ಪ್ರತಿಭಾನ್ವಿತ ಕಿರುತೆರೆ ನಟಿ ಪವಿತ್ರ ಜಯರಾಮ್ ಭೀಕರ ಕಾರು ಅಪಘಾತದಲ್ಲಿ ಸಾವನಪ್ಪಿದ್ದು, ನಿನ್ನೆ (ಮೇ 13) ಅವರ ಸ್ವಗ್ರಾಮದವಾದ ಮಂಡ್ಯದ ಉಮ್ಮಡಹಳ್ಳಿಯ ಜಮೀನಿನಲ್ಲಿ ಒಕ್ಕಲಿಗ ಸಂಪ್ರದಾಯದಂತೆ ಅವರ ಅಂತ್ಯಕ್ರಿಯೆ ನೆರವೇರಿಸಲಾಯಿತು. ಕನ್ನಡ, ತೆಲುಗು ಭಾಷೆಗಳ ಹಲವು ಧಾರಾವಾಹಿಗಳಲ್ಲಿ ತಮ್ಮ ನಟನೆಯ ಮೂಲಕ ಪ್ರೇಕ್ಷಕರಿಂದ ಸೈ ಎನ್ನಿಸಿಕೊಂಡಿದ್ದ ಪವಿತ್ರ ಜಯರಾಮ್ ಅವರು ಕಾರು ಅಪಘಾತದಲ್ಲಿ ನಿಧನರಾಗಿದ್ದು ಅಭಿಮಾನಿಗಳಿಗೆ ಬೇಸರ ತಂದಿದೆ.
ಪವಿತ್ರ ಜಯರಾಮ್ ಅವರು ಬೆಂಗಳೂರಿನಿಂದ ಹೈದರಾಬಾದ್‌ಗೆ ಮೇ 11 ರಂದು ಕಾರಿನಲ್ಲಿ ಪ್ರಯಾಣ ಮಾಡ್ತಾ ಇದ್ದರು. ಈ ವೇಳೆ ಕಾರು ಕರ್ನೂಲು ಬಳಿ ಅಪಘಾತವಾಗಿತ್ತು. ಆಗ ಕಾರಿನಲ್ಲಿ ಇದ್ದ ಎಲ್ಲರಿಗೂ ಪೆಟ್ಟುಬಿದ್ದಿದೆ. ಪವಿತ್ರ ಅವರು ಪ್ರಜ್ಞಾಹೀನ ಸ್ಥಿತಿಗೆ ತಲುಪಿದ್ದರು. ಆಂಬುಲೆನ್ಸ್ ಬರುವುದು ಸಹ 15-20 ನಿಮಿಷ ತಡವಾಗಿತ್ತು. ಬಳಿಕ ಆಸ್ಪತ್ರೆಗೆ ಕರೆದೊಯ್ದಾಗ ಬ್ರೈನ್ ಸ್ಟ್ರೋಕ್ ಆಗಿ ಪವಿತ್ರ ಜಯರಾಮ್ ಮೃತಪಟ್ಟಿದ್ದರು. ಅಪಘಾತದಲ್ಲಿ ಗಾಯಗೊಂಡಿದ್ದವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು.
ನಿನ್ನೆ ಪವಿತ್ರ ಜಯರಾಮ್ ಅಂತ್ಯಕ್ರಿಯೆ ಬಳಿಕ ಆಕೆ ಕೊನೆಯುಸಿರೆಳೆಯಲು ಕಾರಣ ಏನು ಎನ್ನುವುದನ್ನು ಅಪಘಾತವಾದಾಗ ಜೊತೆಗಿದ್ದ ಚಂದ್ರಕಾಂತ್ ವಿವರಿಸಿದ್ದಾರೆ. “ನಿಜ ಹೇಳಬೇಕು ಅಂದ್ರೆ ಅಪಘಾತದಲ್ಲಿ ಯಾರೊಬ್ಬರು ಗಂಭೀರವಾಗಿ ಗಾಯಗೊಂಡಿಲ್ಲ. ನನಗೆ ಮಾತ್ರ ಕೊಂಚ ಪೆಟ್ಟಾಗಿದೆ. ನನ್ನ ಮೈಯಿಂದ ರಕ್ತ ಸೋರುತ್ತಿತ್ತು. ಅದನ್ನು ನೋಡಿ ನಟಿ ಪವಿತ್ರ ಶಾಕ್ ಆಗಿದ್ದರು. ಹಾಗಾಗಿ ಸಡನ್ ಸ್ಟ್ರೋಕ್‌ನಿಂದ ಅವರು ಮೃತಪಟ್ಟಿದ್ದಾರೆ. ವೈದ್ಯರು ಸಹ ಇದನ್ನೇ ಹೇಳಿದ್ದಾರೆ ಎಂದು ವಿವರಿಸಿದ್ದಾರೆ.
ಇನ್ನು, “ಪವಿತ್ರ ಕನ್ನಡದಲ್ಲಿ ನಟ ದರ್ಶನ್ ಜೊತೆ ಸಿನಿಮಾದಲ್ಲಿ ನಟಿಸಲು ಒಪ್ಪಂದಕ್ಕೆ ಸಹಿ ಮಾಡಲು ಬೆಂಗಳೂರಿಗೆ ಬಂದಿದ್ದೆವು. ಮೇ 25, 26ಕ್ಕೆ ಚಿತ್ರೀಕರಣದಲ್ಲಿ ಆಕೆ ಭಾಗಿ ಆಗಬೇಕಿತ್ತು. ಅದೇ ಸಮಯದಲ್ಲಿ ತೆಲುಗಿನ ಜೆಮಿನಿ ವಾಹಿನಿ ಕಾರ್ಯಕ್ರಮದ ಒಪ್ಪಂದಕ್ಕೆ ಸಹಿ ಮಾಡಲು ಕರೆ ಬಂತು. ಅಲ್ಲಿಗೆ ಹೋಗಿ ಬರೋಣ ಎಂದು ಹೊರಟಾಗ ಈ ಘಟನೆ ನಡೀತು” ಎಂದಿದ್ದಾರೆ.
“ಅಪಘಾತದ ಬಳಿಕ ಆಕೆ ಇನ್ನು ಉಸಿರಾಡುತ್ತಲೇ ಇದ್ದಳು. ಆದರೆ ಸರಿಯಾದ ಸಮಯಕ್ಕೆ ಆಂಬ್ಯುಲೆನ್ಸ್ ಸಿಗಲಿಲ್ಲ. ಅದು ನಿರ್ಜನ ಪ್ರದೇಶ. ರಾತ್ರಿ 1 ಗಂಟೆ ಸುಮಾರಿಗೆ ಸುತ್ತಾಮುತ್ತಾ ಯಾರು ಇರಲಿಲ್ಲ. ನನ್ನನ್ನು ನೋಡಿ ಭಯಗೊಂಡು ಆಕೆ ಶಾಕ್ ಆಗಿರಬಹುದು. ಮುಂದೆ ಇದ್ದವರಿಗೆ ಬಲೂನ್ ಓಪನ್ ಆಗಿ ಬಚಾವಾಗಿದ್ದಾರೆ. ನನಗೆ ಮಾತ್ರ ಗಂಭೀರ ಪೆಟ್ಟಾಯಿತು” ಎಂದು ಮಾಹಿತಿ ನೀಡಿದ್ದಾರೆ. ಕನ್ನಡದಲ್ಲಿ ‘ಜೋಕಾಲಿ’, ‘ನೀಲಿ’, ‘ರಾಧಾರಮಣ’ ಎನ್ನುವ ಧಾರಾವಾಹಿಗಳಲ್ಲಿ ಪವಿತ್ರ ನಟಿಸಿದ್ದರು. ತೆಲುಗಿನ ‘ತ್ರಿನಯನಿ’ ಧಾರಾವಾಹಿ ಅಲ್ಲಿ ಹೆಚ್ಚು ಜನಪ್ರಿಯತೆ ತಂದುಕೊಟ್ಟಿತ್ತು. ದರ್ಶನ್ ನಟನೆಯ ‘ಡೆವಿಲ್’ ಚಿತ್ರದಲ್ಲಿ ಆಕೆ ನಟಿಸಬೇಕಿತ್ತು ಎನ್ನಲಾಗ್ತಿದೆ.
ಇದನ್ನೂ ಓದಿ : ಬೆಂಗಳೂರು : ಮನೆ ಪಕ್ಕದಲ್ಲಿ ಕಸ ಹಾಕ್ಬೇಡಿ ಎಂದಿದ್ದಕ್ಕೆ ಹ*ಲ್ಲೆ – ದೃಶ್ಯ ಸಿಸಿಟಿವಿಯಲ್ಲಿ ಸೆರೆ..!