ರಾಜ್ಯದ ಹಲವು ಜಿಲ್ಲೆಗಳಲ್ಲಿ ಈ ವರ್ಷ ಭರ್ಜರಿ ಮಳೆಯಾಗುತ್ತಿದ್ದು, ಕರಾವಳಿ ಜಿಲ್ಲೆಗಳಾದ ಉಡುಪಿ ಮತ್ತು ದಕ್ಷಿಣ ಕನ್ನಡದಲ್ಲಿ ಎಡ ಬಿಡದೆ ಮಳೆ ಸುರಿಯುತ್ತಿದೆ. ಇಂದು ಕೂಡ ಧಾರಾಕಾರ ಮಳೆಯಾಗುವ ಸಾಧ್ಯತೆ ಇದ್ದು, ಹವಾಮಾನ ಇಲಾಖೆ ರೆಡ್ ಅಲರ್ಟ್ ಘೋಷಿಸಿದೆ. ಈ ಹಿನ್ನೆಲೆಯಲ್ಲಿ ಉಡುಪಿ ಹಾಗೂ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಅಂಗನವಾಡಿ, ಸರಕಾರಿ, ಅನುದಾನಿತ ಹಾಗೂ ಖಾಸಗಿ ಪ್ರಾಥಮಿಕ ಮತ್ತು ಪ್ರೌಢ ಶಾಲೆ, ಪದವಿ ಪೂರ್ವ ಕಾಲೇಜುಗಳಿಗೆ ಉಭಯ ಜಿಲ್ಲೆಗಳ ಜಿಲ್ಲಾಧಿಕಾರಿಗಳು ರಜೆ ಘೋಷಿಸಿದ್ದಾರೆ.
ಉಡುಪಿ ಜಿಲ್ಲೆಯಾದ್ಯಂತ ಕಳೆದ 4 ದಿನಗಳಿಂದ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಜಿಲ್ಲೆಯ ಎಲ್ಲ ಅಂಗನವಾಡಿ ಕೇಂದ್ರಗಳು, ಪ್ರಾಥಮಿಕ, ಪ್ರೌಢಶಾಲೆ ಹಾಗೂ ಪದವಿ ಪೂರ್ವ ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪದವಿ, ಸ್ನಾತಕೋತ್ತರ ಪದವಿ, ಡಿಪ್ಲೊಮಾ, ಎಂಜಿನಿಯರಿಂಗ್ ಹಾಗೂ ಐಟಿಐಗಳಿಗೆ ರಜೆ ಇರುವುದಿಲ್ಲ. ಪ್ರಾಕೃತಿಕ ವಿಕೋಪಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿಗೆ ಟೋಲ್ ಫ್ರೀ ಸಂಖ್ಯೆ 24*7 ಕಂಟ್ರೋಲ್ ರೂಂ. 1077 ಹಾಗೂ 0820-2574802 ಸಂಪರ್ಕಿಸುವಂತೆ ಹೆಚ್ಚುವರಿ ಜಿಲ್ಲಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
ಉತ್ತರ ಕನ್ನಡ ಜಿಲ್ಲೆಯಲ್ಲಿಯೂ ವ್ಯಾಪಕ ಮಳೆ ಹಿನ್ನಲೆ ಕುಮಟಾ ಹಾಗೂ ಹೊನ್ನಾವರ ತಾಲೂಕಿನ ಶಾಲಾ ಕಾಲೇಜುಗಳಿಗೆ ಮಾತ್ರ ರಜೆ ಘೋಷಣೆ ಮಾಡಲಾಗಿದೆ. ಈ ಎರಡು ತಾಲೂಕುಗಳಲ್ಲಿ ಮಳೆಯ ಅಬ್ಬರ ಮುಂದುವರೆದ ಹಿನ್ನೆಲೆ ರಜೆ ಘೋಷಣೆ ಮಾಡಲಾಗಿದೆ. ಮಂಗಳವಾರ ಮಾತ್ರವಲ್ಲ, ಮುಂದಿನ ಐದು ದಿನಗಳವರೆಗೂ ಕೂಡ ಭಾರೀ ಗಾಳಿಸಹಿತ ಮಳೆಯಾಗಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.
ಒಟ್ಟಿನಲ್ಲಿ ರಾಜ್ಯದಲ್ಲಿ ಮಳೆರಾಯನ ಆರ್ಭಟ ಮುಂದುವರಿದಿದ್ದು, ಜಲಾಯಶಗಳು, ಜಲಪಾತಗಳಿಗೆ ಜೀವ ಕಳೆ ಬಂದಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಭಾರೀ ಮಳೆಯಾಗುವ ಮುನ್ಸೂಚನೆ ಇದ್ದು, ಜನರೂ ಕೂಡ ಎಚ್ಚರಿಕೆಯಿಂದ ಇರಬೇಕು ಎಂದು ಹವಮಾನ ಇಲಾಖೆ ಸೂಚಿಸಿದೆ.
ಇದನ್ನೂ ಓದಿ : “ಮುದುಡಿದ ಎಲೆಗಳು” ಚಿತ್ರದ ಮೂಲಕ ಸ್ಯಾಂಡಲ್ವುಡ್ಗೆ ಎಂಟ್ರಿ ಕೊಟ್ಟ ಬಾಲಿವುಡ್ ಬ್ಯೂಟಿ ಅಪ್ಸರ ರಾಣಿ..!