ಬೆಂಗಳೂರು : ಬರ ಪರಿಹಾರ ಪಡೆಯುವ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ಕಾನೂನು ಹೋರಾಟ ಆರಂಭಿಸಿದೆ. ರಾಜ್ಯದ 223 ತಾಲೂಕುಗಳಲ್ಲಿ ಎದುರಾಗಿರುವ ಬರಕ್ಕೆ ಸಂಬಂಧಿ ಸಿದಂತೆ ರಾಜ್ಯ ಸರ್ಕಾರ ಸಲ್ಲಿಸಿರುವ ಮನವಿಯಂತೆ 18,171 ಕೋಟಿ ರು. ಬರ ಪರಿಹಾರ ನೀಡುವಂತೆ ಕೇಂದ್ರಕ್ಕೆ ನಿರ್ದೇಶಿಸಬೇಕು ಎಂದು ಸುಪ್ರೀಂಕೋರ್ಟ್‌ಗೆ ಶನಿವಾರ ರಿಟ್ ಅರ್ಜಿ ಸಲ್ಲಿಸಲಾಗಿದೆ.
ಕೇಂದ್ರದಿಂದ ಪರಿಹಾರ ಮತ್ತು ಅನುದಾನಕ್ಕಾಗಿ ಈಗಾಗಲೇ ಹಲವು ಸಂದರ್ಭದಲ್ಲಿ ಹಲವು ರಾಜ್ಯಗಳು ಸುಪ್ರೀಂಕೋರ್ಟ್ ಮೆಟ್ಟಿಲೇರಿವೆ. ಆದರೆ, ಬರ ಪರಿಹಾರ ನೀಡಲು ನಿರ್ದೇಶಿಸುವಂತೆ ರಾಜ್ಯ ಸರ್ಕಾರವೊಂದು ಸುಪ್ರೀಂಕೋರ್ಟ್‌ಗೆ ಹೋಗಿದ್ದು ಇದೇ ಮೊದಲು ಎನ್ನಲಾಗಿದೆ.
ಈ ಹಿಂದೆ ಜಿಎಸ್‌ಟಿಗಾಗಿ ತಮಿಳುನಾಡು, ಹೆಚ್ಚುವರಿ ಸಾಲಕ್ಕಾಗಿ ಕೇರಳ ರಾಜ್ಯಗಳು ಕೇಂದ್ರದ ವಿರುದ್ಧ ಸುಪ್ರೀಂಕೋರ್ಟ್‌ಗೆ ಹೋಗಿದ್ದವು. ಅಲ್ಲದೆ, ಕೇರಳ ಸರ್ಕಾರ ಅರ್ಜಿ ಸಲ್ಲಿಕೆ ವೇಳೆ ಕರ್ನಾಟಕ ಸರ್ಕಾರಕ್ಕೆ ಕೈ ಜೋಡಿಸುವಂತೆ ಕೋರಿತ್ತು. ಆದರೆ, ಕರ್ನಾಟಕ ಸರ್ಕಾರ ಅದಕ್ಕೆ ನಿರಾಕರಿಸಿತ್ತು.
ಕರ್ನಾಟಕ ಸಲ್ಲಿಸಿರುವ ಅರ್ಜಿಯ ಪ್ರಮುಖ ಅಂಶಗಳು :
• 2023ರ ಜೂನ್‌ನಿಂದ ಸೆಪ್ಟೆಂಬರ್‌ವರೆಗೆ ರಾಜ್ಯದಲ್ಲಿ ಶೇ.25 ಮಳೆ ಕೊರತೆಯಾಗಿದೆ
ರಾಜ್ಯದ 196 ತಾಲೂಕುಗಳಲ್ಲಿ ತೀವ್ರ ಬರ, 27 ತಾಲೂಕುಗಳಲ್ಲಿ ಬರ ಪರಿಸ್ಥಿತಿಯಿದೆ
• ಬರ ಪರಿಸ್ಥಿತಿಯಿಂದ ಈವರೆಗೆ 35,162 ಕೋಟಿ ಮೌಲ್ಯದ ಬೆಳೆ ನಾಶವಾಗಿದೆ
• ರಾಜ್ಯದಿಂದ ನಾಲ್ಕು ಬಾರಿ ಬರಗಾಲದ ಮೌಲ್ಯಮಾಪನ ಮಾಡಲಾಗಿದೆ
ಕೇಂದ್ರ ಸರ್ಕಾರಕ್ಕೆ ಮೂರು ಬಾರಿ ಮನವಿ ಪತ್ರ ಸಲ್ಲಿಸಿದರೂ ಕಾನೂನು ಪ್ರಕಾರ ಪರಿಹಾರವಿಲ್ಲ
• ಕೇಂದ್ರ ಸರ್ಕಾರಕ್ಕೆ ಪರಿಹಾರ ನೀಡುವಂತೆ ಸುಪ್ರೀಂಕೋರ್ಟ್ ನಿರ್ದೇಶನ ನೀಡಬೇಕು
ಇದನ್ನೂ ಓದಿ : 25 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಲೋಕಾಯುಕ್ತ ಬಲೆಗೆ ಬಿದ್ದ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದ ಕಮಿಷನರ್..!