ಬೆಳಗಾವಿ : ಸುವರ್ಣಸೌಧದಲ್ಲಿ ಡಿ.19ರಂದು ನಡೆದ ವಿಧಾನ ಪರಿಷತ್ ಕಲಾಪದಲ್ಲಿ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ವಿರುದ್ದ ಅಶ್ಲೀಲ ಪದ ಬಳಕೆ ಆರೋಪ ಎದುರಿಸುತ್ತಿರುವ ಬಿಜೆಪಿ ಎಂಎಲ್ಸಿ ಸಿ.ಟಿ ರವಿ ಬಂಧನವಾಗಿದ್ದು, ರಾಜ್ಯ ರಾಜಕೀಯದಲ್ಲಿ ದೊಡ್ಡ ರಾದ್ಧಾಂತವಾಗಿದೆ. ಮಹಿಳೆಯರಿಗೆ ಅಪಮಾನವಾಗುವಂತಹ ಬಳಸಿದ್ದಕ್ಕಾಗಿ ಸಿ.ಟಿ ರವಿ ವಿರುದ್ದ ಜಾಮೀನು ರಹಿತ ಎಫ್ಐಆರ್ ಕೂಡ ದಾಖಲಾಗಿದೆ.
ಬೆಳಗಾವಿಯಲ್ಲಿ ಗುರುವಾರ ತಡರಾತ್ರಿವರೆಗೂ ಹೈಡ್ರಾಮವೇ ನಡೆದಿದ್ದು, ಪರಿಣಾಮ ರಾತ್ರಿ ಸುಮಾರು ಮೂರ್ನಾಲ್ಕು ಗಂಟೆಗಳ ಕಾಲ ಸಿ.ಟಿ ರವಿ ಅವರನ್ನು ಭದ್ರತೆ ದೃಷ್ಟಿಯಿಂದ ಪೊಲೀಸರು ಕಾರಿನಲ್ಲೇ ಒಂದು ಪ್ರದೇಶದಿಂದ ಮತ್ತೊಂದು ಕಡೆಗೆ ಕರೆದೊಯ್ದಿದ್ದಾರೆ. ರಾತ್ರಿ 12.05ಕ್ಕೆ ಸಿ.ಟಿ ರವಿ ಅವರನ್ನ ಖಾನಾಪುರ ಪೊಲೀಸ್ ಠಾಣೆಯಿಂದ ಸ್ಥಳಾಂತರ ಮಾಡಿದ್ದು, ಈ ವೇಳೆ ಖಾನಾಪುರ ಪೊಲೀಸ್ ಠಾಣೆ ಮುಂದೆ ಭಾರೀ ಹೈಡ್ರಾಮಾ ನಡೆದಿದೆ. ಸಿ.ಟಿ ರವಿ ಹಣೆಗೆ ಪೆಟ್ಟಾಗಿ ರಕ್ತ ಸೋರುತ್ತಿದ್ದರೂ, ಪೊಲೀಸರು ಅವರನ್ನ ಹೊತ್ತು ವಾಹನದಲ್ಲಿ ಹಾಕಿದ್ದಾರೆ. ಈ ವೇಳೆ ನನ್ನ ಕೊಲೆಗೆ ಸಂಚು ರೂಪಿಸಿದ್ದಾರೆ ಎಂದು ಸಿ.ಟಿ ರವಿ ಚೀರಾಡಿದ್ದಾರೆ. ಮಧ್ಯರಾತ್ರಿ ನಡುರಸ್ತೆಯಲ್ಲಿ ಧರಣಿ ಕುಳಿತು ಪೊಲೀಸರ ವಿರುದ್ದ ಸಿ.ಟಿ ರವಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪೊಲೀಸರು ರಾಮದುರ್ಗ ಡಿವೈಎಸ್‌ಪಿ ಕಚೇರಿಯಲ್ಲಿ ಸಿ.ಟಿ ರವಿ ತಲೆ ಗಾಯಕ್ಕೆ ಬ್ಯಾಂಡೇಜ್ ಹಾಕಿದ್ದು, ನಸುಕಿನ 3.25ಕ್ಕೆ ರಾಮದುರ್ಗ ಡಿವೈಎಸ್‌ಪಿ ಕಚೇರಿಯಿಂದ ಹೊರ ಕರೆದುಕೊಂಡು ಬಂದಿದ್ದಾರೆ. ಬೆಳಗ್ಗೆ 6.40ಕ್ಕೆ ಯರಗಟ್ಟಿ ಪಟ್ಟಣಕ್ಕೆ ಎಂಟ್ರಿ ಕೊಟ್ಟು ಅಲ್ಲಿಂದ ಅಜ್ಞಾತ ಸ್ಥಳಕ್ಕೆ ಸಿಟಿ ರವಿ ಅವರನ್ನ ಪೊಲೀಸರು ಕರೆದುಕೊಂಡು ಹೋಗಿದ್ದಾರೆ.
ಇಂದು ಜಡ್ಜ್ ಮುಂದೆ ಸಿ.ಟಿ ರವಿ : ಸಚಿವೆಗೆ ನಿಂದನೆ ಆರೋಪದಲ್ಲಿ ಬಂಧನವಾಗಿರುವ ಸಿ.ಟಿ ರವಿ ಅವರನ್ನು ಇಂದು ಕೋರ್ಟ್‌ಗೆ ಹಾಜರುಪಡಿಸಿ ಪೊಲೀಸರು ಮುಂದಿನ ಕ್ರಮ ಕೈಗೊಳ್ಳಲಿದ್ದಾರೆ.
ಸಿ.ಟಿ ರವಿ ವಿರುದ್ಧ ಜಾಮೀನು ರಹಿತ ಎಫ್ಐಆರ್ : ಎಂಎಲ್ಸಿ ಸಿ.ಟಿ ರವಿ ವಿರುದ್ಧ ಬಿಎನ್ಎಸ್ ಆ್ಯಕ್ಟ್ ಸೆಕ್ಷನ್ 75 ಮತ್ತು ಸೆಕ್ಷನ್ 79 ಅಡಿಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಸೆಕ್ಷನ್ 75 ಲೈಂಗಿಕ ದೌರ್ಜನ್ಯ ಮತ್ತು ಮಹಿಳೆಗೆ ನಿಂದನೆ ಹಾಗೂ ಸೆಕ್ಷನ್ 79 ಕೈ ಸನ್ನೆ ಮತ್ತು ಅಶ್ಲೀಲ ಪದ ಪ್ರಯೋಗ ಆಗಿದ್ದು, ಜಾಮೀನು ರಹಿತ ಕೇಸ್ ಇದಾಗಿದೆ. ಹಿರೇಬಾಗೇವಾಡಿ ಠಾಣೆ ಪೊಲೀಸ್ರು ಎಫ್ಐಆರ್ ಮಾಡಿದ್ದಾರೆ. ಹೀಗಾಗಿ ಸಿ.ಟಿ ರವಿ ಬಂಧನವಾಗಿದೆ.
ಇದನ್ನೂ ಓದಿ : ಸಿಟಿ ರವಿ ಬಂಧನ ಖಂಡಿಸಿ ಇಂದು ರಾಜ್ಯಾದ್ಯಂತ ಪ್ರತಿಭಟನೆಗೆ ಬಿಜೆಪಿ ಕರೆ – ಚಿಕ್ಕಮಗಳೂರು ನಗರ ಬಂದ್..!