ಕನ್ನಡ ಚಿತ್ರರಂಗವನ್ನು ಇಡೀ ದೇಶವೇ ತಿರುಗಿ ನೋಡುವಂತೆ ಮಾಡಿದ ಕೆಜಿಎಫ್ ಸಿನಿಮಾದ ರಾಕಿಭಾಯ್ ಹಾಗೂ ಅಭಿಮಾನಿಗಳ ರಾಕಿಂಗ್ ಸ್ಟಾರ್ ಯಶ್ಗೆ ಇಂದು ಹುಟ್ಟುಹಬ್ಬದ ಸಂಭ್ರಮ. ಕನ್ನಡ ಹೆಮ್ಮೆಯ ನಟ ಯಶ್ 39ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಸೀರಿಯಲ್ಗಳಲ್ಲಿ ಸಣ್ಣ-ಪುಟ್ಟ ಪಾತ್ರಗಳನ್ನು ಮಾಡ್ತಾ ಬಣ್ಣದ ಬದುಕಿಗೆ ಕಾಲಿಟ್ಟ ಯಶ್, ಇಂದು ಯಶಸ್ಸಿನ ಶಿಖರವೇರಿದ್ದಾರೆ. ಕನ್ನಡ ಚಿತ್ರರಂಗಕ್ಕಷ್ಟೇ ಗೊತ್ತಿದ್ದ ರಾಕಿಂಗ್ ಸ್ಟಾರ್ ಈಗ ನ್ಯಾಷನಲ್ ಸ್ಟಾರ್ ಆಗಿ ಮಿಂಚುತ್ತಿದ್ದಾರೆ.
39ನೇ ವಸಂತಕ್ಕೆ ಕಾಲಿಟ್ಟ ನ್ಯಾಷನಲ್ ಸ್ಟಾರ್ ಯಶ್ ಅವರು ಈ ವರ್ಷ ತಮ್ಮ ಹುಟ್ಟುಹಬ್ಬವನ್ನು ತುಂಬಾ ಸಿಂಪಲ್ ಆಗಿ ಸೆಲೆಬ್ರೆಟ್ ಮಾಡಿಕೊಂಡಿದ್ದಾರೆ. ಫ್ಯಾಮಿಲಿ ಹಾಗೂ ಫ್ರೆಂಡ್ಸ್ ಜೊತೆ ಗೋವಾದಲ್ಲಿ ಬರ್ತಡೇ ಆಚರಿಸಿಕೊಂಡಿದ್ದಾರೆ. ಸದ್ಯ ಈ ಪೋಟಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗುತ್ತಿದೆ.
ಇನ್ನು ಇಂದು ಯಶ್ ಬರ್ತಡೇ ಸ್ಪೆಷಲ್ ಆಗಿ ಅಭಿಮಾನಿಗಳಿಗೆ ಭರ್ಜರಿ ಗಿಫ್ಟ್ ಸಿಗಲಿದೆ. ಹೌದು.. ಬೆಳಗ್ಗೆ 10:25ಕ್ಕೆ ಯಶ್ ಅಭಿನಯದ ಬಹುನಿರೀಕ್ಷಿತ ‘ಟಾಕ್ಸಿಕ್’ ಸಿನಿಮಾದ ಬಿಗ್ ಅಪ್‌ಡೇಟ್ ಹೊರಬೀಳಲಿದೆ. ಯಶ್ ಕೂಡ ಇದೇ ಮಾಹಿತಿಯನ್ನು ಇತ್ತೀಚೆಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಅಭಿಮಾನಿಗಳು ಕಾದು ಕುಳಿತಿದ್ದಾರೆ.
ಇನ್ನೂ ಜ.8ರಂದು ಬೆಂಗಳೂರಿನಲ್ಲಿ ಇರುವುದಿಲ್ಲ ಬರ್ತ್‌ಡೇ ಆಚರಣೆ ಮಾಡಲ್ಲ ಎಂದು ಅಭಿಮಾನಿಗಳಿಗೆ ಯಶ್ ಈಗಾಗಲೇ ಮಾಹಿತಿ ನೀಡಿದ್ದಾರೆ. ‘ಪ್ರೀತಿಯ ಅಭಿಮಾನಿಗಳಿಗೆ ನಮಸ್ಕಾರ, ನಿಮ್ಮ ಅಭಿಮಾನದ ಅಪ್ಪುಗೆ ಮತ್ತೊಂದು ವರ್ಷವನ್ನು ಸಾರ್ಥಕಗೊಳಿಸಿದೆ. ಹೊಸ ವರ್ಷ ಹೊಸ ಭರವಸೆಗಳೊಂದಿಗೆ ನಗುನಗುತ್ತಾ ಬದುಕೋಣ. ಬದುಕನ್ನು ಮೆರಗುಗೊಳಿಸುವಂತಹ ಹೊಸ ಯೋಜನೆಗಳೊಂದಿಗೆ ಹೊಸ ವರ್ಷವನ್ನು ಸ್ವಾಗತಿಸೋಣ ಎಂದು ಯಶ್ ಸೋಶಿಯಲ್ ಮೀಡಿಯಾದಲ್ಲಿ ತಿಳಿಸಿದ್ದರು.
ಸಿನಿಮಾ ಕೆಲಸದ ನಿಮಿತ್ತ ನಾನು ಹುಟ್ಟುಹಬ್ಬದಂದು (ಜ.8) ಊರಿನಲ್ಲಿ ಇರುವುದಿಲ್ಲ. ನನ್ನ ಹುಟ್ಟುಹಬ್ಬಕ್ಕೆ ನೀವು ತೋರುವ ಅಭಿಮಾನ ಜವಾಬ್ದಾರಿಯುತವಾಗಿರಲಿ ಎಂಬುದು ನನ್ನ ಪ್ರೀತಿಯ ಮನವಿ. ಹಾಗಾಗಿ ಪ್ಲೆಕ್ಸ್, ಬ್ಯಾನರ್‌ಗಳ ಯಾವುದೇ ಆಡಂಬರ ಮಾಡದೆ ನನ್ನ ಮನಸ್ಸಿಗೆ ನೋವಾಗುವ ನಡವಳಿಕೆ ತೋರದೆ, ನೀವು ಇದ್ದಲ್ಲಿಂದಲೇ ನಿಮ್ಮ ಕುಟುಂಬದವರು ಹೆಮ್ಮೆಪಡುವ ಕೆಲಸ ನಿಮ್ಮಿಂದ ಆದರೆ ಅದಕ್ಕಿಂತ ದೊಡ್ಡ ಜನ್ಮದಿನದ ಉಡುಗೊರೆ ನನಗೆ ಮತ್ತೊಂದು ಇಲ್ಲ ಎಂದಿದ್ದಾರೆ. ಆದಷ್ಟು ಬೇಗ ನಿಮ್ಮನ್ನೆಲ್ಲಾ ಭೇಟಿ ಆಗುತ್ತೇನೆ. ಎಲ್ಲರಿಗೂ ಹೊಸ ವರ್ಷ ಒಳಿತನ್ನು ತರಲಿ. ನಿಮ್ಮ ಪ್ರೀತಿಯ ಯಶ್ ಎಂದು ಬರೆದಿದ್ದರು.
ಇದನ್ನೂ ಓದಿ : ರೇಸಿಂಗ್ ಅಭ್ಯಾಸದ ವೇಳೆ ನಟ ಅಜಿತ್ ಕಾರು ಭೀಕರ ಅಪಘಾತ – ಭಯಾನಕ ದೃಶ್ಯ ಸೆರೆ!