. ನಿಜಜೀವನದಲ್ಲೂ ನೇತ್ರದಾನ ಮಹಾದಾನ ಅಂತ ಸಾರಿದವರು ಡಾ. ರಾಜ್​ಕುಮಾರ್​. ತಮ್ಮ ಕಣ್ಣುಗಳನ್ನು ದಾನ ಮಾಡಿ ನುಡಿದಂತೆ ನಡೆದವರು ಅಣ್ಣಾವ್ರು. 1994ರಲ್ಲಿ ನಾರಾಯಣ ನೇತ್ರಾಲಯದಲ್ಲಿ ಡಾ. ರಾಜ್​ಕುಮಾರ್​ ನೇತ್ರ ಬ್ಯಾಂಕ್​ ಸ್ಥಾಪನೆಗೊಂಡಿತ್ತು. ಅಣ್ಣಾವ್ರು ಸಹ ತಮ್ಮ ಕಣ್ಣುಗಳನ್ನ ದಾನ ಮಾಡಿದ್ದರು. ಎಲ್ಲರೂ ನೇತ್ರದಾನ ಮಾಡಿ ಅಂತ ಮನವಿ ಮಾಡಿದ್ದರು. 2006ರಲ್ಲಿ ಡಾ. ರಾಜ್​ ಮರಣದ ನಂತ್ರ ಅವರ ಕಣ್ಣುಗಳನ್ನ ದಾನ ಮಾಡಲಾಗಿತ್ತು.

ಹೀಗೆ ಹೇಳ್ತಾ ಹೋದ್ರೆ, ಅಣ್ಣಾವ್ರ ಆದರ್ಶ ಗುಣಗಳು ಮತ್ತು ಕನ್ನಡ ಪ್ರೇಮದ ಬಗ್ಗೆ ಮಾತನಾಡೋದಕ್ಕೆ ದಿನಗಳು ಸಾಕಾಗೋದಿಲ್ಲ. ಅಭಿಮಾನಿಗಳೇ ಹೇಳುವಂತೆ ಡಾ. ರಾಜ್​ಕುಮಾರ್​ ನಿಜಕ್ಕೂ ಕರುನಾಡಿನ ಉತ್ಸವ ಮೂರ್ತಿಯೇ ಸರಿ.

ಇದನ್ನೂ ಓದಿ : ನ್ಯಾಯಾಲಯದ ಆದೇಶ ಪಾಲಿಸಲು ನಿರ್ಲಕ್ಷ್ಯ – ರಾಜ್ಯ ಸರ್ಕಾರ ಮತ್ತು ಎಲ್ಲಾ ಇಲಾಖೆಗಳಿಗೆ ಹೈಕೋರ್ಟ್‌ ನೋಟಿಸ್‌..!

Leave a Comment

DG Ad

RELATED LATEST NEWS

Top Headlines

ಕರ್ನಾಟಕ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿ ಉದ್ಘಾಟಿಸಿದ ರಾಗಿಣಿ ದ್ವಿವೇದಿ..!

ಸ್ಯಾಂಡಲ್‌ವುಡ್ ಬ್ಯೂಟಿ ರಾಗಿಣಿ ದ್ವಿವೇದಿ ಅವರು ಕರ್ನಾಟಕ ರಾಜ್ಯ ಚಲನಚಿತ್ರ ವಸ್ತ್ರಾಲಂಕಾರ ಕಲಾವಿದರ ಸಂಘದ ನೂತನ ಕಛೇರಿಯನ್ನು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷರಾದ ಶಿವರಾಜ್, ಗೌರವಾಧ್ಯಕ್ಷರಾದ ರವಿಶಂಕರ್,

Live Cricket

Add Your Heading Text Here