ಅವನೇ ಶ್ರೀಮನ್ನಾರಾಯಣ ಸೂತ್ರಧಾರ ಸಚಿನ್ ರವಿ, ಬಾಲಿವುಡ್ ಸ್ಟಾರ್ ಶಾಹಿದ್ ಕಪೂರ್ ಗೆ ಆಕ್ಷನ್ ಕಟ್ ಹೇಳುತ್ತಿರುವುದು ಗೊತ್ತೇ ಇದೆ. ಈ ಕ್ರೇಜಿ ಕಾಂಬಿನೇಷನ್ ಅಶ್ವತ್ಥಾಮನ ಕಥೆ ಹೇಳೋದಿಕ್ಕೆ ಬರುತ್ತಿದ್ದಾರೆ. ಮುಂಬೈನಲ್ಲಿ ಮಂಗಳವಾರ ನಡೆದ ಪ್ರೈಮ್ ವಿಡಿಯೋ ಕಾರ್ಯಕ್ರಮದಲ್ಲಿ ಈ ಬಗ್ಗೆ ಅಧಿಕೃತ ಮಾಹಿತಿ ಹೊರಬಿದ್ದಿದೆ.
ಸಚಿನ್ ರವಿ ಹಾಗೂ ಶಾಹಿದ್ ಕಪೂರ್ ಸಿನಿಮಾಗೆ ಅಶ್ವತ್ಥಾಮ: ದಿ ಸಾಗಾ ಕಂಟಿನ್ಯೂಸ್ ಎಂಬ ಟೈಟಲ್ ಇಡಲಾಗಿದೆ. ಸಚಿನ್ ರವಿ ಚಿತ್ರದ ಅಶ್ವತ್ಥಾಮನ ಪಾತ್ರಕ್ಕೆ ಶಾಹಿದ್ ಕಪೂರ್ ಹೀರೊ ಆಗುತ್ತಿದ್ದಾರೆ. ಅಶ್ವತ್ಥಾಮನಾಗಿಯೇ ಶಾಹಿದ್ ಕಪೂರ್ ಇಲ್ಲಿ ಅಬ್ಬರಿಸಲಿದ್ದಾರೆ. ಅಶ್ವತ್ಥಾಮ ಒಬ್ಬ ಗ್ರೇಟ್ ವಾರಿಯರ್ ಅನ್ನೋದು ಗೊತ್ತೇ ಇದೆ. ಆದರೆ ಏಳು ಚಿರಂಜೀವಿಗಳಲ್ಲಿ ಒಬ್ಬ ಅನ್ನೋದು ಕೂಡ ನಂಬಿಕೆ. ಅಶ್ವತ್ಥಾಮನಿಗೆ ಸಾವೇ ಇಲ್ಲ ಅನ್ನೋದು ಚಿರಂಜೀವಿಯ ಅರ್ಥ ಅಂತೇ ಹೇಳಬಹುದು.
‘ಈ ಕಥೆಯಲ್ಲಿ ಅಶ್ವತ್ಥಾಮ ವರ್ತಮಾನದಲ್ಲಿರುವ ನಾಯಕ. ಅಮರತ್ವದ ಪರಿಕಲ್ಪನೆಯನ್ನು ಶೋಧಿಸುವ ಕೆಲಸ ಆತನದ್ದು. ಇಷ್ಟನ್ನಷ್ಟೇ ಹೇಳಬಲ್ಲೆ. ಆದರೆ ಈ ಚಿತ್ರ ಅದ್ಭುತ ಆ್ಯಕ್ಷನ್ ಇರುವ, ಮತ್ತು ಎಲ್ಲಾ ತಲೆಮಾರಿನ ವೀಕ್ಷಕರನ್ನೂ ಸೆಳೆಯಬಲ್ಲ ಚಿತ್ರವಾಗಲಿದೆ. ಅಶ್ವತ್ಥಾಮನಂತೆ ಅಮರತ್ವ ಹೊಂದಿರುವ ವ್ಯಕ್ತಿಗಳನ್ನು ಚಿತ್ರದಲ್ಲಿ ತರುವ ಪ್ರಯತ್ನವೂ ಇರಲಿದೆ. ಕಾಲ್ಪನಿಕ ಸನ್ನಿವೇಶನಗಳ ಅನ್ವೇಷಣೆ ಹಾಗೂ ಅದರ ಸಾಧ್ಯತೆ ಕುರಿತು ಕಥೆ ರಚಿಸಿ, ಸಾಧ್ಯವಾಗಿಸುವುದು ಚಿತ್ರ ನಿರ್ದೇಶನಕಾಗಿ ಸವಾಲಿನ ಕೆಲಸ’. ‘ನನ್ನ ಬಾಲ್ಯದಿಂದಲೂ ಅಶ್ವತ್ಥಾಮನ ಪಾತ್ರ ನನ್ನ ಮೇಲೆ ಬಹಳಷ್ಟು ಪ್ರಭಾವ ಬೀರಿದೆ. ಈ ಪಾತ್ರದ ಬಗ್ಗೆಯೇ ಚಿತ್ರ ಮಾಡುವ ಯೋಜನೆ ಹೊಂದಿದ್ದೆ. ಕಡೆಗೂ ನನ್ನ ಕಲ್ಪನೆಯ ಚಿತ್ರ ಸೆಟ್ಟೇರುತ್ತಿದೆ ಎಂಬ ಸಂಭ್ರಮ ನನ್ನದು. ಈ ಚಿತ್ರದ ಹಲವು ಕುತೂಹಲಕರ ಅಂಶಗಳ ಕುರಿತು ಶಾಹೀದ್ ಕಪೂರ್ ಜತೆ ಬಹಳಷ್ಟು ಹೊತ್ತು ಕಳೆದಿದ್ದೇನೆ’ ಎಂದು ಚಿತ್ರದ ತಯಾರಿ ಕುರಿತು ತಮ್ಮ ಅನುಭವವನ್ನು ಸಚಿನ್ ರವಿ ಹಂಚಿಕೊಂಡರು.
ಅಶ್ವತ್ಥಾಮ ಚಿತ್ರವನ್ನು ಪೂಜಾ ಎಂಟರ್ನೈನ್ಮಂಟ್ ಕಂಪನಿ ನಿರ್ಮಾಣ ಮಾಡುತ್ತಿದೆ. ವಿಷ್ಣು ಭಗ್ನಾನಿ, ಜಾಕಿ ಭಗ್ನಾನಿ ಹಾಗೂ ದೀಪ್ತಿಕಾ ದೇಶಮುಖ್ ನಿರ್ಮಾಣ ಮಾಡುತ್ತಿದ್ದಾರೆ. ಹಲವು ವರ್ಷಗಳಿಂದ ರಕ್ಷಿತ್ ಶೆಟ್ಟಿ ತಂಡದಲ್ಲಿ ಸಚಿನ್ ಬಿ ರವಿ ಗುರ್ತಿಸಿಕೊಂಡಿದ್ದಾರೆ. ಸಂಕಲನಕಾರಾಗಿ, ಗ್ರಾಫಿಕ್ಸ್ ಪರಿಣಿತರಾಗಿ ಕೆಲಸ ನಿಭಾಯಿಸಿದ್ದಾರೆ. ‘ಅವನೇ ಶ್ರೀಮನ್ನಾರಾಯಣ’ ಚಿತ್ರಕ್ಕಾಗಿ ಡೈರೆಕ್ಟರ್ ಕ್ಯಾಪ್ ತೊಟ್ಟಿದ್ದರು. ಇದೀಗ ಬಾಲಿವುಡ್ ಕಡೆ ಮುಖ ಮಾಡಿದ್ದಾರೆ. ‘ಫ್ಯಾಂಟಸಿ ಅಡ್ವೆಂಚರಸ್’ ಡ್ರಾಮಾ ‘ಅವನೇ ಶ್ರೀಮನ್ನಾರಾಯಣ’ ಸಿನಿಮಾ ನಿರ್ದೇಶಕರ ಪ್ರತಿಭೆಗೆ ಹಿಡಿದ ಕನ್ನಡಿ. ಈಗ ಸಚಿನ್ ಅಶ್ವತ್ಥಾಮನ ಮೂಲಕ ಪೌರಾಣಿಕ ಕಥೆ ಹರವಿಡಲಿದ್ದಾರೆ.
ಇದನ್ನೂ ಓದಿ : ಆರ್‌ಸಿಬಿ ಹೆಸರು, ಜರ್ಸಿ ಚೇಂಜ್ – ಇದು “ಆರ್‌ಸಿಬಿ”ಯ ಹೊಸ ಅಧ್ಯಾಯ ಎಂದು ಕನ್ನಡದಲ್ಲೇ ಖಡಕ್ ಸೂಚನೆ ನೀಡಿದ ಕಿಂಗ್ ಕೊಹ್ಲಿ…!