ಶಿವಮೊಗ್ಗ : ಲೋಕಸಭಾ ಚುನಾವಣೆಗೆ ಮುಹೂರ್ತ ನಿಗದಿ ಆಗ್ತಿದ್ದಂತೆ ದಕ್ಷಿಣದಿಂದಲೇ ಮೋದಿ ದಂಡ ಯಾತ್ರೆ ಆರಂಭವಾಗಿದೆ. ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಅತಿ ಹೆಚ್ಚು ಸ್ಥಾನಗಳನ್ನು ಗೆಲ್ಲುವ ಗುರಿಯೊಂದಿಗೆ ರಾಜ್ಯಕ್ಕೆ ಆಗಮಿಸುತ್ತಿರುವ ಪ್ರಧಾನಿ ನರೇಂದ್ರ ಮೋದಿ, ಇಂದು ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಅವರ ತವರು ಶಿವಮೊಗ್ಗದಲ್ಲಿ ಬಿಜೆಪಿ ಕಾರ್ಯಕರ್ತರ ಬೃಹತ್ ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ.
ಲೋಕಸಭಾ ಚುನಾವಣಾ ಡೇಟ್ ಅನೌನ್ಸ್ ಆದ ಬಳಿಕ ರಾಜ್ಯದಲ್ಲಿ ಮೋದಿಯವರ ಎರಡನೇ ಪ್ರಚಾರ ಸಭೆ ಇದಾಗಿದೆ. ಶನಿವಾರದ ಕಲಬುರಗಿ ಸಮಾವೇಶದ ಬಳಿಕ ಇಂದು ಶಿವಮೊಗ್ಗದಲ್ಲಿ ಕಾರ್ಯಕ್ರಮ ನಡೆಯುತ್ತಿದ್ದು, ಬಿಜೆಪಿ ಚುನಾವಣಾ ಪ್ರಚಾರಕ್ಕೆ ಭರ್ಜರಿ ಚಾಲನೆ ನೀಡಿದೆ.
ನಗರದ ಅಲ್ಲಮಪ್ರಭು ಮೈದಾನದಲ್ಲಿ ಮಧ್ಯಾಹ್ನ 1.15ಕ್ಕೆ ಸಮಾವೇಶ ನಡೆಯಲಿದ್ದು, ಕಾರ್ಯಕ್ರಮಕ್ಕಾಗಿ ಬಿಜೆಪಿ ಧ್ವಜದ (ಕೇಸರಿ) ಬಣ್ಣದ ಹಿನ್ನೆಲೆಯಲ್ಲಿ ಬೃಹತ್ ವೇದಿಕೆ ನಿರ್ಮಿಸಲಾಗಿದೆ. ವೇದಿಕೆಯ ಎರಡೂ ಬದಿಯಲ್ಲಿ ಮೆಟಲ್ ಡಿಟೆಕ್ಟರ್ ಅಳವಡಿಸಲಾಗಿದ್ದು, ವೇದಿಕೆ ಹಿಂಭಾಗ ಮತ್ತು ಅಕ್ಕಪಕ್ಕದಲ್ಲಿ ತಾತ್ಕಾಲಿಕ ಕೊಠಡಿಗಳನ್ನು ಸ್ಥಾಪಿಸಲಾಗಿದೆ. ವೇದಿಕೆ ಮುಂಭಾಗ ಬೃಹತ್ ಪೆಂಡಾಲ್ ಹಾಕಲಾಗಿದ್ದು, ಸುಮಾರು 1 ಲಕ್ಷಕ್ಕೂ ಹೆಚ್ಚು ಕುರ್ಚಿಗಳನ್ನು ಹಾಕಲಾಗಿದೆ. ಸಮಾವೇಶದಲ್ಲಿ ಅಂದಾಜು 2 ಲಕ್ಷಕ್ಕೂ ಹೆಚ್ಚು ಜನ ಭಾಗವಹಿಸುವ ನಿರೀಕ್ಷೆ ಇದೆ ಎಂದು ಹೇಳಲಾಗಿದೆ. 5 ಲೋಕಸಭಾ ಕ್ಷೇತ್ರಗಳ ಸಂಸದರು, ಶಾಸಕರು, ಕಾರ್ಯಕರ್ತರು ಸಮಾವೇಶದಲ್ಲಿ ಪಾಲ್ಗೊಳ್ಳಲಿದ್ದಾರೆ.
ಇನ್ನು, ಪ್ರಧಾನ ಮೋದಿಯ ಭದ್ರತಾ ಪಡೆ ಸ್ಪೆಷಲ್ ಪ್ರೊಟೆಕ್ಷನ್ ಗ್ರೂಪ್ (ಎಸ್‌ಪಿಜಿ) ಈಗಾಗಲೇ ವೇದಿಕೆ ಬಳಿ ಆಗಮಿಸಿದೆ. ಅಲ್ಲಮಪ್ರಭು ಮೈದಾನವನ್ನು ಎಸ್‌ಪಿಜಿ ಕಮಾಂಡೊಗಳು ತಮ್ಮ ಸುಪರ್ದಿಗೆ ಪಡೆದುಕೊಂಡಿದ್ದಾರೆ. ಮೈದಾನದ ಒಳ, ಹೊರಗೆ ಹೋಗುವ ಪ್ರತಿಯೊಬ್ಬರ ಮೇಲೂ ನಿಗಾ ವಹಿಸಿದ್ದಾರೆ.
ಮೂರನೇ ಬಾರಿ ಶಿವಮೊಗ್ಗಕ್ಕೆ ಮೋದಿ ಬರುತ್ತಿದ್ದು, ಶಿವಮೊಗ್ಗ ವಿಮಾನ ನಿಲ್ದಾಣದಿಂದ ಸುಮಾರು 10km ದೂರದ ರಸ್ತೆ ಮಾರ್ಗವಾಗಿ ಫ್ರೀಡಂಪಾರ್ಕ್ ತಲುಪಲಿದ್ದಾರೆ. ಬಳಿಕ ಒಂದೂವರೆ ಗಂಟೆಗಳ ಕಾಲ ಚುನಾವಣಾ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ತೆರಳಲಿದ್ದಾರೆ. ಸಂಜೆ 4ಕ್ಕೆ ತಮಿಳುನಾಡಿನ ಕೊಯಮತ್ತೂರು ಕಾರ್ಯಕ್ರಮದಲ್ಲಿ ಮೋದಿ ಭಾಗಿ ಆಗಲಿದ್ದಾರೆ.
ಇದನ್ನೂ ಓದಿ : ಮುಂದಿನ 3 ದಿನಗಳಲ್ಲಿ ರಾಜ್ಯದ 12ಕ್ಕೂ ಅಧಿಕ ಜಿಲ್ಲೆಗಳಲ್ಲಿ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ..!